West Bengal Elections 2021: ಚುನಾವಣೆ ಹೊಸ್ತಿಲಲ್ಲೇ ಟಿಎಂಸಿ ತೊರೆದು ಬಿಜೆಪಿ ಸೇರುತ್ತಿರುವ ನಾಯಕರು; ಇಂದು ಸೇರಿದವರಾರು?
ಟಿಎಂಸಿ ದೆಬಶ್ರೀ ರಾಯ್ರಿಗೆ ಟಿಕೆಟ್ ನೀಡದೇ ನಿರಾಸೆ ಉಂಟುಮಾಡಿತ್ತು. ಈ ಕಾರಣ ನೀಡಿ ಉತ್ತರ 24 ಪರಗಣದ ರಾಯ್ದಿಗಿ ಕ್ಷೇತ್ರದ ಶಾಸಕಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಕಮಲದ ಹೂ ಮುಡಿಯುವ ಸಂಭವವಂತೂ ಇದ್ದೇ ಇದೆ..

ಕೋಲ್ಕತ್ತಾ: ಬಂಗಾಳ ಚುನಾವಣೆಗೆ ಇನ್ನು ಹೆಚ್ಚು ದಿನಗಳಿಲ್ಲ. ದೇಶದ ಇತರ ರಾಜ್ಯಗಳಲ್ಲಿ ಕಂಡುಬರದಷ್ಟು ಪಕ್ಷಾಂತರ ಪ್ರಕ್ರಿಯೆ ಪಶ್ಚಿಮ ಬಂಗಾಳದಲ್ಲಿ ಕಂಡುಬರು ತ್ತಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ರಾಜಕೀಯ ನಾಯಕರು ಜಿಗಿಯದ ದಿನವೇ ಇಲ್ಲ ಎಂದರೂ ತಪ್ಪಾಗದು. ಅಷ್ಟೊಂದು ಪಕ್ಷಾಂತರ ಪರ್ವದ ಬಿರುಸು ಕೋಲ್ಕತ್ತಾದಲ್ಲಿದೆ. ಸ್ಥಳೀಯ ರಾಜಕೀಯ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಇತರ ಎಲ್ಲ ಪಕ್ಷಗಳಿಗಿಂತ ಬಿಜೆಪಿಯೇ ಮುಂದಿದೆ. ಇಂದೂ ಸಹ ಟಿಎಂಸಿಯ ಹಲವು ನಾಯಕರು ಬಿಜೆಪಿ ಸೇರಿದ್ದಾರೆ.
ಇಂದು ಹಲವು ಸ್ಥಳೀಯ ನಾಯಕರು ಟಿಎಂಸಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹಲ್ದಿಯಾ ನಗರ ಪಾಲಿಕೆಯ ಮಾಜಿ ಅಧ್ಯಕ್ಷ ಶ್ಯಾಮಲ್ ಕುಮಾರ್ ಆದಕ್, ಸ್ಥಳೀಯ ಮುಖಂಡರಾದ ಸ್ವಪನ್ ದಾಸ್ ಮತ್ತು ಸುಪ್ರಿಯಾ ಮೇಟಿಯವರು ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈಗಾಗಲೇ ತಮ್ಮ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಟಿಎಂಸಿಯ ದೆಬಶ್ರೀ ರಾಯ್ ಟಿಎಂಸಿಗೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಮೂಲತಃ ಕಲಾವಿದೆ, ನಟಿಯೂ ಆಗಿದ್ದ ಅವರು ಟಿಎಂಸಿಯಿಂದ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಟಿಎಂಸಿ ದೆಬಶ್ರೀ ರಾಯ್ರಿಗೆ ಟಿಕೆಟ್ ನೀಡದೇ ನಿರಾಸೆ ಉಂಟುಮಾಡಿತ್ತು. ಈ ಕಾರಣ ನೀಡಿ ಉತ್ತರ 24 ಪರಗಣದ ರಾಯ್ದಿಗಿ ಕ್ಷೇತ್ರದ ಶಾಸಕಿ ರಾಜೀನಾಮೆ ಸಲ್ಲಿಸಿ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಅವರು ಬಿಜೆಪಿ ಸೇರುವ ಕುರಿತು ಊಹಾಪೋಹಗಳು ಬಂಗಾಳದ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಆದರೆ ದೆಬಶ್ರೀ ರಾಯ್ ಅವರು ಬಿಜೆಪಿ ಸೇರುವುದು ಅಷ್ಟು ಸುಲಭದ್ದಲ್ಲ. ಅವರ ಸೇರ್ಪಡೆಗೆ ಟಿಎಂಸಿಯಿಂದ ಬಿಜೆಪಿ ಸೇರಿದ ಸೋವನ್ ಚಟರ್ಜಿ ಅವರ ವಿರೋಧವಿದೆ. ಸೋವನ್ ಚಟರ್ಜಿ ಕೋಲ್ಕತ್ತಾದ ಮೇಯರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದವರು. ತಳಮಟ್ಟದ ಕಾರ್ಯಕರ್ತ ಜತೆ ಸಂಪರ್ಕ ಹೊಂದಿರುವ ಅವರಿಂದ ಬಿಜೆಪಿ ಪಡೆಯುವ ಲಾಭ ಒಂದೆರಡಲ್ಲ. ಇಂತಹ ನಾಯಕ ಹೇಳಿದ್ದೇನೆಂದರೆ, ‘ ಒಂದು ವೇಳೆ ದೆಬಶ್ರೀ ರಾಯ್ ಬಿಜೆಪಿ ಸೇರಿದರೆ ನಾನು ಬಿಜೆಪಿ ತೊರೆಯುತ್ತೇನೆ’. ಇವರಿಬ್ಬರೂ ಮೂಲತಃ ಟಿಎಂಸಿಗರೇ ಆಗಿದ್ದರೂ ಬಿಜೆಪಿ ಸೇರುವ ವಿಷಯದಲ್ಲಿ ಒಮ್ಮತ ಮೂಡುವ ಸಂಭವ ಕಾಣುತ್ತಿಲ್ಲ.
ಸದ್ಯ ಗೆಲ್ಲಲೇಬೇಕು ಎಂಬುದಷ್ಟೇ ಬಿಜೆಪಿ ಎದುರಿರುವ ಗುರಿ. ಇದೇ ಕಾರಣದಿಂದ ಬಿಜೆಪಿ ಟಿಎಂಸಿಯ ತಳಮಟ್ಟದ ನಾಯಕರನ್ನು ಪಕ್ಷಕ್ಕೆ ಆದರದಿಂದ ಬರಮಾಡಿಕೊಳ್ಳುತ್ತಿದೆ. ಆದರೆ, ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಸೇರಿದ ನಾಯಕರ ಬಗ್ಗೆ ಇದೇ ‘ಆದರ’ ಮುಂದಿನ ಎಷ್ಟು ದಿನಗಳ ಕಾಲ ಸಕ್ರಿಯವಾಗಿರಲಿದೆ ಎಂಬ ಪ್ರಶ್ನೆಯಿದೆ. ಏಕೆಂದರೆ, ಗೆದ್ದರೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ಸೇರಿದ ನಾಯಕರಿಗೆ ಅಧಿಕಾರ ಹಂಚುವ ಸಾಹಸ ಬಿಜೆಪಿಗೆ ಎದುರಾಗುವುದು ಗ್ಯಾರಂಟಿ. ಸೋತರೆ, ಚುನಾವಣೆಯ ಹೊಸ್ತಿಲಲ್ಲಿ ಸೇರಿದ ಎಷ್ಟು ನಾಯಕರು ಬಿಜೆಪಿಯಲ್ಲೇ ಉಳಿಯಲಿದ್ದಾರೆ, ಪಕ್ಷ ಸಂಘಟನೆ ಮಾಡಲಿದ್ದಾರೆ ಎಂಬುದು ಯಕ್ಷಪ್ರಶ್ನೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ



