ಅಮೃತಸರ: ಫೆಬ್ರವರಿ 20ರಂದು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೂ (Punjab Assemly Polls 2022) ಮುನ್ನ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಪುತ್ರಿ ರಾಬಿಯಾ ಸಿಧು ಅಮೃತಸರ (ಪೂರ್ವ) ಕ್ಷೇತ್ರದಲ್ಲಿ ತಮ್ಮ ತಂದೆಯ ಪರ ಪ್ರಚಾರ ನಡೆಸಿದ್ದಾರೆ. ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಬಿಯಾ, ಕಾಂಗ್ರೆಸ್ ಸಿಎಂ ಅಭ್ಯರ್ಥಿ ಮತ್ತು ಹಾಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ (Charanjit Singh Channi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೇ, ನನ್ನ ತಂದೆ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ ಎಂದು ನವಜೋತ್ ಸಿಂಗ್ ಸಿಧು ಮಗಳು ರಾಬಿಯಾ ಪ್ರತಿಜ್ಞೆ ಮಾಡಿದ್ದಾರೆ.
ತಾವು ಬಡವ ಎಂದು ಚರಣ್ಜಿತ್ ಸಿಂಗ್ ಚನ್ನಿ ಘೋಷಿಸಿಕೊಂಡಿದ್ದಾರೆ. ಆದರೆ, ಅದು ನಿಜವೇ? ಅವರ ಖಾತೆಗಳನ್ನು ಪರಿಶೀಲನೆ ಮಾಡಿದರೆ ಸತ್ಯಾಂಶ ತಿಳಿಯುತ್ತದೆ. ಚನ್ನಿ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದರೆ 133 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗುತ್ತದೆ ಎಂದು ರಾಬಿಯಾ ಸಿಧು ಆರೋಪಿಸಿದ್ದಾರೆ.
ಪಂಜಾಬ್ ಚುನಾವಣೆ 2022ರ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಿ ತನ್ನ ತಂದೆಯ ಹೆಸರನ್ನು ಘೋಷಿಸದ ಬಗ್ಗೆ ರಾಬಿಯಾ ಅಸಮಾಧಾನಗೊಂಡಿದ್ದಾರೆ. ಬಹುಶಃ ಹೈಕಮಾಂಡ್ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೆ ನೀವು ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲ ತಡೆಹಿಡಿಯಲು ಸಾಧ್ಯವಿಲ್ಲ. ಯಾರಿಗೆ ಪ್ರಾಮಾಣಿಕತೆ ಇರುವುದಿಲ್ಲವೋ ಅವರು ಖಂಡಿತ ಒಂದು ದಿನ ಕೆಳಗೆ ಬೀಳುತ್ತಾರೆ ಎಂದು ರಾಬಿಯಾ ಸಿಧು ಭವಿಷ್ಯ ನುಡಿದಿದ್ದಾರೆ.
ಪಂಜಾಬ್‌ನಲ್ಲಿರುವ ಇಂದಿನ ಪರಿಸ್ಥಿತಿಯಿಂದ ನವಜೋತ್ ಸಿಂಗ್ ಸಿಧುಗೆ ನೋವಾಗಿದೆ. ನನ್ನ ತಂದೆ ಗೆಲ್ಲುವವರೆಗೂ ತಾನು ಮದುವೆಯಾಗುವುದಿಲ್ಲ ಎಂದು ರಾಬಿಯಾ ಸಿಧು ಹೇಳಿದ್ದಾರೆ. ಪಂಜಾಬ್ನ ಜನರು ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುವುದಿಲ್ಲ, ಅವರು ಸತ್ಯಕ್ಕೆ ಮತ ಹಾಕುತ್ತಾರೆ. ನಮ್ಮ ರಾಜ್ಯದ ಜನರು ಸತ್ಯಕ್ಕೆ ಮಾತ್ರ ಮತ ಹಾಕುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ರಾಬಿಯಾ ಸಿಧು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನ ತಂದೆ ನವಜೋತ್ ಸಿಂಗ್ ಸಿಧು ಕಳೆದ 14 ವರ್ಷಗಳಿಂದ ಪಂಜಾಬ್‌ಗಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪಂಜಾಬ್ ರಾಜ್ಯಕ್ಕೆ ಹೊಸ ಮಾದರಿಯನ್ನು ರಚಿಸುತ್ತಿದ್ದಾರೆ. ಅವರನ್ನು ಎಲ್ಲರೂ ಗೌರವಿಸಬೇಕು. ನನ್ನ ತಂದೆಯನ್ನು ಯಾವ ಕಾಂಗ್ರೆಸ್ ನಾಯಕರ ಜೊತೆಯೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಪಂಜಾಬ್ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ತಂದೆ ಮಾತ್ರ ಈ ರಾಜ್ಯವನ್ನು ಉಳಿಸಲು ಸಾಧ್ಯ. ನನ್ನ ತಂದೆಯ ರಾಜಕೀಯ ವಿರೋಧಿಗಳು ಮತ್ತು ಇತರರು ಅವರನ್ನು ಹಿಂದಕ್ಕೆ ತಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಬಿಯಾ ತನ್ನ ತಂದೆ ನವಜೋತ್ ಸಿಂಗ್ ಸಿಧು ವಿರುದ್ಧ ಅಮೃತಸರದಿಂದ (ಪೂರ್ವ) ಸ್ಪರ್ಧಿಸುತ್ತಿರುವ ಎಸ್‌ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಮಜಿಥಿಯಾ ಅವರು ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರ ಸೋದರ ಮಾವ. ಮಜಿಥಿಯಾ ಅಂಕಲ್ ರಾಜಕೀಯದ ಎಬಿಸಿಡಿ ಕಲಿಯಲು ನನ್ನ ತಂದೆಯ ಬಳಿಗೆ ಬಂದರು. ಒಂದು ಕಡೆ ಡ್ರಗ್ಸ್ ಮತ್ತು ಇನ್ನೊಂದು ಕಡೆ ಅಭಿವೃದ್ಧಿ, ಉದ್ಯೋಗ ಮತ್ತು ಶಿಕ್ಷಣದ ಆಯ್ಕೆಯಿದೆ. ಇದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂಬುದು ನಾಯಕನಿಗೆ ತಿಳಿದಿರಬೇಕು ಎಂದು ರಾಬಿಯಾ ಸಿಧು ಟೀಕಿಸಿದ್ದಾರೆ.
ಪಂಜಾಬ್: ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಣ್ಜಿತ್ ಸಿಂಗ್ ಚನ್ನಿ ಎಂದು ಘೋಷಿಸಿದ ರಾಹುಲ್ ಗಾಂಧಿ
Published On - 5:59 pm, Fri, 11 February 22