ಪಂಜಾಬ್​ನಲ್ಲಿ ಪ್ರಧಾನಿ ಭದ್ರತಾ ಲೋಪಕ್ಕೆ ಕಾಂಗ್ರೆಸ್ ನಾಯಕರಿಂದಲೂ ಆಕ್ಷೇಪ; ಸಿಎಂಗೆ ರಾಜೀನಾಮೆ ಕೊಡಿ ಎಂದ ಅಮರೀಂದರ್ ಸಿಂಗ್

PM Security Breach in Punjab: ಪಂಜಾಬ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಸುನಿಲ್ ಜಖಾರ್, ಮಾಜಿ ಸಿಎಂ ಅಮರಿಂದರ್ ಸಿಂಗ್ ಪಂಜಾಬ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಪಂಜಾಬ್​ನಲ್ಲಿ ಪ್ರಧಾನಿ ಭದ್ರತಾ ಲೋಪಕ್ಕೆ ಕಾಂಗ್ರೆಸ್ ನಾಯಕರಿಂದಲೂ ಆಕ್ಷೇಪ; ಸಿಎಂಗೆ ರಾಜೀನಾಮೆ ಕೊಡಿ ಎಂದ ಅಮರೀಂದರ್ ಸಿಂಗ್
ಅಮರಿಂದರ್ ಸಿಂಗ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 05, 2022 | 6:14 PM

ನವದೆಹಲಿ: ಪಂಜಾಬ್​ನಲ್ಲಿ ಇಂದು ಸುಮಾರು 42,750 ರೂ. ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸಲು ತೆರಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಹವಾಮಾನ ವೈಪರೀತ್ಯದ ಕಾರಣದಿಂದ ಕೊನೆ ಕ್ಷಣದಲ್ಲಿ ವಿಮಾನ ಮಾರ್ಗದ ಬದಲು ರಸ್ತೆ ಮೂಲಕ ಪಂಜಾಬ್​ನತ್ತ ಪ್ರಯಾಣ ಬೆಳೆಸಿದ್ದರು. ಆದರೆ, ಪಂಜಾಬ್​ನಲ್ಲಿ ಮಾರ್ಗಮಧ್ಯೆ ರೈತರು ಪ್ರತಿಭಟನೆ ನಡೆಸಿ, ಅಡ್ಡಗಟ್ಟಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ಮೋದಿ ಹಾಗೂ ಅವರ ಬೆಂಗಾವಲು ಪಡೆ ವಾಹನಗಳು ರಸ್ತೆ ಮಧ್ಯೆ ಸಿಲುಕಿಕೊಳ್ಳುವಂತಾಯಿತು. ಬಳಿಕ ಪ್ರಧಾನಿ ಮೋದಿ ಪಂಜಾಬ್​ನ ರ್ಯಾಲಿಯನ್ನು ರದ್ದುಗೊಳಿಸಿ ಭಟಿಂಡಾ ವಿಮಾನ ನಿಲ್ದಾಣಕ್ಕೆ ವಾಪಾಸಾಗಬೇಕಾಯಿತು. ಈ ಘಟನೆಗೆ ಪಂಜಾಬ್​ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಪಂಜಾಬ್ ಸಿಎಂ ಚರಣ್​ಜಿತ್ ಚನ್ನಿ ವಿರುದ್ಧ ಕೋಪಗೊಂಡಿದ್ದಾರೆ. ಕೇಂದ್ರ ಗೃಹ ಇಲಾಖೆಯೂ ಈ ಕುರಿತು ಪಂಜಾಬ್ ಸರ್ಕಾರದಿಂದ ವಿಸ್ತೃತ ವರದಿ ನೀಡುವಂತೆ ಕೇಳಿದೆ. ಈ ನಡುವೆ ಬಿಜೆಪಿ ನಾಯಕರು ಮಾತ್ರವಲ್ಲದೆ ಕಾಂಗ್ರೆಸ್ ನಾಯಕ ಸುನಿಲ್ ಜಖಾರ್ ಕೂಡ ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಆಗಮನದ ವೇಳೆ ಉಂಟಾದ ಭದ್ರತಾ ವೈಫಲ್ಯಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಹಾಗೇ, ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಕೂಡ ಈ ಘಟನೆಯ ಬಗ್ಗೆ ಕಿಡಿ ಕಾರಿದ್ದಾರೆ.

ಪಂಜಾಬ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪಂಜಾಬ್​ನ ಫಿರೋಜ್​ಪುರ್​ ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್​ಎಸ್​ಪಿ) ಅವರನ್ನು ಅಮಾನತು ಮಾಡಲಾಗಿದೆ. ಫಿರೋಜ್​ಪುರ್ ಎಸ್​ಎಸ್​ಪಿ ಹರ್ಮನ್​​​ ಹನ್ಸ್​ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್​ನಿಂದಲೂ ಅಸಮಾಧಾನ:

ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬೆಂಗಾವಲು ಪಡೆಯನ್ನು ಅಡ್ಡಗಟ್ಟಿದ ಘಟನೆ ಇಂದು ನಡೆದಿದ್ದು, ಇದು ಪ್ರಧಾನಿಯವರ ಭದ್ರತಾ ಉಲ್ಲಂಘನೆಯಾಗಿದೆ. ಈ ಘಟನೆ ಪಂಜಾಬ್​ನ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ. ಇನ್ನು, ಪಂಜಾಬ್ ಕಾಂಗ್ರೆಸ್ ನಾಯಕ ಸುನಿಲ್ ಜಖಾರ್ ಕೂಡ ತಮ್ಮದೇ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುನಿಲ್ ಜಖಾರ್, ಇಂದು ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮನದ ವೇಳೆ ನಡೆದಿರುವ ಘಟನೆ ಸ್ವೀಕಾರಾರ್ಹವಲ್ಲ. ಇದು ಪಂಜಾಬಿಯಾತ್ ವಿರುದ್ಧವಾಗಿದೆ. ಫಿರೋಜ್‌ಪುರದಲ್ಲಿ ಬಿಜೆಪಿಯ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಭಾರತದ ಪ್ರಧಾನಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಮರೀಂದರ್ ಸಿಂಗ್ ತರಾಟೆ:

ಪಂಜಾಬ್​ನಲ್ಲಿ ಉಂಟಾದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯದ ಬಗ್ಗೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ರಾಜ್ಯದ ಚರಂಜಿತ್ ಸಿಂಗ್ ಚನ್ನಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿಗೆ ಸುಗಮ ಮಾರ್ಗದ ವ್ಯವಸ್ಥೆ ಮಾಡಲಾಗದ ಸರ್ಕಾರ ಕೆಳಗಿಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪಂಜಾಬ್ ಸಿಎಂ ಮತ್ತು ಗೃಹ ಸಚಿವರು ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿ.ಮೀ ದೂರದಲ್ಲಿರುವ ದೇಶದ ಪ್ರಧಾನಿಗೆ ಸುಗಮ ಮಾರ್ಗವನ್ನು ಒದಗಿಸಲು ನಿಮಗೆ ಸಾಧ್ಯವಾಗದಿದ್ದ ಮೇಲೆ ನಿಮಗೆ ಅಧಿಕಾರದಲ್ಲಿ ಉಳಿಯುವ ಹಕ್ಕಿಲ್ಲ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ! ಎಂದು ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಪಂಜಾಬ್‌ಗೆ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಅಡ್ಡಿಪಡಿಸಿರುವುದು ದುಃಖಕರವಾಗಿದೆ. ರ್ಯಾಲಿಗೆ ಜನರು ಬಾರದಂತೆ ತಡೆಯಲು ಪಂಜಾಬ್ ರಾಜ್ಯ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಪೊಲೀಸರಿಗೆ ಪ್ರಧಾನಿಯವರು ಸಂಚರಿಸುವ ಮಾರ್ಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿತ್ತು. ಸಿಎಂ ಚರಣ್​ಜಿತ್ ಚನ್ನಿ ವಿಷಯ ತಿಳಿಸಲು ಅಥವಾ ಫೋನ್ ಮಾಡಲು ನಿರಾಕರಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸರಣಿ ಟ್ವೀಟ್​ಗಳ ಮೂಲಕ ಪಂಜಾಬ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಸ್ಮೃತಿ ಇರಾನಿ ಟೀಕೆ:

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ನಮ್ಮ ದೇಶದ ಪ್ರಧಾನಮಂತ್ರಿಗೆ ತೊಂದರೆ ಉಂಟುಮಾಡಿದ್ದಾರೆ. ಕಾಂಗ್ರೆಸ್ ನಾಯಕರು ನರೇಂದ್ರ ಮೋದಿಯವರನ್ನು ದ್ವೇಷ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅವರು ಪ್ರಧಾನ ಮಂತ್ರಿಗಳಿಗೆ ತೊಂದರೆ ಮಾಡಿ, ಹಗೆ ತೀರಿಸಿಕೊಳ್ಳುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ಪಂಜಾಬ್​ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಎಲ್ಲ ಭದ್ರತೆ ನೀಡಲಾಗಿದೆ ಎಂದು ಪಂಜಾಬ್ ಡಿಜಿಪಿ ಹೇಳಿದ ಬಳಿಕವೇ ಅವರ ಪ್ರಯಾಣ ಶುರುವಾಗಿತ್ತು. ಆದರೂ ಈ ಭದ್ರತಾ ಲೋಪ ಯಾಕಾಯಿತು? ಎಂದು ಅವರು ಪ್ರಶ್ನಿಸಿದ್ದಾರೆ.

ಇಂದು ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫ್ಲೈ ಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿದೆ. ರೈತರ ಪ್ರತಿಭಟನೆ ಕಾರಣದಿಂದಾಗಿ ಪಿಎಂ ಮೋದಿ ಅವರ ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರು ಕಾರ್ಯಕ್ರಮವನ್ನು ರದ್ದುಗೊಳಿಸಿ, ಭಟಿಂಡಾ ವಿಮಾನ ನಿಲ್ದಾಣಕ್ಕೆ ಮರಳಿದ್ದಾರೆ. ಭದ್ರತಾ ಸಿಬ್ಬಂದಿ ಲೋಪವೇ ಇದಕ್ಕೆ ಕಾರಣ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಪಂಜಾಬ್​ನಲ್ಲಿ ಭದ್ರತಾ ಲೋಪದಿಂದ ಸಿಟ್ಟಾದ ಪ್ರಧಾನಿ ಮೋದಿ; ನಾನು ಜೀವಂತವಾಗಿಯಾದರೂ ಬಂದೆನಲ್ಲ ಎಂದ ಪ್ರಧಾನಮಂತ್ರಿ

ಭದ್ರತಾ ಲೋಪ: ಪ್ರಧಾನಿ ಮೋದಿಯವರ ಪಂಜಾಬ್ ರ್ಯಾಲಿ ದಿಢೀರ್ ರದ್ದು