UP Assembly Poll: ಮುಲಾಯಂ ಸಿಂಗ್ ಯಾದವ್, ಜಯಾ ಬಚ್ಚನ್ ಸಮಾಜವಾದಿ ಪಕ್ಷದ ಸ್ಟಾರ್ ಪ್ರಚಾರಕರು; ಇನ್ನೂ ಯಾರೆಲ್ಲ ಇದ್ದಾರೆ?
ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಬಿಜೆಪಿಗೆ ನೇರಾನೇರ ಸ್ಪರ್ಧೆ ಕೊಡುತ್ತಿರುವುದು ಅಖಿಲೇಶ್ ಯಾದವ್ ಪಕ್ಷ ಸಮಾಜವಾದಿ ಪಾರ್ಟಿ ಎಂದೇ ಹೇಳಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಉತ್ತರಪ್ರದೇಶದ ಆಡಳಿತ ಹಿಡಿಯುವ ಆತುರದಲ್ಲಿದೆ.
ಲಖನೌ: ಮುಂಬರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election) ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಇಂದು 30 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಧಾನಸಭೆ ಚುನಾವಣೆಯ ಮೊದಲ ಹಂತದ ಸ್ಟಾರ್ ಪ್ರಚಾರಕ ಪಟ್ಟಿ ಇದಾಗಿದ್ದು, ಪಕ್ಷದ ಹಿರಿಯ ನಾಯಕ, ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್, ಅವರ ಪುತ್ರ (ಎಸ್ಪಿ ಅಧ್ಯಕ್ಷ) ಅಖಿಲೇಶ್ ಯಾದವ್, ಸೊಸೆ ಡಿಂಪಲ್ ಯಾದವ್ (ಅಖಿಲೇಶ್ ಪತ್ನಿ), ರಾಜ್ಯ ಸಭಾ ಸಂಸದೆ ಜಯಾ ಬಚ್ಚನ್, ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್, ಶಾಸಕ ಸ್ವಾಮಿ ಪ್ರಸಾದ್ ಮೌರ್ಯ (ಇತ್ತೀಚೆಗಷ್ಟೇ ಬಿಜೆಪಿ ತೊರೆದ ಮಾಜಿ ಸಚಿವ) ಇತರರ ಹೆಸರು ಇದೆ.
ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, ಅಲ್ಲಿ ಬಿಜೆಪಿಗೆ ನೇರಾನೇರ ಸ್ಪರ್ಧೆ ಕೊಡುತ್ತಿರುವುದು ಅಖಿಲೇಶ್ ಯಾದವ್ ಪಕ್ಷ ಸಮಾಜವಾದಿ ಪಾರ್ಟಿ ಎಂದೇ ಹೇಳಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಉತ್ತರಪ್ರದೇಶದ ಆಡಳಿತ ಹಿಡಿಯುವ ಆತುರದಲ್ಲಿದೆ. ಅಖಿಲೇಶ್ ಯಾದವ್ ಸದ್ಯ ಅಜಂಗಢ್ನ ಲೋಕಸಭಾ ಸದಸ್ಯರಾಗಿದ್ದು, ಮೈನ್‌ಪುರಿಯ ಕರ್ಹಾಲ್ ಕ್ಷೇತ್ರದಿಂದ ಈ ಬಾರಿ ವಿಧಾನಸಭಾ ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ. ಹಾಗೇ, ಚುನಾವಣೆಗೂ ಪೂರ್ವ ಇಲ್ಲಿ ಪಕ್ಷಾಂತರ ಪರ್ವ ಕೂಡ ಜೋರಾಗಿ ನಡೆಯುತ್ತಿದೆ. ಬಿಜೆಪಿಯ ಮೂವರು ಸಚಿವರು ಸೇರಿ ಹಲವು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರಿದ್ದರೆ, ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ (ಎರಡನೇ ಪತ್ನಿಯ ಪುತ್ರ) ಪ್ರತೀಕ್ ಯಾದವ್ ಪತ್ನಿ ಅಪರ್ಣಾ ಯಾದವ್ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಉತ್ತರಪ್ರದೇಶದಲ್ಲಿ ಬಿಜೆಪಿ ಕೂಡ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಗೋರಖ್ಪುರ ಕ್ಷೇತ್ರ ಅಭ್ಯರ್ಥಿ, ಪ್ರಸ್ತುತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವರಾದ ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ ಸೇರಿ ಒಟ್ಟು 30 ಜನರ ಹೆಸರಿದೆ. ಬಹುಮುಖ್ಯವಾಗಿ ಪಿಲಿಭಿತ್ ಸಂಸದ ವರುಣ್ ಗಾಂಧಿ ಹಾಗೂ ಅವರ ತಾಯಿ ಮನೇಕಾ ಗಾಂಧಿಯವರ ಹೆಸರನ್ನು ಕೈಬಿಡಲಾಗಿದೆ. ಇತ್ತೀಚೆಗಷ್ಟೇ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದಲೂ ಅವರನ್ನು ಹೊರಗಿಡಲಾಗಿತ್ತು. ಇಲ್ಲಿ ವರುಣ್ ಗಾಂಧಿ ಪದೇಪದೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಅವರನ್ನು ದೂರ ಇಟ್ಟಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್-ಐಶ್ವರ್ಯಾ?