ತ್ರಿಪುರ ಮುಖ್ಯಮಂತ್ರಿಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ !
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ನಾವು ಈಗಾಗಲೇ ತನಿಖೆ ಶುರು ಮಾಡಿದ್ದೇವೆ. ಸಂಘರ್ಷ ಪ್ರಾರಂಭ ಆಗಿದ್ದು ಎಲ್ಲಿಂದ? ಮೊದಲು ಶುರು ಮಾಡಿದ್ದು ಯಾರು ಎಂಬುದನ್ನು ಶೀಘ್ರವೇ ಪತ್ತೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ (Clashes Between BJP And Congress Workers) ನಡುವಿನ ಘರ್ಷಣೆಯ ಕಾರಣಕ್ಕೆ ಅಗರ್ತಲಾದ ಹಲವು ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಕುಮಾರ್ ಅವರ ವಿಧಾನಸಭಾ ಕ್ಷೇತ್ರ ಬನಮಾಲಿಪುರ್ನಲ್ಲಿ ಶನಿವಾರ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿತ್ತು. ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವವರು ಇದ್ದರು. ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ಸಿಗರ ನಡುವೆ ಹೊಡೆದಾಟ ನಡೆದಿದೆ. ಸ್ಥಳೀಯ ಬಿಜೆಪಿ ಕಚೇರಿಯೂ ಭಾಗಶಃ ಧ್ವಂಸಗೊಂಡಿದೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕ, ಸಚಿವ ಸುದೀಪ್ ರಾಯ್ ಬರ್ಮನ್ರಿಗೆ ಸ್ವಲ್ಪ ಮಟ್ಟಿಗೆ ಗಾಯವಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ, ನಾವು ಈಗಾಗಲೇ ತನಿಖೆ ಶುರು ಮಾಡಿದ್ದೇವೆ. ಸಂಘರ್ಷ ಪ್ರಾರಂಭ ಆಗಿದ್ದು ಎಲ್ಲಿಂದ? ಮೊದಲು ಶುರು ಮಾಡಿದ್ದು ಯಾರು ಎಂಬುದನ್ನು ಶೀಘ್ರವೇ ಪತ್ತೆ ಮಾಡಲಿದ್ದೇವೆ. ಆದರೆ ಇದುವರೆಗೂ ಯಾರೂ, ಯಾರ ವಿರುದ್ಧವೂ ದೂರು ನೀಡಿಲ್ಲ. ಶನಿವಾರ ರಾತ್ರಿಯಿಡೀ ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಾಗೊಮ್ಮೆ ಗಲಾಟೆಯನ್ನು ಯಾರಾದರೂ ಮುಂದುವರಿಸಿದರೆ ಅಂಥವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ನಬೇಂದು ಭಟ್ಟಾಚಾರ್ಯ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಕಾರ್ಯಕರ್ತರ ದಾಳಿಯಿಂದಾಗಿ ನಮ್ಮ ಬಿಜೆಪಿ ಮಂಡಲ ಕಚೇರಿ ಧ್ವಂಸವಾಗಿದೆ. ಪಕ್ಷದಲ್ಲಿ ಹಲವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕಲಹ ಶುರುವಾಗಿದ್ದು ಕಾಂಗ್ರೆಸ್ನ ಆಂತರಿಕ ಸಮಸ್ಯೆಯಿಂದ. ಆದರೆ ನಂತರ ಬಿಜೆಪಿ ಮೇಲೆ ಆರೋಪಿಸಲಾಗುತ್ತಿದೆ. ಅವರ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Shivamogga: ನಾಳೆಯಿಂದ ಶಾಲಾ ಕಾಲೇಜು ಪುನಾರಂಭ: ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ




