ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ದೆಹಲಿ ಮಹಿಳೆಯರ ಬಗ್ಗೆ ನರೇಂದ್ರ ಮೋದಿ ಯೋಚಿಸಲಿ: ಮಮತಾ ಬ್ಯಾನರ್ಜಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರವಿವಾರದಂದು ಕೊಲ್ಕತಾದ ಬ್ರಿಗೇಡ್ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಮಮತಾ ಮತ್ತು ಅವರ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇಂದು ನಡೆಸಿದ ಪಾದಯಾತ್ರೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ದೆಹಲಿ ಮಹಿಳೆಯರ ಬಗ್ಗೆ ನರೇಂದ್ರ ಮೋದಿ ಯೋಚಿಸಲಿ: ಮಮತಾ ಬ್ಯಾನರ್ಜಿ
ಕೊಲ್ಕತಾದಲ್ಲಿ ಮಮತಾ ಬ್ಯಾನರ್ಜಿ ಪಾದಯಾತ್ರೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 08, 2021 | 8:20 PM

ಕೊಲ್ಕತಾ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರದಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲ್ಕತಾದಲ್ಲಿ ಪಾದಯಾತ್ರೆ ನಡೆಸಿದರು. ಮಾರ್ಚ್​ 27 ರಿಂದ ಆರಂಭಗೊಂಡು 8 ಹಂತದ ವಿಧಾನಸಭೆ ಚುನಾವಣೆಗೆ ವೇದಿಕೆ ಸೃಷ್ಟಿಯಾದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವಿವಾರ ಕೊಲ್ಕತಾದ ಬ್ರಿಗೇಡ್ ಮೈದಾನದಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಮಮತಾ ಮತ್ತು ಅವರ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ನಡೆಸಿದ ಪಾದಯಾತ್ರೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಅವರ ಪಾದಯಾತ್ರೆಯಲ್ಲಿ ಮಹಿಳೆಯರೇ ಅಪಾರ ಸಂಖ್ಯೆಯಲ್ಲಿದ್ದರು. ಸಾಯೋನಿ ಘೋಷ್, ಕೌಶಾನೀ ಮುಖರ್ಜಿ ಜೊತೆ ಇತ್ತೀಚಿಗೆ ತೃಣಮೂಲ ಕಾಂಗ್ರೆಸ್ ಸೇರಿದ ಹಲವಾರು ಸೆಲಿಬ್ರಿಟಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ನಗರದ ಕಾಲೇಜ್ ಸ್ಟ್ರೀಟ್​ನಿಂದ ದೊರಿನಾ ಕ್ರಾಸಿಂಗ್​ವರೆಗೆ ನಡೆದ ಪಾದಯಾತ್ರೆಯಲ್ಲಿ ಮಮತಾ ಮುಂಚೂಣಿಯಲ್ಲಿದ್ದರು.

ರವಿವಾರದ ರ‍್ಯಾಲಿಯಲ್ಲಿ ಪ್ರಧಾನ ಮಂತ್ರಿ ಮೋದಿಯವರು, ಎಡಪಕ್ಷಗಳ ಅಡಳಿತದ ನಂತರ ಬಂಗಾಳದ ಜನ ಬದಲಾವಣೆ ಬಯಸಿ ಮಮತಾ ಅವರಿಗೆ ವೋಟು ನೀಡಿ ಎರಡೆರಡು ಬಾರಿ ಅಧಿಕಾರಕ್ಕೆ ತಂದಾಗ್ಯೂ ಮುಖ್ಯಮಂತ್ರಿಗಳು ವಿಶ್ವಾಸಕ್ಕೆ ದ್ರೋಹ ಬಗೆದು ಅವರನ್ನು ಅವಮಾನಿಸಿದ್ದಾರೆ ಎಂದು ಜರಿದಿದ್ದರು. ಜನರು ಅವರನ್ನು ಪ್ರೀತಿಯಿಂದ ದೀದಿ ಎಂದು ಕರೆದರು, ಅದರೆ ಮಮತಾ ಅವರು ಅವರ ಪ್ರೀತಿಯ ಅಕ್ಕನಾಗದೆ ತನ್ನಳಿಯನಿಗೆ ಅತ್ತೆಯಾಗುವುದಕ್ಕೆ ಹೆಚ್ಚು ಮಹತ್ವ ನೀಡಿದರು ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು.

