ನೀವು ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಸ್ವೀಕರಿಸುತ್ತಾರಾ? ಅರವಿಂದ್ ಕೇಜ್ರಿವಾಲ್ ನೀಡಿದ ಉತ್ತರವಿದು

|

Updated on: May 23, 2024 | 4:06 PM

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂಡಿಯ ಒಕ್ಕೂಟ ಗೆಲುವು ಸಾಧಿಸಿದರೆ ನಂತರ ಎಲ್ಲರೂ ಕುಳಿತು ಚರ್ಚಿಸಿ, ಪ್ರಧಾನ ಮಂತ್ರಿಯ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದೀಗ ಇಂಡಿಯ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯ ಬಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ಸ್ವೀಕರಿಸುತ್ತಾರಾ? ಅರವಿಂದ್ ಕೇಜ್ರಿವಾಲ್ ನೀಡಿದ ಉತ್ತರವಿದು
ಅರವಿಂದ್ ಕೇಜ್ರಿವಾಲ್
Follow us on

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯ ಬಣ (INDIA) ಗೆದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಮುಂದಿನ ಪ್ರಧಾನಿಯಾಗಬಹುದು ಎಂಬ ಊಹಾಪೋಹಗಳು ಎದ್ದಿದ್ದವು. ಈ ಕುರಿತು ಅರವಿಂದ್ ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದಾರೆ. ನನಗೆ ಪ್ರಧಾನಿಯಾಗಬೇಕೆಂಬ ಯಾವುದೇ ಉದ್ದೇಶವಿಲ್ಲ. ಆದರೆ, ಮೋದಿ (Narendra Modi) ನೇತೃತ್ವದ ಬಿಜೆಪಿಯನ್ನು ಅಧಿಕಾರಕ್ಕೇರುವುದರಿಂದ ಹೊರಗಿಡಬೇಕೆಂಬುದು ಮಾತ್ರ ಇಂಡಿಯ ಒಕ್ಕೂಟದ ಉದ್ದೇಶ ಎಂದಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಪ್ರಶ್ನೆಗಳನ್ನು ಬದಿಗಿಟ್ಟಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಇಂಡಿಯ ಬಣವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಯಾವುದೇ ಚರ್ಚೆ ನಡೆದಿಲ್ಲ ಮತ್ತು ಚುನಾವಣಾ ಫಲಿತಾಂಶದ ನಂತರ ಇಂಡಿಯಾ ಬ್ಲಾಕ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಜ್ರಿವಾಲ್ ಮನೆಯ ಸ್ವಾತಿ ಮಲಿವಾಲ್ ಮತ್ತೊಂದು ವಿಡಿಯೋ ರಿಲೀಸ್; ನಿಜಕ್ಕೂ ಆ ದಿನ ನಡೆದಿದ್ದೇನು?

ಅರವಿಂದ್ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಎಎಪಿ ಸಣ್ಣ ಪಕ್ಷವಾಗಿದ್ದು, ಕೇವಲ 22 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ನಾನು ಪ್ರಧಾನಿಯಾಗುವ ಸಾಧ್ಯತೆಗಳು ದೂರವಿದೆ ಎಂದಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಇಂಡಿಯ ಬ್ಲಾಕ್ ಗೆದ್ದರೆ ಮುಂದಿನ ಪ್ರಧಾನಿಯಾಗುವ ಯಾವುದೇ ಉದ್ದೇಶ ನನಗಿಲ್ಲ. ನಮ್ಮ ರಾಷ್ಟ್ರವನ್ನು “ಸರ್ವಾಧಿಕಾರ”ದಿಂದ ರಕ್ಷಿಸುವುದು ನನ್ನ ಗುರಿಯಾಗಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಲಾಗುತ್ತದೆ. ಹೀಗಾಗಿ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಅವರು ಹೇಳಿದ್ದಾರೆ.

“ಈ ಚುನಾವಣೆಗಳು ದೇಶ ಮತ್ತು ಪ್ರಜಾಪ್ರಭುತ್ವವನ್ನು ಚಾಲ್ತಿಯಲ್ಲಿರುವ ಸರ್ವಾಧಿಕಾರದಿಂದ ರಕ್ಷಿಸಲು ಇವೆ. ಆದರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವವನ್ನು ಮುಗಿಸುತ್ತಾರೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯಿಂದ ನೋಟಿಸ್ ಜಾರಿ: ಪಕ್ಷದಿಂದ ಉಚ್ಛಾಟನೆಯಾಗ್ತಾರಾ ರಘುಪತಿ ಭಟ್?

ಇನ್ನೊಂದೆಡೆ ಬಿಜೆಪಿಯು ತನ್ನ ಪ್ರತಿಸ್ಪರ್ಧಿಯಾಗಿ ವಿರೋಧ ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯನ್ನೇ ಇನ್ನೂ ಅಂತಿಮಗೊಳಿಸಿಲ್ಲ ಎಂದು ಅಪಹಾಸ್ಯ ಮಾಡುತ್ತಿದೆ. ಇದು ಮೈತ್ರಿಕೂಟದಲ್ಲಿನ ಹೊಂದಾಣಿಕೆಯಾಗದ ರಾಜಕೀಯ ಸಿದ್ಧಾಂತಗಳನ್ನು ಪ್ರತಿಬಿಂಬಿಸುವ ನಿರಂತರ ಬಿರುಕುಗಳನ್ನು ಒತ್ತಿಹೇಳುತ್ತದೆ ಎಂದು ಹೇಳಿಕೊಂಡಿದೆ.

ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಘಟಾಲ್‌ನಲ್ಲಿ ಪ್ರಚಾರ ಮಾಡುವಾಗ ಪ್ರತಿಪಕ್ಷಗಳನ್ನು ಟೀಕಿಸಿದ್ದು, ಅವರು ಪ್ರಧಾನಿ ಅಭ್ಯರ್ಥಿಯನ್ನು ಹೆಸರಿಸಲು ವಿಫಲರಾಗಿದ್ದಾರೆ. ಏಕೆಂದರೆ ಅವರಲ್ಲಿ ಯಾರೂ ಪ್ರಧಾನಿಯಾಗುವ ಸಾಮರ್ಥ್ಯದ ನಾಯಕರಿಲ್ಲ ಎಂದು ಹೇಳಿದ್ದರು. “INDI ಮೈತ್ರಿಕೂಟಕ್ಕೆ ಯಾವುದೇ ನಾಯಕರಿಲ್ಲ. INDI ಮೈತ್ರಿಕೂಟವು 5 ವರ್ಷಗಳಲ್ಲಿ 5 ಪ್ರಧಾನಿಗಳನ್ನು ಬಯಸುತ್ತದೆ. INDI ಮೈತ್ರಿಕೂಟಗಳಿಗೆ ಸರಿಯಾದ ನಾಯಕರಿಲ್ಲ. ಅವರಿಗೆ ರಾಷ್ಟ್ರದ ಅಭಿವೃದ್ಧಿಗೆ ಯಾವುದೇ ಉದ್ದೇಶವಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