Manipur Polls 2022: ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮದ್ಯದಂಗಡಿ ತೆರೆಯಲು ಅವಕಾಶ; ಬಿಜೆಪಿ ಭರವಸೆಗೆ ಕಾಂಗ್ರೆಸ್ ಆಕ್ರೋಶ
ಮಣಿಪುರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅಧಿಕೃತವಾಗಿ ಒಣ ರಾಜ್ಯವಾಗಿರುವ ಮಣಿಪುರದಲ್ಲಿ ಐಎಂಎಫ್‌ಎಲ್ ಅಂಗಡಿಗಳಿಗೆ ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಭರವಸೆ ನೀಡಿದ್ದರು.
ಇಂಫಾಲ: ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಣಿಪುರದಲ್ಲಿ ಭಾರತ ನಿರ್ಮಿತ ವಿದೇಶಿ ಮದ್ಯ (IMFL) ಶಾಪ್ಗಳನ್ನು ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ (Biren Singh) ಘೋಷಿಸಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್‌ನಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ಇದನ್ನು “ಮಣಿಪುರದ ಮಹಿಳೆಯರಿಗೆ ಅವಮಾನ” ಎಂದು ಟೀಕಿಸಿದ್ದಾರೆ. ಬಹಿರಂಗ ಚುನಾವಣಾ ಪ್ರಚಾರ ಮುಕ್ತಾಯವಾಗುವ 48 ಗಂಟೆಗಳ ಮೊದಲು ಭಾರತೀಯ ನಿರ್ಮಿತ ವಿದೇಶಿ ಮದ್ಯದ ಅಂಗಡಿಗಳನ್ನು ತೆರೆಯಲಾಗುವುದು ಎಂದು ಬಿಜೆಪಿ ಸಿಎಂ ಘೋಷಿಸಿರುವುದು ಆಘಾತಕಾರಿಯಾಗಿದೆ ಎಂದು ಈಶಾನ್ಯ ಚುನಾವಣೆಯ ಕಾಂಗ್ರೆಸ್ ವೀಕ್ಷಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಫೆಬ್ರವರಿ 28ರಿಂದ ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯ ಕಾಂಗ್ರೆಸ್ ವೀಕ್ಷಕ ಜೈರಾಮ್ ರಮೇಶ್, ಸಿಎಂ ಬಿರೇನ್ ಸಿಂಗ್ ಅವರು ತಮ್ಮ ಹೇಳಿಕೆಗಾಗಿ ರಾಜ್ಯದ ಮಹಿಳೆಯರು, ಮಣಿಪುರದ ಸಾಮಾಜಿಕ ಕಾರ್ಯಕರ್ತರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅಧಿಕೃತವಾಗಿ ಒಣ ರಾಜ್ಯವಾಗಿರುವ ಮಣಿಪುರದಲ್ಲಿ ಐಎಂಎಫ್‌ಎಲ್ ಅಂಗಡಿಗಳಿಗೆ ಅನುಮತಿ ನೀಡುವುದಾಗಿ ಮುಖ್ಯಮಂತ್ರಿಗಳು ಗುರುವಾರ ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಹೇಳಿದ್ದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿಎಂ, ಹಳ್ಳಿಗಾಡಿನ ಕೆಲವು ಜನರು ವಿಷಪೂರಿತ ಲೋಕಲ್ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಜನರನ್ನು ಉಳಿಸಲು ಅಂಗಡಿಗಳಲ್ಲಿ ಐಎಂಎಫ್‌ಎಲ್ ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
