ಕೊರೊನಾ ಎಲ್ಲರಿಗೂ ಒಂದೇ ಅಲ್ವಾ: ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಸಿದ್ಧತೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ

ಕೊರೊನಾ ಯಾರಿಗಾದರೂ ಯಾವ ಪಕ್ಷ ಅಂತ ಕೇಳಿಕೊಂಡು ಬರುತ್ತಾ? ರಾಜಕೀಯ ಪಕ್ಷಗಳಿಗೂ ತಮ್ಮದೇ ಆದ ಜವಾಬ್ದಾರಿ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ಕೊರೊನಾ ಎಲ್ಲರಿಗೂ ಒಂದೇ ಅಲ್ವಾ: ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಸಿದ್ಧತೆ ಬಗ್ಗೆ ಬೊಮ್ಮಾಯಿ ಪ್ರತಿಕ್ರಿಯೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2022 | 5:36 PM

ಮಂಡ್ಯ: ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷವು ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊರೊನಾ ಎಲ್ಲರಿಗೂ ಒಂದೇ ಅಲ್ವಾ? ಇಂಥ ಪಕ್ಷದವರಿಗೆ ಕೊರೊನಾ ಬರುವುದಿಲ್ಲ ಎಂದೇನಾದರೂ ಇದೆಯೇ ಎಂದು ಪರೋಕ್ಷವಾಗಿ ಪ್ರಶ್ನಿಸಿದರು. ನಾಗಮಂಗಲ ತಾಲ್ಲೂಕಿನ ಬಿ.ಜಿ.ನಗರ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಯಾರಿಗಾದರೂ ಯಾವ ಪಕ್ಷ ಅಂತ ಕೇಳಿಕೊಂಡು ಬರುತ್ತಾ? ರಾಜಕೀಯ ಪಕ್ಷಗಳಿಗೂ ತಮ್ಮದೇ ಆದ ಜವಾಬ್ದಾರಿ ಇರುತ್ತದೆ. ಹಿಂದೆ ಅವರೂ ಸರ್ಕಾರ ನಡೆಸಿದ್ದಾರೆ, ಕಾನೂನು ತಂದಿದ್ದಾರೆ. ಸರ್ಕಾರ ರೂಪಿಸುವ ನಿಯಮಗಳನ್ನು ಪಾಲಿಸಬೇಕು ಅನ್ನುವುದೇ ನನ್ನ ಅಪೇಕ್ಷೆ. ಕಾನೂನು ಪಾಲಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಹೇಳಿದರು.