ಬಂಗಾಳದಲ್ಲಿ ಬಡತನ, ದಾರದ್ರ್ಯ ತಲೆದೋರಿರುವುದಕ್ಕೆ ನೇರವಾಗಿ ಮಮತಾ ಅವರನ್ನು ದೂಷಿಸಿದ ಪ್ರಧಾನ ಮಂತ್ರಿಗಳು, ಆ ರಾಜ್ಯದಲ್ಲಿ ಮಕ್ಕಳು ಮತ್ತು ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ಅರೋಪಿಸಿದ್ದರು. ಮಹಿಳೆಯರು ಬಂಗಾಳದಲ್ಲಿ ಸುರಕ್ಷಿತರಾಗಿಲ್ಲ ಎಂದು ಮೋದಿಯವರು ಹೇಳಿದ್ದನ್ನೇ ಅಸ್ತ್ರವಾಗಿಸಿಕೊಂಡ ಮಮತಾ, ಪ್ರಧಾನ ಮಂತ್ರಿ ಮತ್ತು ಗೃಹಸಚಿವ ಅಮಿತಾ ಶಾ ಅವರನ್ನು ಟೀಕಿಸಿದರು.

‘ಪಶ್ಚಿಮ ಬಂಗಾಳದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ, ಪ್ರಧಾನ ಮಂತ್ರಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನನ್ನ ರಾಜ್ಯದ ಮಹಿಳೆಯರ ಬಗ್ಗೆ ಮಾತಾಡದೆ, ದೆಹಲಿಯಲ್ಲಿ ಮಹಿಳೆಯರ ಸ್ಥಿತಿ ಕಡೆ ಗಮನ ಹರಿಸಲಿ’ ಎಂದು ಮಮತಾ ಹೇಳಿದರು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲೂ ಮಹಿಳೆಯರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದರು.

‘ಬಂಗಾಳದಲ್ಲಿ ಮಹಿಳೆಯರು ರಾತ್ರಿ ಸಮಯದಲ್ಲಿ ಯಾವುದೇ ಅತಂಕವಿಲ್ಲದೆ ಹೊರಬರುತ್ತಾರೆ. ಬೆಳಗಿನ ಜಾವ 4 ಗಂಟೆಯವರೆಗೆ ಮನೆಯಿಂದ ಆಚೆ ಇದ್ದರೂ ಅವರಿಗೆ ಅಪಾಯವಿಲ್ಲ. ಅವರು ನನ್ನ ರಾಜ್ಯದಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಮಧ್ಯಾಹ್ನದ ಸಮಯದಲ್ಲೂ ಮಹಿಳೆಯರು ಮನೆಯಿಂದ ಆಚೆ ಬರಲು ಹೆದರುತ್ತಾರೆ. ಅದರರ್ಥ ಅಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಅವರು ಸುರಕ್ಷಿತರಲ್ಲ. ಬಿಹಾರ, ಮಧ್ಯ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲೂ ಇದೇ ಪರಿಸ್ಥಿತಿಯಿದೆ’ ಎಂದು ಮಮತಾ ಹೇಳಿದರು.

ಇದಕ್ಕೆ ಮೊದಲು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವದ ಎಲ್ಲ ಮಹೀಳೆಯರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು, ಪಶ್ಚಿಮ ಬಂಗಾಳ ಸರ್ಕಾರ ಮಹಿಳೆಯರ ಅಭ್ಯುದಯ ಮತ್ತು ಸಬಲೀಕರಣಕ್ಕೆ ಬದ್ಧವಾಗಿದೆ ಎಂದು ಹೇಳಿದರು.

ಇದೇ ವೇಳೆ ಮಮತಾ ಅವರು ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಲು ಮೀನ-ಮೇಷ ಎಣಿಸುತ್ತಿದೆ ಅಂತ ಜರಿದರು. ‘ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷವು, ಲೋಕಸಭೆಯಲ್ಲಿ ಶೇ 41ರಷ್ಟು ಮತ್ತು ರಾಜ್ಯಸಭೆಯಲ್ಲಿ ಶೇ 31ರಷ್ಟು ಮಹಿಳಾ ಸಂಸದರನ್ನು ಹೊಂದಿದೆ ಎಂದು ಗರ್ವ ಮತ್ತು ಹೆಮ್ಮೆಯಿಂದ ಹೇಳುತ್ತೇನೆ, ಹಾಗೆಯೇ ಸ್ಥಳೀಯ ಚುನಾವಣೆಗಳಲ್ಲಿ ನಾವು ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದ್ದೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ನಮ್ಮ ಸರ್ಕಾರವು ಕುಟುಂಬದ ಅತಿ ಹಿರಿಯ ಮಹಿಳೆಯರನ್ನೇ ಕುಟುಂಬದ ಮುಖ್ಯಸ್ಥೆ ಎಂದು ಘೋಷಿಸಿ ಅವರ ಹೆಸೆರಿನಲ್ಲೇ ಸ್ವಾಸ್ಥ್ಯ ಸಾಥಿ ಕಾರ್ಡುಗಳನ್ನು ವಿತರಿಸಿದೆ. ಅಲ್ಲದೆ, 2011ರಿಂದೀಚೆಗೆ, ಪಶ್ಚಿಮ ಬಂಗಾಳದಲ್ಲಿ 6.7 ಲಕ್ಷ ಸ್ವ ಸಹಾಯ ಗುಂಪುಗಳನ್ನು ರಚಿಸಲಾಗಿದ್ದು, 90 ಲಕ್ಷಕ್ಕೂ ಹೆಚ್ಚು ಮಹಿಳೆಯರು ಇದರ ಫಲಾನುಭವಿಗಳಾಗಿದ್ದಾರೆ’ ಎಂದು ಮಮತಾ ಹೇಳಿದರು,

ಮುಖ್ಯಮಂತ್ರಿಗಳು, ಮಹಿಳೆಯರ ಸುರಕ್ಷತೆ, ಸಬಲೀಕರಣ ಮುಂತಾದವುಗಳ ಬಗ್ಗೆ ಇಂದು ಮಾತಾಡುತ್ತಿದ್ದಾಗ್ಯೂ, ಟಿಎಂ​ಸಿ ಶಾಸಕರು ಪಕ್ಷವನ್ನು ತೊರೆದು ಬಿಜೆಪಿ ಸೇರುವುದನ್ನು ಅವ್ಯಾಹತವಾಗಿ ಮುಂದುವರೆಸಿದ್ದಾರೆ. ಸೊನಾಲಿ ಗುಹಾ, ದಿಪೆಂದು ಬಿಸ್ವಾಸ್, ರವೀಂದ್ರನಾಥ ಭಟ್ಟಾಚಾರ್ಯ, ಜತ್ತು ಲಹಿರಿ ಮತ್ತು ಹಬೀಬ್​ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಯಾಗಿದ್ದ ಸರಳಾ ಮುರ್ಮು ಇಂದು ಪಕ್ಷವನ್ನು ತ್ಯಜಿಸಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲಿಪ್ ಘೋಷ್, ಮತ್ತು ಪಕ್ಷದ ಇತರ ಮುಂಖಂಡರಾಗಿರುವ ಸುವೆಂದು ಅಧಿಕಾರಿ, ಮತ್ತು ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಸಿತಾಳ್ ಕುಮಾರ್ ಸರ್ದಾರ್ ಸೇರಿದಂತೆ ಒಟ್ಟು ಐವರು ಟಿಎಂ​ಸಿ ಶಾಸಕರು ಇಂದು ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ಟಿಎಂಸಿ ಖೇಲ್ ಖತಮ್, ವಿಕಾಸ್ ಶುರು: ಪ್ರಧಾನಿ ನರೇಂದ್ರ ಮೋದಿ ಘೋಷಣೆ

Published On - 7:55 pm, Mon, 8 March 21