Punjab Election Results: ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು; ನವಜೋತ್ ಸಿಂಗ್ ಸಿಧು ರಾಜೀನಾಮೆ ಸಾಧ್ಯತೆ

| Updated By: ಸುಷ್ಮಾ ಚಕ್ರೆ

Updated on: Mar 10, 2022 | 1:49 PM

Navjot Singh Sidhu: ಪಂಜಾಬ್​ನಲ್ಲಿ ಕಾಂಗ್ರೆಸ್​ನ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡುವ ಸಾಧ್ಯತೆಯಿದೆ.

Punjab Election Results: ಪಂಜಾಬ್​ನಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು; ನವಜೋತ್ ಸಿಂಗ್ ಸಿಧು ರಾಜೀನಾಮೆ ಸಾಧ್ಯತೆ
ನವಜೋತ್ ಸಿಂಗ್ ಸಿಧು
Follow us on

ನವದೆಹಲಿ: 5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಸಾಕಷ್ಟು ತಂತ್ರಗಾರಿಕೆಯನ್ನು ರೂಪಿಸಿಕೊಂಡಿದ್ದ ಕಾಂಗ್ರೆಸ್ (Congress) ಈ ಬಾರಿ ಐದೂ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟಿತ್ತು. ಕಾಂಗ್ರೆಸ್ ಪ್ರಾಬಲ್ಯವಿದ್ದ ಭಾರತದ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಮತ್ತಿತರ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಏರಿರುವುದು ಕಾಂಗ್ರೆಸ್​ಗೆ ದೊಡ್ಡ ಹೊಡೆತ ಕೊಟ್ಟಿತ್ತು. ಹೀಗಾಗಿ, ಈ ಬಾರಿಯ ಚುನಾವಣೆ ಕಾಂಗ್ರೆಸ್ ಪಾಲಿಗೆ ಸವಾಲಿನದ್ದಾಗಿತ್ತು. ಆದರೆ, ತನ್ನದೇ ಆಡಳಿತ ಸರ್ಕಾರವಿದ್ದ ಪಂಜಾಬ್​ನಲ್ಲೂ ಕಾಂಗ್ರೆಸ್​ ಮತ್ತೆ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಅಚ್ಚರಿಯೆಂಬಂತೆ ಪಂಜಾಬ್​ನಲ್ಲಿ (Punjab Election Result) ಈ ಬಾರಿ ಮತದಾರರು ಕಾಂಗ್ರೆಸ್, ಬಿಜೆಪಿಯೆರಡಕ್ಕೂ ಒಲಿಯದೆ ಆಮ್ ಆದ್ಮಿ ಪಕ್ಷಕ್ಕೆ ಸರ್ಕಾರ ರೂಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಕಾಂಗ್ರೆಸ್​ಗೆ ತೀವ್ರ ಮುಜುಗರವಾಗಿದ್ದು, ಈ ಸೋಲಿನ ನೈತಿಕ ಹೊಣೆ ಹೊತ್ತು ಪಂಜಾಬ್​ನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ರಾಜೀನಾಮೆ ನೀಡುವ ಸಾಧ್ಯತೆಯಿದೆ.

ಪಂಜಾಬ್‌ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಆಮ್‌ ಆದ್ಮಿ ಪಕ್ಷಕ್ಕೆ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಅಭಿನಂದನೆ ಸಲ್ಲಿಸಿದ್ದಾರೆ. 117 ಸದಸ್ಯ ಬಲದ ಸದನದಲ್ಲಿ ಆಮ್ ಆದ್ಮಿ ಪಕ್ಷ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 17 ಸ್ಥಾನಗಳನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, “ಜನರ ಧ್ವನಿ ದೇವರ ಧ್ವನಿಯಾಗಿದೆ. ಪಂಜಾಬ್ ಜನತೆಯ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ. ಆಪ್​ಗೆ ನನ್ನ ಅಭಿನಂದನೆಗಳು” ಎಂದು ಅಭಿನಂದಿಸಿದ್ದಾರೆ.