It’s shocking that 48 hours before the campaign comes to a close, outgoing BJP CM announces that Indian Made Foreign Liquor(IMFL) shops will be opened. This is an insult to the women of Manipur! We demand an immediate withdrawal of the statement by the CM.#BJPAgainstIma pic.twitter.com/cdVajFdWqR
— Jairam Ramesh (@Jairam_Ramesh) February 25, 2022
2014ರಲ್ಲಿ ಒ ಇಬೋಬಿ ಸಿಂಗ್ ಅವರ ಅಂದಿನ ಕಾಂಗ್ರೆಸ್ ಸರ್ಕಾರವು ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವ ಮೂಲಕ ನಿಷೇಧವನ್ನು ತೆಗೆದುಹಾಕಲು ಪ್ರಯತ್ನಿಸಿತ್ತು. ಆದರೆ ನಾಗರಿಕ ಸಮಾಜ ಗುಂಪುಗಳು, ಸಾಮಾಜಿಕ ಕಾರ್ಯಕರ್ತರು, ಮಹಿಳಾ ಗುಂಪುಗಳು ಮತ್ತು ಉಗ್ರಗಾಮಿ ಸಂಘಟನೆಗಳಿಂದ ತೀವ್ರ ಪ್ರತಿರೋಧವನ್ನು ಎದುರಿಸಿತ್ತು. ಮಣಿಪುರ ವಿಧಾನಸಭೆಯ ಆಯ್ಕೆ ಸಮಿತಿಯು 2021ರ ಆಗಸ್ಟ್ ತಿಂಗಳಲ್ಲಿ ಮಣಿಪುರ ಮದ್ಯ ನಿಷೇಧ ಕಾಯಿದೆ, 1991 (2 ನೇ ತಿದ್ದುಪಡಿ)ಗೆ ತನ್ನ ಅನುಮೋದನೆಯನ್ನು ನೀಡಿತು. ಹಾಗೇ ಇತರ ರಾಜ್ಯಗಳಿಗೆ ವಾಣಿಜ್ಯ ರಫ್ತು ಮಾಡಲು ಹೆಚ್ಚಿನ ಆಲ್ಕೋಹಾಲ್ ತಯಾರಿಸಲು ಅವಕಾಶ ನೀಡಿತು. ತಿದ್ದುಪಡಿ ಕಾಯ್ದೆ ಜಾರಿಯ ನಂತರ ಸರ್ಕಾರದ ಬೊಕ್ಕಸಕ್ಕೆ ಸುಮಾರು 400 ಕೋಟಿ ರೂಪಾಯಿ ತೆರಿಗೆ ಬರಲಿದೆ ಎಂದು ಬಿರೇನ್ ಸಿಂಗ್ ಸರ್ಕಾರ ಹೇಳಿತ್ತು.
IMFL ಅಂಗಡಿಗಳ ಕುರಿತು ಮುಖ್ಯಮಂತ್ರಿಗಳ ಘೋಷಣೆಯನ್ನು “ವಿಚಾರರಹಿತ ಮತ್ತು ವಿನಾಶಕಾರಿ” ಎಂದು ಬಣ್ಣಿಸಿದ ಜೈರಾಮ್ ರಮೇಶ್, ಮಣಿಪುರದಲ್ಲಿ ಯುವಕರಿಗೆ ಉದ್ಯೋಗಗಳು, ತಾಯಂದಿರು ಮತ್ತು ರೈತರ ಅವಶ್ಯಕತೆಗಳಿಗಾಗಿ ಮಹಿಳಾ ಮಾರುಕಟ್ಟೆಯನ್ನು ಸ್ಥಾಪಿಸುವುದು ಮುಂತಾದ ತುರ್ತು ಆದ್ಯತೆಗಳಿವೆ. ಅದನ್ನು ಬಿಟ್ಟು ಮದ್ಯದಂಗಡಿ ತೆರೆಯುವುದು ಸರ್ಕಾರಕ್ಕೆ ಆದ್ಯತೆಯಾಗಿಬಿಟ್ಟಿರುವುದು ವಿಷಾದದ ಸಂಗತಿ. ಮಣಿಪುರದ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಇಲ್ಲ. ಬಿಜೆಪಿ ನೇತೃತ್ವದ ಸರ್ಕಾರವು ಮ್ಯಾನ್ಮಾರ್‌ನಿಂದ ಡ್ರಗ್ಸ್ ಹರಿವನ್ನು ತಡೆಯಲು ಸಾಧ್ಯವಾಗಲಿಲ್ಲ. ಇದೀಗ IMFL ಅಂಗಡಿಗಳನ್ನು ತೆರೆಯುವುದಾಗಿ ಭರವಸೆ ನೀಡಿದೆ ಎಂದು ಲೇವಡಿ ಮಾಡಿದ್ದಾರೆ.
ಮಣಿಪುರ ವಿಧಾನಸಭಾ ಚುನಾವಣೆಯ ಮೊದಲ ಹಂತವು ಫೆಬ್ರವರಿ 28ರಂದು ಮತ್ತು ಎರಡನೇ ಹಂತದ ಮತದಾನ ಮಾರ್ಚ್ 5ರಂದು ನಡೆಯಲಿದೆ.
ಇದನ್ನೂ ಓದಿ: Smriti Irani: ಮಣಿಪುರದ ಮಹಿಳೆಯರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿ ಮನ ಗೆದ್ದ ಸಚಿವೆ ಸ್ಮೃತಿ ಇರಾನಿ; ವಿಡಿಯೋ ವೈರಲ್