Video: ನಾಯಿಯನ್ನು ಬಿಟ್ಟು ಬರಲೊಲ್ಲೆ, ನಮ್ಮನ್ನು ಕೇಳುವವರೇ ಇಲ್ಲ; ಉಕ್ರೇನ್ನಿಂದ ವಿಡಿಯೋ ಮಾಡಿದ ವಿದ್ಯಾರ್ಥಿ
ಇಂದು ನಾನು ಫ್ಲೈಟ್ನಲ್ಲಿ ಭಾರತಕ್ಕೆ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಏನೇನೋ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಇಲ್ಲಿ ಊಟ-ತಿಂಡಿಯೇ ಸಿಗದಂತಾದಾಗ ಸರ್ಟಿಫಿಕೇಟ್ ಹೇಗೆ ತರಲಿ ಎಂದು ರಿಶಬ್ ಕೌಶಿಕ್ ಹೇಳಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾ ಆಕ್ರಮಣ (Russia-Ukraine War) ತೀವ್ರವಾಗಿದ್ದು, ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ಉಕ್ರೇನ್ನಲ್ಲಿ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿ ಓದುತ್ತಿರುವ ಭಾರತದ ವಿದ್ಯಾರ್ಥಿಯೊಬ್ಬರು ತಮ್ಮ ನಾಯಿಯನ್ನು ಬಿಟ್ಟು ಬರೋದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇವರ ಹೆಸರು ರಿಷಬ್ ಕೌಶಿಕ್. ಪೂರ್ವ ಉಕ್ರೇನ್ನ ನಗರವಾದ ಕಾರ್ಖೀವ್ನ ನ್ಯಾಶನಲ್ ಯೂನಿವರ್ಸಿಟಿ ಆಫ್ ರೇಡಿಯೋ ಎಲೆಕ್ಟ್ರಾನಿಕ್ಸ್ನಲ್ಲಿ ಓದುತ್ತಿದ್ದಾರೆ. ನನ್ನನ್ನು ಏರ್ಲಿಫ್ಟ್ ಮಾಡಿದಾಗ ನಾಯಿಯನ್ನೂ ನನ್ನೊಂದಿಗೆ ಕರೆದೊಯ್ಯಬೇಕು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಮಾಡಿಟ್ಟುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೇನೆ. ಆದರೆ ಅಧಿಕಾರಿಗಳು ಒಂದಾದ ಮೇಲೆ ಒಂದರಂತೆ ದಾಖಲೆಗಳನ್ನು ಕೇಳುತ್ತಿರುವುದರಿಂದ ವಿಳಂಬವಾಗುತ್ತಿದೆ ಎಂದು ರಿಶಬ್ ಹೇಳಿದ್ದಾರೆ.
ಫೆ.18ರಿಂದಲೂ ನಾನು ಭಾರತಕ್ಕೆ ವಾಪಸ್ ಬರಲು ಪ್ರಯತ್ನ ಮಾಡುತ್ತಿದ್ದೇನೆ. ನನ್ನ ಮತ್ತು ನಾನು ಸಾಕಿರುವ ನಾಯಿಯ ಪಾಸ್ಪೋರ್ಟ್ಗಳನ್ನು ಭಾರತದ ರಾಯಭಾರಿ ಕಚೇರಿಗೆ ಕಳಿಸಿದ್ದೇನೆ. ಆದರೆ ಅಧಿಕಾರಿಗಳು ಏರ್ ಟಿಕೆಟ್ ಇದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಉಕ್ರೇನ್ನಲ್ಲಿ ವಾಯುಮಾರ್ಗವೆಲ್ಲ ಬಂದ್ ಆಗಿದೆ. ಹೀಗಿರುವಾಗ ಟಿಕೆಟ್ ಎಲ್ಲಿಂದ ಸಿಗುತ್ತದೆ? ಇಲ್ಲಿ ಊಟ-ತಿಂಡಿ-ನೀರು ಏನೂ ಸಿಗುತ್ತಿಲ್ಲ. ಜನರು ಬಂಕರ್ಗಳಲ್ಲಿ ಇದ್ದಾರೆ. ನಾನೂ ಕೂಡ ಕೀವ್ನ ಬಂಕರ್ನಲ್ಲಿದ್ದೆ. ಆದರೆ ತುಂಬ ಚಳಿ ಇದ್ದ ಕಾರಣ ನಾಯಿಯನ್ನು ಕರೆದುಕೊಂಡು, ಅಲ್ಲಿಂದ ಬರಬೇಕಾಯಿತು ಎಂದು ರಿಶಬ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರನ್ನೂ ಸಂಪರ್ಕಿಸಿದ್ದೆ. ಅವರೂ ಸಹ ಸರಿಯಾಗಿ ಮಾತನಾಡಲಿಲ್ಲ ಎಂದು ರಿಶಬ್ ಆರೋಪಿಸಿದ್ದಾರೆ.
ಇಂದು ನಾನು ಫ್ಲೈಟ್ನಲ್ಲಿ ಭಾರತಕ್ಕೆ ಹೋಗಬೇಕಿತ್ತು. ಆದರೆ ಅಧಿಕಾರಿಗಳು ಏನೇನೋ ಸರ್ಟಿಫಿಕೇಟ್ ಕೇಳುತ್ತಿದ್ದಾರೆ. ಇಲ್ಲಿ ಊಟ-ತಿಂಡಿಯೇ ಸಿಗದಂತಾದಾಗ ಸರ್ಟಿಫಿಕೇಟ್ ಹೇಗೆ ತರಲಿ. ನನ್ನ ಬಳಿ ಇರುವುದು ನಾನು ಕಾರ್ಖೀವ್ನಲ್ಲಿ ರಕ್ಷಣೆ ಮಾಡಿದ ನಾಯಿ. ಈ ಪಪ್ಪಿ ಈಗಾಗಲೇ ಹೆದರಿಕೊಂಡಿದೆ. ಇಲ್ಲಿನ ಪರಿಸ್ಥಿತಿಯಿಂದಾಗಿ ಇಡೀದಿನ ಕೂಗುತ್ತಿರುತ್ತದೆ. ದಯವಿಟ್ಟು ಭಾರತ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಹಲವು ರೀತಿಯ ಫೇಕ್ನ್ಯೂಸ್ಗಳು ಹರಿದಾಡುತ್ತಿವೆ. ನಮಗೆ ಮಾತ್ರ ಯಾರನ್ನೂ ಸಂಪರ್ಕಿಸಲು, ಏನು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೊಲೆಗಡುಕರಿಗೆ ಶರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡಿ; ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಉಗ್ರ ಭಾಷಣ
Published On - 3:46 pm, Sun, 27 February 22