ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election) 5ನೇ ಹಂತದ ಮತದಾನ ಇಂದು ಶಾಂತಿಯುತವಾಗಿ ನಡೆದಿದ್ದು, ಸಂಜೆ 5ಗಂಟೆವರೆಗೆ 53.93ರಷ್ಟು ಮತದಾನ ಆಗಿದೆ. ಇಂದು ಒಟ್ಟಾರೆ 12 ಜಿಲ್ಲೆಗಳ 61 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. 693 ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಮುಂಜಾನೆ 7ಗಂಟೆಗೆ ಶುರುವಾದ ಮತದಾನ ಸಂಜೆ 6ಗಂಟೆಗೆ ಮುಕ್ತಾಯಗೊಂಡಿದೆ. 5 ಗಂಟೆವರೆಗೆ ಅತಿ ಹೆಚ್ಚು ಮತದಾನವಾಗಿದ್ದು ಚಿತ್ರಕೂಟ್ನಲ್ಲಿ. ಅಲ್ಲಿ ಶೇ. 59.64ರಷ್ಟು ಮತ ಚಲಾವಣೆಯಾಗಿದೆ. ಅದು ಬಿಟ್ಟರೆ, ಅಯೋಧ್ಯೆಯಲ್ಲಿ ಶೇ.58.01, ಶ್ರವಸ್ಟಿಯಲ್ಲಿ ಶೇ.57.24, ಕೌಶಂಬಿಯಲ್ಲಿ ಶೇ. 57.01 ಮತದಾನವಾಗಿದ್ದರೆ, ಅತ್ಯಂತ ಕಡಿಮೆ ಅಂದರೆ ಶೇ.50.25ರಷ್ಟು ಮತದಾನ ಪ್ರತಾಪ್ಗಢ್ನಲ್ಲಿ ಆಗಿದೆ.
ಇನ್ನು ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಪ್ರಾಬಲ್ಯ ಇರುವ ಅಮೇಠಿ, ರಾಯ್ಬರೇಲಿಯಲ್ಲಿ ಶೇ.52.77 ಮತ್ತು 56.06ರಷ್ಟು ಮತಚಲಾವಣೆಯಾಗಿದೆ. ಇನ್ನುಳಿದಂತೆ ಸುಲ್ತಾನ್ಪುರದಲ್ಲಿ ಶೇ.54.88, ಗೊಂಡಾದಲ್ಲಿ ಶೇ.54.31, ಬಾರಾಬಂಕಿ ಶೇ.54.65, ಬಹ್ರೈಚ್ನಲ್ಲಿ ಶೇ.55 ರಷ್ಟು ಮತದಾನವಾಗಿದೆ. ಉತ್ತರಪ್ರದೇಶದಲ್ಲಿ ಇಲ್ಲಿಯವರೆಗೆ ಒಟ್ಟು 5ಹಂತಗಳು ಮುಕ್ತಾಯವಾಗಿದ್ದು, ಇನ್ನು ಎರಡು ಹಂತಗಳಲ್ಲಿ ಮತದಾನ ಬಾಕಿಯಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಈ ಹಂತ ಬಿಜೆಪಿ ಪಾಲಿಗೆ ತುಂಬ ನಿರ್ಣಾಯಕ ಎನ್ನಿಸಿತ್ತು. ಯಾಕೆಂದ್ರೆ 2017ರಲ್ಲಿ ಇಲ್ಲಿನ 61 ಕ್ಷೇತ್ರಗಳಲ್ಲಿ 50ನ್ನು ಬಿಜೆಪಿ ಗೆದ್ದುಕೊಂಡಿತ್ತು. ಈ ಬಾರಿ ಸಮಾಜವಾದಿ ಪಕ್ಷದ ಪೈಪೋಟಿಯೂ ಹೆಚ್ಚಾಗಿದೆ.
ಇಂದು ಅವಧ್ ಪ್ರದೇಶದ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಅದರಲ್ಲೂ ಅಯೋಧ್ಯೆ ಅತ್ಯಂತ ಹೆಚ್ಚು ಕುತೂಹಲಕ್ಕೆ ಕಾರಣವಾದ ಕ್ಷೇತ್ರ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅಸ್ತು ಅಂದ ಮೇಲೆ ಅಲ್ಲಿ ಉತ್ತರ ಪ್ರದೇಶ ಬಿಜೆಪಿ ಸರ್ಕಾರ ಭರ್ಜರಿ ಅಭಿವೃದ್ಧಿ ಮಾಡುತ್ತಿದೆ. ಇಲ್ಲಿ ಬಿಜೆಪಿಯಿಂದ ವಿ.ಪಿ.ಗುಪ್ತಾ, ಸಮಾಜವಾದಿ ಪಕ್ಷದಿಂದ ಪವನ್ ಪಾಂಡೆ ಸ್ಪರ್ಧಿಸುತ್ತಿದ್ದಾರೆ. 2012ರಲ್ಲಿ ಈ ಕ್ಷೇತ್ರವನ್ನು ಪವನ್ ಪಾಂಡೆ ಗೆದ್ದುಕೊಂಡಿದ್ದರು. ಅದರಲ್ಲೂ ಕೂಡ ಐದು ಬಾರಿ ಇಲ್ಲಿಂದ ಗೆದ್ದಿದ್ದ ಬಿಜೆಪಿ ನಾಯಕ ವೇದ್ ಪ್ರಕಾಶ್ ಗುಪ್ತಾರನ್ನು ಸೋಲಿಸಿ, ಜಯ ಸಾಧಿಸಿದ್ದರು. ಆದರೆ 2017ರಲ್ಲಿ ಮತ್ತೆ ಸೋಲನುಭವಿಸಿದ್ದರು.
ಇದನ್ನೂ ಓದಿ: ಶಿಶು ವಿಹಾರಗಳು, ಶಾಲೆಗಳ ಮೇಲೆ ಕೂಡ ರಷ್ಯಾ ಸೇನೆಯಿಂದ ದಾಳಿ; ಉಕ್ರೇನಿಯನ್ ಅಧ್ಯಕ್ಷರಿಂದ ಮಾಹಿತಿ