ಶಿಶು ವಿಹಾರಗಳು, ಶಾಲೆಗಳ ಮೇಲೆ ಕೂಡ ರಷ್ಯಾ ಸೇನೆಯಿಂದ ದಾಳಿ; ಉಕ್ರೇನಿಯನ್ ಅಧ್ಯಕ್ಷರಿಂದ ಮಾಹಿತಿ
ಆಕ್ರಮಣಕಾರರು ಪ್ರತಿಯೊಂದರ ಮೇಲೆಯೂ ದಾಳಿ ಮಾಡುತ್ತಿದ್ದಾರೆ. ಅವರು ತಮ್ಮ ಗುರಿ ಇರುವುದು ಉಕ್ರೇನ್ ಶಸ್ತ್ರ ತ್ಯಜಿಸುವಂತೆ ಮಾಡುವುದು ಎಂದು ಹೇಳಿದ್ದರು. ಆದರೀಗ ಆ ಗುರಿಯನ್ನು ಮರೆತಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ಹೇಳಿದ್ದಾರೆ.
ಕೀವ್: ಉಕ್ರೇನ್ನಲ್ಲಿ ರಷ್ಯಾ ದಾಳಿ (Ukraine-Russia War) ಮುಂದುವರಿಸಿದೆ. ನಾವು ಯಾವ ಕಾರಣಕ್ಕೂ ರಷ್ಯಾಕ್ಕೆ ತಲೆಬಾಗುವುದಿಲ್ಲ ಎಂದು ಹೇಳಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ತಮಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವಂತೆ ವಿಶ್ವದ ವಿವಿಧ ದೇಶಗಳ ಬಳಿ ಮನವಿ ಮಾಡುತ್ತಿದ್ದಾರೆ. ಹಾಗೇ, ತಾವೇ ಟ್ವೀಟ್ ಮತ್ತು ವಿಡಿಯೋ ಮೂಲಕ ಅಲ್ಲಿನ ಅಪ್ಡೇಟ್ ಕೂಡ ಕೊಡುತ್ತಿದ್ದಾರೆ. ರಷ್ಯಾ ಈಗ ಜನವಸತಿ ಪ್ರದೇಶಗಳಲ್ಲೂ ದಾಳಿ ನಡೆಸುತ್ತಿದೆ. ಶನಿವಾರ ರಾತ್ರಿ ಭಯಾನಕವಾಗಿತ್ತು. ವಸತಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸುತ್ತಿತ್ತು..ಎಲ್ಲಿ ನೋಡಿದರೂ ಗುಂಡಿನ ಶಬ್ದ ಕೇಳುತ್ತಿತ್ತು ಎಂದು ಅಧ್ಯಕ್ಷ ಮಾಹಿತಿ ನೀಡಿದ್ದಾರೆ.
ಆಕ್ರಮಣಕಾರರು ಪ್ರತಿಯೊಂದರ ಮೇಲೆಯೂ ದಾಳಿ ಮಾಡುತ್ತಿದ್ದಾರೆ. ಅವರು ತಮ್ಮ ಗುರಿ ಇರುವುದು ಉಕ್ರೇನ್ ಶಸ್ತ್ರ ತ್ಯಜಿಸುವಂತೆ ಮಾಡುವುದು ಎಂದು ಹೇಳಿದ್ದರು. ಆದರೀಗ ಆ ಗುರಿಯನ್ನು ಮರೆತಿದ್ದಾರೆ. ಅವರೀಗ ವಸತಿ ಪ್ರದೇಶಗಳು, ಶಾಲೆಗಳು, ಶಿಶುವಿಹಾರಗಳ ಮೇಲೆ ಕೂಡ ದಾಳಿ ಮಾಡುತ್ತಿದ್ದಾರೆ. ಆಂಬುಲೆನ್ಸ್ಗಳನ್ನೂ ಕೂಡ ಬಿಡುತ್ತಿಲ್ಲ. ಒಂದೇ ಒಂದು ಮಿಲಿಟರಿ ವ್ಯವಸ್ಥೆ, ಉಪಕರಣಗಳು ಇಲ್ಲದ ನಗರಗಳು, ಜಿಲ್ಲೆಗಳಲ್ಲಿ ಕೂಡ ರಷ್ಯಾ ಸೇನೆ ರಾಕೆಟ್, ಕ್ಷಿಪಣಿಗಳನ್ನು ಹಾರಿಸುತ್ತಿದೆ ಎಂದು ಆರೋಪಿಸಿದ್ದಾರೆ. ವಾಸಿಲ್ಕಿವ್, ಕೀವ್, ಚೆರ್ನಿಗಿವ್, ಸುಮಿ, ಖಾರ್ಕಿವ್ ಮತ್ತು ಉಕ್ರೇನ್‌ನ ಇತರ ಅನೇಕ ಪಟ್ಟಣಗಳಲ್ಲಿ ಎರಡನೇ ಮಹಾಯುದ್ಧದ ನಂತರ ಇಂಥ ಸ್ಥಿತಿ ಎದುರಾಗಿರಲಿಲ್ಲ ಎಂದೂ ಉಕ್ರೇನ್ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಟಿಆರ್ಪಿ ರೇಸ್ನಲ್ಲಿ ಅಚ್ಚರಿ ಮೂಡಿಸಿದ ಹೊಸ ಧಾರಾವಾಹಿ; ನಾಲ್ಕೇ ಎಪಿಸೋಡ್ನಲ್ಲಿ ಆಯ್ತು ಮೋಡಿ