ಕೇಜ್ರಿವಾಲ್ ಮನೆಯ ಸ್ವಾತಿ ಮಲಿವಾಲ್ ಮತ್ತೊಂದು ವಿಡಿಯೋ ರಿಲೀಸ್; ನಿಜಕ್ಕೂ ಆ ದಿನ ನಡೆದಿದ್ದೇನು?
Swati Maliwal Video: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ತಮ್ಮದೇ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲು ಹೋಗಿದ್ದಾಗ ನನ್ನ ಮೇಲೆ ಅವರ ಸಹಾಯಕ ಹಲ್ಲೆ ನಡೆಸಿ, ಬಟ್ಟೆಯನ್ನು ಎಳೆದಾಡಿ, ಎದೆಗೆ ಒದ್ದಿದ್ದಾನೆ ಎಂದು ಹೇಳಿಕೆ ನೀಡಿದ್ದರು. ಇಂದು ಆಮ್ ಆದ್ಮಿ ಪಕ್ಷ ಸ್ವಾತಿ ಮಲಿವಾಲ್ ಅವರ ಮತ್ತೊಂದು ವಿಡಿಯೋ ರಿಲೀಸ್ ಮಾಡಿದೆ.
ನವದೆಹಲಿ: ಆಮ್ ಆದ್ಮಿ ಪಕ್ಷ (AAP) ಇಂದು (ಶನಿವಾರ) ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಅವರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿವಾಸದಿಂದ ಮಹಿಳಾ ಭದ್ರತಾ ಅಧಿಕಾರಿಯೊಬ್ಬರು ಮೇ 13ರಂದು ಹೊರಗೆ ಕರೆದೊಯ್ಯುವ ಹೊಸ ಸಿಸಿಟಿವಿ ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿದರೆ ಸ್ವಾತಿ ಮಲಿವಾಲ್ ಮಾಡುತ್ತಿರುವ ಆರೋಪ ಎಷ್ಟರ ಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿದೆ ಎಂಬುದು ತಿಳಿಯುತ್ತದೆ ಎಂದು ಆಪ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ನನ್ನು ಇಂದು ಬಂಧಿಸಿದ ಬೆನ್ನಲ್ಲೇ ಆಪ್ ಈ ವಿಡಿಯೋ ಬಿಡುಗಡೆ ಮಾಡಿದೆ.
ಸಿಸಿಟಿವಿ ವಿಡಿಯೋದಲ್ಲೇನಿದೆ?:
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗಿನ ಎರಡು ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಆಪ್ ರಿಲೀಸ್ ಮಾಡಿದೆ. ಸ್ವಾತಿ ಮಲಿವಾಲ್ ಅವರನ್ನು ಮಹಿಳಾ ಭದ್ರತಾ ಸಿಬ್ಬಂದಿ ಅರವಿಂದ್ ಕೇಜ್ರಿವಾಲ್ ಅವರ ಮನೆಯಿಂದ ಹೊರಗೆ ಕರೆದೊಯ್ಯುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಆ ಸಿಬ್ಬಂದಿಯ ಜೊತೆ ವಾದ ಮಾಡುತ್ತಿರುವ ಸ್ವಾತಿ ಮಲಿವಾಲ್ ಮನೆಯಿಂದ ಹೊರಗೆ ಬಂದ ನಂತರ ವಿಚಾರಿಸಲು ಬಂದ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸಿನವರ ಜೊತೆಯೂ ಗಲಾಟೆ ಮಾಡಿದ್ದಾರೆ.
