ಬೆಂಗಳೂರು, (ಫೆಬ್ರವರಿ 13): ರಾಜ್ಯ ಸರಕಾರದಿಂದ ರಿಯಾಯಿತಿ, ಪ್ರೊತ್ಸಾಹ ಧನ ಸೇರಿದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡು ಉದ್ಯಮಗಳನ್ನ (industries) ಸ್ಥಾಪಿಸಿ,ನಂತರ ಸ್ಥಳೀಯರಿಗೆ ಉದ್ಯೋಗ(Jobs) ನೀಡಲು ಅಸಡ್ಡೆ ತೋರಿದರೇ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (Minister MB Patil)ಅವರು ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಇನ್ಪೋಸಿಸ್ ಕಂಪನಿ ತನ್ನ ಘಟಕ ಸ್ಥಾಪಿಸುತ್ತದೆ ಅಂತೇಳಿ ಜಮೀನು ಪಡೆದುಕೊಂಡು ಗಿಡಗಳನ್ನು ನೆಟ್ಟು ತೋಟ ಮಾಡಿಕೊಂಡಿದ್ದಾರೆ. ಒಬ್ಬರಿಗೂ ಕೂಡ ಅವರು ಉದ್ಯೋಗ ನೀಡಿಲ್ಲ, ಜಮೀನು ಒದಗಿಸುವ ಸಂದರ್ಭದಲ್ಲಿ ಮಂಚೂಣಿಯಲ್ಲಿದ್ದ ನಾನು ಇಂದು ಅಲ್ಲಿನ ರೈತರ ಎದುರುಗಡೆ ನಿಂತು ಮಾತನಾಡಲು ಆಗುತ್ತಿಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅಸಮಾಧಾನ ತೋಡಿಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಉದ್ಯಮಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರಿಗೆ ಅವರವರ ಅರ್ಹತೆಗೆ ಅನುಸಾರವಾಗಿ ಉದ್ಯೋಗ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಹೂಡಿಕೆಗೆ ಮಾಡಲು 241 ಕಂಪನಿಗಳಿಗೆ ಅನುಮತಿ: ಎಂಬಿ ಪಾಟೀಲ್
2023-24ನೇ ಸಾಲಿನಲ್ಲಿ ಒಟ್ಟು 241 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 50,025 ಕೋಟಿ ರೂ. ಬಂಡವಾಳ ಹರಿದುಬಂದಿದೆ. ಇವುಗಳ ಮೂಲಕ 58,051 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ ಎಂ.ಬಿ. ಪಾಟೀಲ, ಏಕಗವಾಕ್ಷಿ ಅನುಮೋದನಾ ಸಮಿತಿಯು ಹಸಿರು ನಿಶಾನೆ ನೀಡಿರುವ ಈ ಯೋಜನೆಗಳ ಪೈಕಿ 24 ಯೋಜನೆಗಳು ಮಾತ್ರ ಬೆಂಗಳೂರು ಜಿಲ್ಲೆಯಲ್ಲಿದ್ದು, ಉಳಿದ 217 ಯೋಜನೆಗಳು ಹೊರಗಿನ ಜಿಲ್ಲೆಗಳಲ್ಲಿವೆ. ಬೆಂಗಳೂರು ಜಿಲ್ಲೆಯಲ್ಲಿ 21,537 ಕೋಟಿ ರೂ. ಹೂಡಿಕೆ ಆಗುತ್ತಿದ್ದು, 19,243 ಉದ್ಯೋಗ ಸೃಷ್ಟಿ ಆಗಲಿವೆ. ಉಳಿದ ಜಿಲ್ಲೆಗಳಲ್ಲಿ 28,488 ಕೋಟಿ ರೂ. ಬಂಡವಾಳ ಹೂಡಿಕೆ ಆಗುತ್ತಿದ್ದು, 38,808 ಮಂದಿಗೆ ಉದ್ಯೋಗ ಸಿಗಲಿವೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.
ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಮಿಕ್ಕ ಭಾಗಗಳಲ್ಲಿ ಉದ್ದಿಮೆಗಳು ನೆಲೆಯೂರಿ, ಉದ್ಯೋಗ ಸೃಷ್ಟಿಯಾಗುವಂತೆ ಮಾಡಲು ಸರ್ಕಾರವು ಬಿಯಾಂಡ್ ಬೆಂಗಳೂರು ಉಪಕ್ರಮವನ್ನು ಆರಂಭಿಸಿದ್ದು, ವಿವಿಧೆಡೆಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ಕೈಗಾರಿಕಾ ನೀತಿಯಲ್ಲಿ ಹಲವು ಪ್ರೋತ್ಸಾಹಧನ ಮತ್ತು ವಿನಾಯಿತಿಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.