ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕೆ ಆಯೋಗದ ನಿರ್ಬಂಧ: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಕೇವಲ 500 ಮಂದಿಗೆ ಅವಕಾಶ

West Bengal Assembly Elections: ನಿಮ್ಮಿಂದ ಕ್ರಮ ಕೈಗೊಳ್ಳಲು ಆಗದಿದ್ದರೆ ನಾವು ಏನು ಮಾಡಬೇಕೋ ಮಾಡ್ತೀವಿ ಎಂದು ಕಲ್ಕತ್ತಾ ಹೈಕೋರ್ಟ್​ ನೇರವಾಗಿ ತರಾಟೆಗೆ ತೆಗೆದುಕೊಂಡ ನಂತರ ಚುನಾವಣಾ ಆಯೋಗ ಎಚ್ಚೆತ್ತು ಕೊರೊನಾ ಸೋಂಕು ತಡೆಯಲು ಪೂರಕವಾಗಿ ಕೆಲ ಕ್ರಮಗಳನ್ನು ಘೋಷಿಸಿದೆ.

  • TV9 Web Team
  • Published On - 21:40 PM, 22 Apr 2021
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕೆ ಆಯೋಗದ ನಿರ್ಬಂಧ: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಕೇವಲ 500 ಮಂದಿಗೆ ಅವಕಾಶ
ಕಲ್ಕತ್ತಾ ಹೈಕೋರ್ಟ್​

ದೆಹಲಿ: ಪಶ್ಚಿಮ ಬಂಗಾಳದಲ್ಲಿ ಇನ್ನು ಮುಂದೆ ಯಾವುದೇ ರ‍್ಯಾಲಿ, ಪಾದಯಾತ್ರೆ ಅಥವಾ ರೋಡ್​ಶೋಗಳು ನಡೆಯುವಂತಿಲ್ಲ ಎಂದು ಚುನಾವಣಾ ಆಯೋಗವು ಇಂದು (ಏಪ್ರಿಲ್ 22) ಸಂಜೆ ಘೋಷಿಸಿದೆ. ಕೊರೊನಾ ವಿಚಾರದಲ್ಲಿ ಚುನಾವಣಾ ಆಯೋಗದ ವರ್ತನೆಯನ್ನು ಕಲ್ಕತ್ತಾ ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳ ತರುವಾಯ ಆಯೋಗ ಈ ಆದೇಶ ಹೊರಡಿಸಿದೆ. ರ‍್ಯಾಲಿ ಮತ್ತು ಪಾದಯಾತ್ರೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಈ ಹಿಂದೆ ನೀಡಿದ್ದ ಎಲ್ಲ ಆದೇಶ, ಅನುಮತಿಗಳು ಇದೀಗ ರದ್ದಾಗಲಿವೆ. ಯಾವುದೇ ಸಭೆಯಲ್ಲಿ 500 ಜನರಿಗಿಂತಲೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಚುನಾವಣಾ ರ‍್ಯಾಲಿಗಳು ಕೊರೊನಾ ಸೋಂಕು ವೇಗವಾಗಿ ಹರಡಲು ಸೂಪರ್ ಸ್ಪ್ರೆಡರ್​ಗಳಾಗಿ ಕೆಲಸ ಮಾಡಬಲ್ಲವು ಎಂಬ ಆತಂಕ ವ್ಯಕ್ತವಾದ ಹಿನ್ನಲೆಯಲ್ಲಿ ಈ ಸಂಬಂಧ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ಕಲ್ಕತ್ತಾ ಹೈಕೋರ್ಟ್​ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಚುನಾವಣಾ ಪ್ರಚಾರದಿಂದ ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಚುನಾವಣಾ ಆಯೋಗ ತೆಗೆದುಕೊಂಡ ಕ್ರಮಗಳನ್ನು ನಾಳೆಯೊಳಗೆ (ಏಪ್ರಿಲ್ 23) ತಿಳಿಸಬೇಕೆಂದು, ಕಾರ್ಯಪಾಲನಾ ವರದಿ ಸಲ್ಲಿಸಬೇಕೆಂದು ಸೂಚಿಸಿತ್ತು. ಒಂದು ವೇಳೆ ಚುನಾವಣಾ ಆಯೋಗವು ಈ ಸಂಬಂಧ ಕ್ರಮ ತೆಗೆದುಕೊಳ್ಳಲು ವಿಫಲವಾದರೆ, ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ನ್ಯಾಯಮೂರ್ತಿಗಳು ಕಟುನುಡಿಗಳಲ್ಲಿ ಹೇಳಿದ್ದರು.

