ಎಷ್ಟೆಲ್ಲ ಒಳ್ಳೆಯದಾಗುತ್ತಿದೆ ಎನ್ನುತ್ತ ಬರೋಬ್ಬರಿ 11 ಡೋಸ್ ಕೊರೊನಾ ಲಸಿಕೆ ಪಡೆದ 84ರ ವೃದ್ಧ !-ತನಿಖೆಗೆ ಆದೇಶ

ಎಷ್ಟೆಲ್ಲ ಒಳ್ಳೆಯದಾಗುತ್ತಿದೆ ಎನ್ನುತ್ತ ಬರೋಬ್ಬರಿ 11 ಡೋಸ್ ಕೊರೊನಾ ಲಸಿಕೆ ಪಡೆದ 84ರ ವೃದ್ಧ !-ತನಿಖೆಗೆ ಆದೇಶ
ಪ್ರಾತಿನಿಧಿಕ ಚಿತ್ರ

84ವರ್ಷದ ವೃದ್ಧ 11 ಡೋಸ್ ಪಡೆಯಲು ಸಾಧ್ಯವಾಗಿದ್ದು ಹೇಗೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆಫ್​ಲೈನ್​ ನೋಂದಣಿ ಮಾಡಿ ಲಸಿಕೆ ನೀಡಲಾಗುವ ಕ್ಯಾಂಪ್​​ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದ್ದರೂ, ತನಿಖೆಯಾದ ವಿನಃ ಏನೂ ಹೇಳುವುದಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Jan 05, 2022 | 5:48 PM

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ (Corona Vaccine Drive) ನಡೆಯುತ್ತಿದೆ. ಕಳೆದ ವರ್ಷ ಜನವರಿ 16ರಿಂದ ಲಸಿಕೆ ಅಭಿಯಾನ ಶುರುವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸರಿಯಾಗಿ ಒಂದು ವರ್ಷ ತುಂಬಲಿದೆ. ಇಷ್ಟಾದರೂ ಇನ್ನೂ ಅನೇಕರಿಗೆ ಕೊವಿಡ್ 19 ಲಸಿಕೆ ಎರಡನೇ ಡೋಸ್ ಆಗಿಲ್ಲ..ಮತ್ತೂ ಒಂದಷ್ಟು ಮಂದಿ ಮೊದಲನೇ ಡೋಸ್​ ತೆಗೆದುಕೊಂಡಿಲ್ಲ. ಇಷ್ಟೆಲ್ಲದರ ಮಧ್ಯೆ ಇಲ್ಲೊಬ್ಬರು 84 ವರ್ಷದ ವೃದ್ಧ ಕೊರೊನಾ ಲಸಿಕೆ 11 ಡೋಸ್​ ತೆಗೆದುಕೊಂಡಿದ್ದಾರೆ. ಅಂದಹಾಗೆ, ಇವರ ಹೆಸರು ಬ್ರಹ್ಮದೇವ್ ಮಂಡಲ್. ಬಿಹಾರ ರಾಜ್ಯದ ಮಾದೇಪುರ ಜಿಲ್ಲೆಯ ಉದಕಿಶುಂಗಂಜ್ ಉಪ-ವಿಭಾಗದಲ್ಲಿರುವ ಓರೈ ಎಂಬ ಗ್ರಾಮದವರು. 11 ಡೋಸ್ ತೆಗೆದುಕೊಂಡು, 12ನೇ ಡೋಸ್​ ಪಡೆಯಲು ಬಂದಾಗ ಸಿಕ್ಕಿಬಿದ್ದಿದ್ದಾರೆ. ಇಷ್ಟೊಂದು ಡೋಸ್ ಲಸಿಕೆಯನ್ನು ಬ್ರಹ್ಮದೇವ್​ ಹೇಗೆ ಪಡೆದರು ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಮಾದೇಪುರ ಜಿಲ್ಲಾ ಸರ್ಜನ್​ ತಿಳಿಸಿದ್ದಾರೆ. 

