Amarinder Singh: ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ಗೆ ಭಾರೀ ಮುಖಭಂಗ; ಆಪ್ ಸ್ಪರ್ಧಿ ವಿರುದ್ಧ ಕ್ಯಾಪ್ಟನ್ಗೆ ಸೋಲು
Punjab Assembly Election Results: ಈ ಹಿಂದೆ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಆಪ್ನ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋತಿದ್ದಾರೆ.
ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Amarinder Singh) ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ತಮ್ಮದೇ ಪಕ್ಷ ಕಟ್ಟಿಕೊಂಡಿದ್ದರು. ಈ ಬಾರಿ ಚುನಾವಣೆಯಲ್ಲಿ ಪಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೋಲನ್ನು ಅನುಭವಿಸಿದ್ದಾರೆ. ಪಂಜಾಬ್‌ನ ವಿಧಾನಸಭಾ ಚುನಾವಣೆ ಮತ ಎಣಿಕೆ ಇಂದು ನಡೆಯುತ್ತಿದ್ದು, ಅಮರೀಂದರ್ ಸಿಂಗ್ ಆಮ್ ಆದ್ಮಿ ಪಾರ್ಟಿಯ (AAP) ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಪಟಿಯಾಲ (Patiala) ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ಈ ಹಿಂದೆ ಎರಡು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಅಮರೀಂದರ್ ಸಿಂಗ್ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಆಪ್ನ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋತಿದ್ದಾರೆ. 2017ರ ಚುನಾವಣೆಯಲ್ಲಿ ಶೇ. 49ರಷ್ಟು ಅಂತರದಿಂದ ಗೆಲುವು ಕಂಡಿದ್ದ ಅಮರೀಂದರ್ ಸಿಂಗ್ ಅವರಿಗೆ ಈ ಸೋಲಿನಿಂದ ತೀವ್ರ ಮುಖಭಂಗವಾದಂತಾಗಿದೆ. ಈ ಮೂಲಕ ಅಮರೀಂದರ್ ಸಿಂಗ್ ಅವರ ಹೊಸ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ (ಪಿಎಲ್ಸಿ)ಗೂ ಮೊದಲ ಚುನಾವಣೆಯಲ್ಲೇ ಭಾರೀ ಹಿನ್ನಡೆಯಾದಂತಾಗಿದೆ.
ಸದ್ಯದ ಮಾಹಿತಿ ಪ್ರಕಾರ, ಅಮರೀಂದರ್ ಸಿಂಗ್ 12,000 ಮತಗಳ ಅಂತರದಿಂದ ಸೋಲಿನ ರುಚಿ ಕಂಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಯಲ್ಲಿ ಘೋಷಣೆಯಾಗಿದ್ದಂತೆ ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಭರ್ಜರಿ ಗೆಲುವಿನತ್ತ ಸಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ತೀರಾ ಹಿಂದುಳಿದಿದೆ.
ಅಮರೀಂದರ್ ಸಿಂಗ್ ಅವರನ್ನು ಸೆಪ್ಟೆಂಬರ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಪಟ್ಟದಿಂದ ಕಾಂಗ್ರೆಸ್ ಕೆಳಗಿಳಿಸಿತ್ತು. ಹೈಕಮಾಂಡ್ನಿಂದ ತಮಗೆ ಅವಮಾನವಾಗಿದೆ, ತನ್ನ ಎದುರಾಳಿಯಾದ ನವಜೋತ್ ಸಿಂಗ್ ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷನ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿ ಅಮರೀಂದರ್ ಸಿಂಗ್ ನವೆಂಬರ್ನಲ್ಲಿ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಬಳಿಕ ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಮರೀಂದರ್ ಸಿಂಗ್ ಅವರ ಪಕ್ಷ ಚುನಾವಣೆಯನ್ನು ಎದುರಿಸಿತ್ತು. ಇದೀಗ ಅಮರೀಂದರ್ ಸಿಂಗ್ ಸೋಲನ್ನು ಅನುಭವಿಸುವ ಮೂಲಕ ಹೊಸ ಪಕ್ಷದ ಮೊದಲ ಚುನಾವಣೆಯಲ್ಲೇ ಹಿನ್ನಡೆ ಅನುಭವಿಸಿದ್ದಾರೆ.
ಪಟಿಯಾಲದ ಮಹಾರಾಜ ಎಂದೇ ಜನಪ್ರಿಯವಾಗಿದ್ದ ಅಮರೀಂದರ್ ಸಿಂಗ್ ಪಟಿಯಾಲ ರಾಜಮನೆತನದಿಂದ ಬಂದವರು. ಪಂಜಾಬ್‌ನ ಶ್ರೀಮಂತ ಮತ್ತು ದೊಡ್ಡ ಭೂಮಾಲೀಕರಲ್ಲಿ ಒಂದಾದ ಕುಟುಂಬದಿಂದ ಬಂದ ಅಮರೀಂದರ್ ಸಿಂಗ್ ಅವರ ಕುಟುಂಬದಲ್ಲಿ ರಾಜಕೀಯ ಪ್ರವೇಶಿಸಿದ ಮೊದಲಿಗರಾಗಿದ್ದಾರೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ಪ್ರಧಾನಿ ಭದ್ರತಾ ಲೋಪಕ್ಕೆ ಕಾಂಗ್ರೆಸ್ ನಾಯಕರಿಂದಲೂ ಆಕ್ಷೇಪ; ಸಿಎಂಗೆ ರಾಜೀನಾಮೆ ಕೊಡಿ ಎಂದ ಅಮರೀಂದರ್ ಸಿಂಗ್
Published On - 1:00 pm, Thu, 10 March 22