ಸಾರ್ವಜನಿಕ ಸಭೆಗಳನ್ನು ನಡೆಸುವ ವಿಚಾರದಲ್ಲಿ ಹಲವು ರಾಜಕೀಯ ಪಕ್ಷಗಳು ಕೊರೊನಾ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂಬುದನ್ನು ನೋವಿನಿಂದ ಉಲ್ಲೇಖಿಸುತ್ತಿದ್ದೇವೆ. ಹೀಗಾಗಿಯೇ ಇಂಥ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಯಿತು ಎಂದು ತನ್ನ ಆದೇಶದಲ್ಲಿ ಚುನಾವಣಾ ಆಯೋಗ ಹೇಳಿದೆ.

ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಾಕಿಯಿರುವ ಇತರ ಮೂರು ಹಂತಗಳ ಚುನಾವಣೆಗಳನ್ನು ಒಮ್ಮೆಲೆ ನಡೆಸಬೇಕೆಂಬ ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ ಬ್ರೇನ್ ಮತ್ತು ಕಾಂಗ್ರೆಸ್​ ನಾಯಕ ಅಧೀರ್ ಚೌಧರಿ ಅವರ ಮನವಿಯನ್ನು ಚುನಾವಣಾ ಆಯೋಗವು ನಿನ್ನೆಯಷ್ಟೇ ತಳ್ಳಿ ಹಾಕಿತ್ತು. ‘ನಾವು ಈಗಾಗಲೇ ಕೊವಿಡ್ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪ್ರತಿದಿನದ ಪ್ರಚಾರ ಅವಧಿಯನ್ನು ಕಡಿತಗೊಳಿಸಿದ್ದೇವೆ, ಮತದಾನಕ್ಕೆ ಮೂರು ದಿನ ಮೊದಲು (72 ಗಂಟೆ) ಪ್ರಚಾರ ನಿಲ್ಲಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿಕೊಂಡಿತ್ತು.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್​, ‘ಕೊರೊನಾ ಸೋಂಕು ತಡೆಯಲು ಚುನಾವಣಾ ಆಯೋಗವು ಸಾಕಷ್ಟು ಕೆಲಸ ಮಾಡುತ್ತಿಲ್ಲ. ಕೇವಲ ಅಧಿಸೂಚನೆಗಳನ್ನು ಹೊರಡಿಸಿ ಕೈತೊಳೆದುಕೊಳ್ಳುತ್ತಿದೆ. ಜನರನ್ನು ಅವರ ಪಾಡಿಗೆ ಬಿಟ್ಟುಬಿಟ್ಟಿದೆ. ತನಗೆ ಅನುಷ್ಠಾನದ ಹೊಣೆಯಿದೆ ಎಂಬುದನ್ನೇ ಆಯೋಗ ಮರೆತಂತೆ ಇದೆ’ ಎಂದು ತಪರಾಕಿ ನೀಡಿತ್ತು.

ಚುನಾವಣಾ ಆಯುಕ್ತರಾಗಿದ್ದ ದಿವಂಗತ ಟಿ.ಎನ್.ಶೇಷನ್ ಅವರನ್ನು ನೆನಪಿಸಿಕೊಂಡಿದ್ದ ಹೈಕೋರ್ಟ್​, ‘ಶೇಷನ್ ಅವರು ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದರು. ಮಾದರಿ ನೀತಿ ಸಂಹಿತೆಯ ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡಿಸುತ್ತಿದ್ದರು. ಎಲ್ಲ ರಾಜಕೀಯ ಪಕ್ಷಗಳೂ ಆಯೋಗದ ಮಾತು ಕೇಳುವಂತೆ ಮಾಡಿದ್ದರು. ಚುನಾವಣಾ ಆಯೋಗವು ಟಿ.ಎನ್.ಶೇಷನ್ ಮಾಡುತ್ತಿದ್ದ ಕೆಲಸದಲ್ಲಿ 10ನೇ ಒಂದು ಭಾಗದಷ್ಟೂ ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ’ ಎಂದು ಕಟುವಾಗಿ ಹೇಳಿತ್ತು. ಹೈಕೋರ್ಟ್​ ಮಾತನ್ನು ಗಂಭೀರವಾಗಿ ತೆಗೆದುಕೊಂಡಿರುವ ಆಯೋಗ ಇದೀಗ ಹೊಸ ಆದೇಶ ಹೊರಡಿಸಿ, ಎಲ್ಲ ರೀತಿಯ ಪ್ರಚಾರ ರ‍್ಯಾಲಿಗಳನ್ನು ರದ್ದುಪಡಿಸಿದೆ.