ಕಾಂಗ್ರೆಸ್​ ರೂಪಿಸಿರುವ ಪಾದಯಾತ್ರೆಗೆ ಕೌಂಟರ್ ಎದಿರೇಟು ನೀಡಲು ನಿರ್ಧರಿಸುವ ಸರ್ಕಾರವು, ಜನವರಿ 9ರಂದು ಪೂಜೆ ನಡೆಸಲು ಚಿಂತನೆ ನಡೆಸಿದೆ. ನೀರಾವರಿ ಸಚಿವ ಗೋವಿಂದ ಕಾರಜೋಳ ಅವರೇ ಪೂಜೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್​ನ ಅಂತಿಮಯಾತ್ರೆ: ಕಟೀಲ್ ವ್ಯಂಗ್ಯ ಶಿವಮೊಗ್ಗ: ಕಾಂಗ್ರೆಸ್ ಪಕ್ಷವು ಆಯೋಜಿಸಿರುವ ಮೇಕೆದಾಟು ಪಾದಯಾತ್ರೆಯ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇದು ಕಾಂಗ್ರೆಸ್​ನ ಅಂತಿಮ ಯಾತ್ರೆ ಎಂದಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜನರ ಪ್ರಾಣ ರಕ್ಷಣೆಗಾಗಿ ಸರ್ಕಾರ ಕರ್ಫ್ಯೂ ಜಾರಿಗೊಳಿಸಿದೆ. ಸಂವಿಧಾನದ ಮೇಲೆ ಕಾಂಗ್ರೆಸ್‌ ನಾಯಕರಿಗೆ ನಂಬಿಕೆ ಇಲ್ಲ. ನಿಮ್ಮದೇ ಸರ್ಕಾರವಿದ್ದಾಗ ಏಕೆ ಯೋಜನೆ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಶಾಶ್ವತವಾಗಿ ವಿರೋಧಪಕ್ಷದಲ್ಲಿಯೇ ಇರಬೇಕಾಗಬಹುದು ಎಂಬ ಭಯ ಕಾಡುತ್ತಿದೆ. ದೇಗುಲಗಳಿಗೆ ಸ್ವಾಯತ್ತತೆ ಕೊಡಬೇಕೆಂಬುದು ಒಳ್ಳೇ ನಿರ್ಧಾರ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ತೀರ್ಮಾನ ಕೈಗೊಂಡಿದ್ದಾರೆ. ಹಿಂದೂ ವಿರೋಧಿ ಕಾಂಗ್ರೆಸ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದಾಗ ಹಿಂದೂ ವಿರೋಧಿ ನೀತಿ ಅನುಸರಿಸುತ್ತದೆ. ಟಿಪ್ಪು ಜಯಂತಿ ಆಚರಿಸಬೇಕೆಂದು ಯಾರೂ ಕೇಳಿರಲಿಲ್ಲ. ಆದರೂ ಸಿದ್ದರಾಮಯ್ಯ ಜಯಂತಿ ಮಾಡುವ ಮೂಲಕ ಧರ್ಮ, ಜಾತಿಗಳನ್ನು ಒಡೆಯುವ ಕೆಲಸ ಮಾಡಿದರು. ಅವರಿಗೆ ಧೈರ್ಯವಿದ್ದರೆ ಹಿಂದೂ ಮತಗಳು ಬೇಡ ಎನ್ನಲಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೆಲಸ ಮತ್ತು ಸಾಧನೆಯನ್ನು ಜನರು ಒಪ್ಪಿದ್ದಾರೆ. ತಜ್ಞರು ನೀಡಿರುವ ವರದಿ ಆಧರಿಸಿ ಸರ್ಕಾರವು ಕಠಿಣ ನಿಲುವು ತೆಗೆದುಕೊಂಡಿದೆ. ಯಾರಿಗೂ ತೊಂದರೆ ಇಲ್ಲದಂತೆ ನಿಯಮ ಜಾರಿಗೊಳಿಸುತ್ತಾರೆ. ಸಚಿವ ಸಂಪುಟ ಪುನರ್​ರಚನೆ ಬಗ್ಗೆ ಮುಖ್ಯಮಂತ್ರಿ ಅವರು ನಿರ್ಧಾರ ಕೈಗೊಳ್ಳುತ್ತಾರೆ. ಅದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ವಾಗ್ದಾಳಿ ಬಳ್ಳಾರಿ: ಕಾಂಗ್ರೆಸ್ ಪಕ್ಷವು ಆಯೋಜಿಸಿರುವ ಮೇಕೆದಾಟು ಪಾದಯಾತ್ರೆ ಹತ್ತಿಕ್ಕಲೆಂದೇ ಕರ್ನಾಟಕ ಸರ್ಕಾರವು ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ ಎಂದು ಬಳ್ಳಾರಿಯಲ್ಲಿ ಸರ್ಕಾರದ ಕಾಂಗ್ರೆಸ್ ಶಾಸಕ ನಾಗೇಂದ್ರ ವಾಗ್ದಾಳಿ ನಡೆಸಿದರು. ನಮ್ಮ ಪಾದಯಾತ್ರೆ ಹತ್ತಿಕ್ಕಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಪಕ್ಷವು ಜಗ್ಗುವುದಿಲ್ಲ. ನಮ್ಮ ಪಾದಯಾತ್ರೆ ಮೊದಲೇ ನಿರ್ಧಾರವಾದ ಕಾರ್ಯಕ್ರಮ. ಇದು ಕಾಂಗ್ರೆಸ್​ಗೆ ವರವಾಗುತ್ತೆ ಎಂದು ಬಿಜೆಪಿ ಕುತಂತ್ರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷಾಂತರ ಜನರನ್ನ ಸೇರಿಸಿ ಭಾಷಣ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಆಯೋಜಿಸಿರುವ ರೈತಪರ ಹೋರಾಟಕ್ಕೆ ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಇದನ್ನೂ ಓದಿ: ಮೇಕೆದಾಟು ಜಲಾಶಯ ನಿರ್ಮಾಣ ವಿವಾದ; ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್ ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ನಾವು ಪ್ಲಾನ್‌ ಮಾಡಿದ್ದನ್ನೇ ಅವರು ಶುರು ಮಾಡಕೊಂಡ್ರು -ಹೆಚ್‌ಡಿ ಕುಮಾರಸ್ವಾಮಿ