ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಪಂಚರಾಜ್ಯಗಳ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯಲ್ಲಿ ಜಿ 23 ಬಣದ ನಾಯಕರನ್ನು ಸೇರಿಸದಿರುವ ಕುರಿತು ಕಪಿಲ್ ಸಿಬಲ್ ಹೆಚ್ಚೇನು ತಲೆಕೆಡಿಸಿಕೊಂಡಂತಿಲ್ಲ. ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ ಯಾವುದೇ ಹುದ್ದೆ ನೀಡದಿದ್ದರೂ ಕಾಂಗ್ರೆಸ್ನ ಎಲ್ಲಾ ನಾಯಕರೂ ತಮ್ಮ ಕರ್ತವ್ಯ ಪಾಲಿಸಲಿದ್ದಾರೆ ಎಂದು ಹೇಳುವ ಮೂಲಕ ಅವರು ತಮ್ಮ ಬಗೆಗಿನ ಪಕ್ಷನಿಷ್ಠೆಯಲ್ಲಿ ಯಾವುದೇ ಚಕಾರಕ್ಕೆ ಆಸ್ಪದ ನೀಡಿಲ್ಲ.
ಕಾಂಗ್ರೆಸ್ ನಾಯಕತ್ವ ಬದಲಾವಣೆಯಾಗಬೇಕಿದೆ. ಮತ್ತು ಇನ್ನಷ್ಟು ಬಲಿಷ್ಠಗೊಳ್ಳಬೇಕಿದೆ ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರಿಕೆಗಾಗಿ ನಮ್ಮ ಮತ್ತು ಪಕ್ಷದ ವರಿಷ್ಠರ ನಡುವಿನ ಸಂವಹನ ಇನ್ನಷ್ಟು ಬಲಗೊಳ್ಳಬೇಕಿದೆ ಎಂಬ ಕಪಿಲ್ ಸಿಬಲ್ ಮಾತುಗಳು ಮತ್ತು ಉಳಿದ 22 ಜನರ ತಂಡ ತಮ್ಮ ಬೇಡಿಕೆಗಳನ್ನು ಮರೆತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
ಹಾಗಾದರೆ, ರಾಹುಲ್ ಗಾಂಧಿಯನ್ನು ಬಿಟ್ಟರೆ ಕಾಂಗ್ರೆಸ್ನ ಚುಕ್ಕಾಣಿ ಹಿಡಿಯುವ ನಾಯಕ ಯಾರು ? ಎಂಬುದು ಚಿಕ್ಕ ಪ್ರಶ್ನೆಯೇನಲ್ಲ. ಇದಕ್ಕೂ ಉತ್ತರ ನೀಡಿರುವ ಅವರು ಪಕ್ಷದ ಆಂತರಿಕ ಚುನಾವಣೆಗಳಲ್ಲಿ ‘ಭವಿಷ್ಯದ ನೇತಾರರ ಉಗಮವಾಗುತ್ತದೆ’ ಎಂದು ವಿಶ್ವಾಸದ ನಗು ಬೀರುತ್ತಾರೆ.
ಸದ್ಯ ಅಸ್ತಿತ್ವದಲ್ಲಿರುವ ಕೇಂದ್ರ ಸರ್ಕಾರವನ್ನು ರಚಿಸಿರುವ ಪಕ್ಷಕ್ಕೆ ಪರ್ಯಾಯವೆಂದರೆ ಕಾಂಗ್ರೆಸ್ ಮಾತ್ರ. ಕೇಂದ್ರ ಸರ್ಕಾರದ ನಡೆಗಳು ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ತಂದಿದೆ. ಇದನ್ನು ಪುನರ್ಸ್ಥಾಪಿಸಲು ಶಕ್ತಿ ಕಾಂಗ್ರೆಸ್ ಬಳಿ ಮಾತ್ರ ಸಾಧ್ಯ ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ವಯಂ ಹಿತಾಸಕ್ತಿಗೋಸ್ಕರ ಕಾಂಗ್ರೆಸ್ ನಾಯಕತ್ವದ ಬದಲಾವಣೆಗೆ ಅಗ್ರಹಿಸಿದ್ದಾರೆ ಎಂಬ ಆರೋಪ ಜಿ 23 ಬಣದ ಮೇಲಿದೆ. ‘ನಾನು ರಾಜ್ಯಸಭಾ ಸದಸ್ಯ ಸ್ಥಾನದಿಂದ 2020ರಲ್ಲಿ ನಿವೃತ್ತರಾಗುತ್ತೇನೆ. ಉಳಿದ ಜಿ 23 ಬಣದ ಪ್ರಮುಖ ನಾಯಕರಾದ ಶಶಿ ತರೂರ್, ಮನೀಶ್ ತಿವಾರಿ, ಆನಂದ್ ಶರ್ಮಾ ಅವರುಗಳು 2024ರವರೆಗೆ ಸಂಸತ್ ಸದಸ್ಯರಾಗಿ ಮುಂದುವರೆಯಲಿದ್ದಾರೆ. ಹೀಗಾಗಿ ಕೇವಲ ಅಧಿಕಾರ ಪಡೆಯುವ ಹಿತಾಸಕ್ತಿ ಇಟ್ಟುಕೊಂಡು ಕಾಂಗ್ರೆಸ್ ನಾಯಕತ್ವ ಬದಲಾಗಬೇಕು ಎಂದು ಬೇಡಿಕೆಯಿಟ್ಟಿಲ್ಲ ಎಂದು ಸಿಬಲ್ ವಿವಾದಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಬಿಜೆಪಿಗೆ ಸಹಕರಿಸುವ ಉದ್ದೇಶದಿಂದ ನಾಯಕತ್ವ ಬದಲಾವಣೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವನ್ನೂ ಅವರು ತಳ್ಳಿಹಾಕುತ್ತಾರೆ.
ಕಳೆದ ಆಗಸ್ಟ್ನಲ್ಲಿ ಇಟ್ಟ ಬೇಡಿಕೆಗೆ ಈವರೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದೇ ಹೇಳುವ ಕಪಿಲ್ ಸಿಬಲ್, ಸದ್ಯ ಪಂಚರಾಜ್ಯಗಳಲ್ಲಿ ಪ್ರಚಾರ ನಡೆಯುತ್ತಿದೆ. ಚುನಾವಣೆ ಮುಗಿದ ನಂತರ ಜೂನ್ನಲ್ಲಿ ಪಕ್ಷದ ಕಾರ್ಯಕಾರಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಿಶ್ಚಯಿಸಲಾಗಿದೆ. ಇದು ನಮ್ಮ ಬೇಡಿಕೆಗೆ ಮನ್ನಣೆ ನೀಡಿದ ಸೂಚನೆ ಎಂದು ಕಪಿಲ್ ವ್ಯಾಖ್ಯಾನಿಸುತ್ತಾರೆ.
ಇದನ್ನೂ ಓದಿ: Explainer: ಕಾಂಗ್ರೆಸ್ ಪಕ್ಷದ ಬೊಕ್ಕಸ ಖಾಲಿಖಾಲಿ; ಹಣ ಶೇಖರಿಸುವಂತೆ ರಾಜ್ಯ ಘಟಕಗಳಿಗೆ ತುರ್ತು ಸಂದೇಶ!