ನವಜೋತ್ ಸಿಧು ಮತ್ತು ಶಿರೋಮಣಿ ಅಕಾಲಿ ದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಅಮೃತಸರ ಪೂರ್ವ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಇದರ ಜೊತೆಗೆ ಪಂಜಾಬ್​ನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್ ತೊರೆದು ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರಿಗೆ ಕೂಡ ಹಿನ್ನಡೆಯಾಗಿದೆ. ಈ ಮೂಲಕ ಪಂಜಾಬ್​ನ ಘಟಾನುಘಟಿ ನಾಯಕರಿಗೇ ಮತದಾರರು ದೊಡ್ಡ ಶಾಕ್ ನೀಡಿದ್ದಾರೆ.

ಪಂಜಾಬ್​ನಲ್ಲಿ ಆಮ್ ಆದ್ಮಿ ಪಕ್ಷ ಗೆಲುವಿನತ್ತ ಹೆಜ್ಜೆ ಹಾಕುತ್ತಿದ್ದಂತೆ ದೆಹಲಿಯ ಎಎಪಿ ಕಾರ್ಯಕರ್ತರು ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಮೇಲೆ ಭರವಸೆಯಿಟ್ಟಿರುವ ಪಂಜಾಬ್‌ನ ಜನರು ಆಪ್​ಗೆ ಮತ ಹಾಕಿದ್ದಾರೆ. ಕಾಂಗ್ರೆಸ್​, ಬಿಜೆಪಿಯಿಂದ ಬೇಸತ್ತಿದ್ದ ಮತದಾರರು ಹೊಸ ಬದಲಾವಣೆ ಬಯಸಿದ್ದಾರೆ ಎಎಪಿ ನಾಯಕ ರಾಘವ್ ಚಡ್ಡಾ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಈ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯನ್ನು ರದ್ದುಗೊಳಿಸಲಾಗಿದೆ. ಸಿಎಲ್​ಪಿಯ ಮೊದಲ ಸಭೆಯನ್ನು ಇಂದು ಸಂಜೆ 5 ಗಂಟೆಗೆ ಕರೆಯಲಾಗಿತ್ತು. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಕರೆದಿದ್ದ ಸಭೆಯನ್ನು ಈಗ ಪಂಜಾಬ್ ಕಾಂಗ್ರೆಸ್ ಪಕ್ಷದ ನಾಯಕತ್ವದಿಂದ ಕೆಳಗಿಳಿಯುವ ಸುಳಿವು ನೀಡಿ ರದ್ದುಗೊಳಿಸಲಾಗಿದೆ. ಅಮೃತಸರದಿಂದ ಸ್ಪರ್ಧಿಸಿದ್ದ ನವಜೋತ್ ಸಿಂಗ್ ಸಿಧು ಕೂಡ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದ್ದಾರೆ. ಅತ್ತ ಚರಣ್​ಜಿತ್ ಸಿಂಗ್ ಚನ್ನಿ ಕೂಡ ಹಿನ್ನಡೆ ಅನುಭವಿಸಿರುವುದರಿಂದ ಕಾಂಗ್ರೆಸ್​ಗೆ ಮುಖಭಂಗವಾಗಿದೆ.

ಇದನ್ನೂ ಓದಿ: Punjab Elections 2022 ಪಂಜಾಬ್​​ನಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಗೆಲುವಿನ ನಗು ಬೀರಲು ಕಾರಣವಾದ 5 ಸಂಗತಿಗಳಿವು

Amarinder Singh: ಪಂಜಾಬ್​ ಮಾಜಿ ಸಿಎಂ ಅಮರೀಂದರ್ ಸಿಂಗ್​ಗೆ ಭಾರೀ ಮುಖಭಂಗ; ಆಪ್​ ಸ್ಪರ್ಧಿ ವಿರುದ್ಧ ಕ್ಯಾಪ್ಟನ್​ಗೆ ಸೋಲು