ತಾವು ಕೊರೊನಾ ಲಸಿಕೆ 11 ಡೋಸ್​ ಪಡೆದಿದ್ದನ್ನು ಮಂಡಲ್​ ಒಪ್ಪಿಕೊಂಡಿದ್ದಾರೆ. ನಾನು ಕೊವಿಡ್ 19 ಲಸಿಕೆಯಿಂದ ಹಲವು ರೀತಿಯ ಅನುಕೂಲ ಪಡೆದಿದ್ದೇನೆ. ಹಾಗಾಗಿ ಪದೇಪದೆ ಅದನ್ನು ತೆಗೆದುಕೊಂಡೆ ಎಂದು ಹೇಳಿದ್ದಾರೆ. ಅಂದಹಾಗೆ ಮಂಡಲ್​ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ. 2021ರ ಫೆಬ್ರವರಿ 13ರಂದು ಮೊದಲ ಡೋಸ್ ಪಡೆದಿದ್ದಾರೆ. ಅಲ್ಲಿಂದ 2021ರ ಡಿಸೆಂಬರ್​ 30ರವರೆಗೆ 11 ಡೋಸ್​ಗಳನ್ನು ಪಡೆದಿದ್ದಾರೆ. ಇವೆಲ್ಲವನ್ನೂ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲೇ ಪಡೆದಿದ್ದಾರೆ.  ಅವರು ಮೊದಲ ಡೋಸ್​ನ್ನು 2021ರ ಫೆಬ್ರವರಿ 13, 2ನೇ ಡೋಸ್​ ಮಾರ್ಚ್​ 13, 3ನೇ ಡೋಸ್​ ಮೇ 19, 4-ಜೂನ್​ 16, 5-ಜುಲೈ 24, 6ನೇ ಡೋಸ್​-ಆಗಸ್ಟ್​ 31, 7ನೇ ಡೋಸ್​- ಸೆಪ್ಟೆಂಬರ್ 11, 8-ಸೆಪ್ಟೆಂಬರ್​ 22, 9ನೇ ಡೋಸ್​-ಸೆಪ್ಟೆಂಬರ್​ 24 ನಂದು ಪಡೆದಿದ್ದಾರೆ. ಇನ್ನು 10 ಹಾಗೂ 11ನೇ ಡೋಸ್​ ಪಡೆದ ದಿನಾಂಕ ಸ್ಪಷ್ಟವಾಗಿಲ್ಲ. ಆದರೆ 10ನೇ ಡೋಸ್​ನ್ನು ಖಗಾರಿಯಾ ಜಿಲ್ಲೆಯ ಪರ್ವತ್ತದಲ್ಲಿ,  11ನೇ ಡೋಸ್​​ನ್ನು ಭಗಲ್​ಪುರದ ಕಹಲ್ಗಾಂವ್​​ನಲ್ಲಿ ತೆಗೆದುಕೊಂಡಿದ್ದಾರೆ. ಅವರು ಹೀಗೆ ಅತ್ಯಂತ ಕಡಿಮೆ ಸಮಯದ ಅಂತರದಲ್ಲಿ, ಬೇರೆಬೇರೆ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಂಡಿದ್ದಲ್ಲದೆ, ಕೊರೊನಾ ಲಸಿಕೆಯನ್ನು ಹೊರತಂದು ಕೇಂದ್ರ ಸರ್ಕಾರ ತುಂಬ ಒಳ್ಳೆಯ ಕೆಲಸ ಮಾಡಿದೆ. ದಯವಿಟ್ಟು ಎಲ್ಲರೂ ಲಸಿಕೆ ಪಡೆಯಿರಿ ಎಂದು ಕರೆ ಕೊಟ್ಟಿದ್ದಾರೆ.

84ವರ್ಷದ ವೃದ್ಧ 11 ಡೋಸ್ ಪಡೆಯಲು ಸಾಧ್ಯವಾಗಿದ್ದು ಹೇಗೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆಫ್​ಲೈನ್​ ನೋಂದಣಿ ಮಾಡಿ ಲಸಿಕೆ ನೀಡಲಾಗುವ ಕ್ಯಾಂಪ್​​ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಂಪ್ಯೂಟರ್​ಲ್ಲಿ ಡಾಟಾಗಳನ್ನು ಇಡುವುದಕ್ಕೂ, ಆಫ್​ಲೈನ್​ನಲ್ಲಿ ಆಧಾರ್ ನಂಬರ್​-ಫೋನ್​ ನಂಬರ್​​ ಸಂಗ್ರಹಿಸಿ, ಲಸಿಕೆ ನೀಡುವುದಕ್ಕೂ ವ್ಯತ್ಯಾಸವಿದೆ. ಆದರೆ ಈ ವ್ಯಕ್ತಿಯ ವಿಷಯದಲ್ಲಿ ಏನಾಗಿದೆ ಎಂಬುದನ್ನು ತನಿಖೆ ನಡೆಸಲಾಗುವುದು ಎಂದು ಮಾದೇಪುರ ಜಿಲ್ಲೆಯ ಸಿವಿಲ್​ ಸರ್ಜನ್​ ಅಮರೇಂದ್ರ ಪ್ರತಾಪ್​ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಎಲ್ಲರಿಗೂ ಒಂದೇ ಅಲ್ವಾ: ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಸಿದ್ಧತೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ

Follow us on

Related Stories

Most Read Stories

Click on your DTH Provider to Add TV9 Kannada