ಇದನ್ನೂ ಓದಿ: ಸ್ವಾತಿ ಮಲಿವಾಲ್ ಮೂಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಷಡ್ಯಂತ್ರ; ಆಮ್ ಆದ್ಮಿ ಆರೋಪ
ಸ್ವಾತಿ ಮಲಿವಾಲ್ ಹೇಳಿದಂತೆ ಆಕೆಗೆ ಯಾವ ಗಾಯಗಳೂ ಆಗಿಲ್ಲ, ಆಕೆಯ ಕೂದಲು ಕೆದರಿಲ್ಲ, ಕಾಲುಗಳು ಕುಂಟುತ್ತಿಲ್ಲ, ಬಟ್ಟೆ ಹರಿದಿಲ್ಲ. ಆಕೆ ಆರಾಮಾಗಿಯೇ ಹೊರಗೆ ನಡೆದಿದ್ದಾರೆ. ಈ ವಿಡಿಯೋ ನೋಡಿದರೆ ಸ್ವಾತಿ ಮಲಿವಾಲ್ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳಿಗೂ ಆಕೆಯ ಸ್ಥಿತಿಗೂ ಸ್ವಲ್ಪವಾದರೂ ಹೋಲಿಕೆ ಇದೆಯೇ? ಈ ಘಟನೆ ನಡೆದು 4 ದಿನಗಳಾದ ಬಳಿಕ ಅಂದರೆ ಎಫ್ಐಆರ್ ದಾಖಲಾದ ಮೇಲೆ ಸ್ವಾತಿ ಮಲಿವಾಲ್ ಕುಂಟಲು ಆರಂಭಿಸಿದ್ದಾರೆ. ಈ ವಿಡಿಯೋದಲ್ಲಿ ಆಕೆ ಆರಾಮಾಗಿಯೇ ನಡೆದುಕೊಂಡು ಹೋಗುತ್ತಿದ್ದಾರಲ್ಲ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.
स्वाति मालीवाल के आरोपों की असलियत उजागर कर रहा है ये वीडियो 👇🏻 pic.twitter.com/dBkH5YhKdD
— AAP (@AamAadmiParty) May 18, 2024
ಸ್ವಾತಿ ಮಲಿವಾಲ್ ಅವರು ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದಿಂದ ನಿರ್ಗಮಿಸುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಸ್ವಾತಿ ಮಲಿವಾಲ್ ಅವರು ಆವರಣದ ಹೊರಗೆ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದದಲ್ಲಿ ತೊಡಗಿದ್ದರು ಎಂಬುದನ್ನೂ ಈ ದೃಶ್ಯಾವಳಿಗಳು ಸೆರೆಹಿಡಿದಿವೆ. “ಈ ವೀಡಿಯೊ ಸ್ವಾತಿ ಮಲಿವಾಲ್ ಅವರ ಆರೋಪಗಳ ಹಿಂದಿನ ಸತ್ಯವನ್ನು ಬಹಿರಂಗಪಡಿಸುತ್ತದೆ” ಎಂದು ಆಪ್ ಹಿಂದಿಯಲ್ಲಿ ಶೀರ್ಷಿಕೆ ನೀಡಿದೆ.
ಇದನ್ನೂ ಓದಿ: ಸಿಎಂ ಮನೆಯಲ್ಲೇ ಮಹಿಳೆಯರಿಗೆ ರಕ್ಷಣೆಯಿಲ್ಲ; ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಪ್ರಲ್ಹಾದ್ ಜೋಶಿ ಖಂಡನೆ
ಸ್ವಾತಿ ಮಲಿವಾಲ್ ಮಾಡಿರುವ ತನ್ನ ಮೇಲಿನ ಹಲ್ಲೆಗೆ ಸಂಬಂಧಿಸಿದ ಆರೋಪದ ಕುರಿತು ಎಎಪಿ ಬಿಡುಗಡೆ ಮಾಡಿರುವ ಎರಡನೇ ವಿಡಿಯೋ ಇದಾಗಿದೆ. ಈ ಬೆಳವಣಿಗೆಗಳ ನಡುವೆ ಸ್ವತಃ ಸ್ವಾತಿ ಮಲಿವಾಲ್ ಅವರು ಸಿಎಂ ಕೇಜ್ರಿವಾಲ್ ನಿವಾಸದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಸಮಗ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಮಲಿವಾಲ್ ಅವರು ಸಿಎಂ ನಿವಾಸದ ಸಿಸಿಟಿವಿ ದೃಶ್ಯಗಳನ್ನು ತಿರುಚಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ದೆಹಲಿ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