KSRTC Recruitment: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಬಸ್ ಚಾಲಕರ ಕೊರತೆಯನ್ನು ಸರಿದೂಗಿಸಲು ವಿಶೇಷ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ. ಈ ಯೋಜನೆ ಅಡಿಯಲ್ಲಿ ಒಟ್ಟು 350 ಡ್ರೈವರ್ಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದೆ. ಆದರೆ ಈ ನೇಮಕಾತಿಯು ಗುತ್ತಿಗೆ ಆಧಾರದಲ್ಲಿ ಮಾತ್ರ ನಡೆಯಲಿದ್ದು, ಇದಕ್ಕಾಗಿ ಖಾಸಗಿ ಕಂಪೆನಿಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಈ ಮೂಲಕ 10 ಕೋಟಿ ವೆಚ್ಚದಲ್ಲಿ ಒಟ್ಟು 350 ಚಾಲಕರುಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.
ಎಲ್ಲೆಲ್ಲಿ ಸಿಗಲಿದೆ ಉದ್ಯೋಗ:
ಈ ಯೋಜನೆಯ ಅಡಿಯಲ್ಲಿ ಮಂಗಳೂರು 150, ಪುತ್ತೂರು 100, ರಾಮನಗರ ಮತ್ತು ಚಾಮರಾಜನಗರ ಕೆಎಸ್‌ಆರ್‌ಟಿಸಿ ಡಿಪೋಗಳಿಗೆ ತಲಾ 50 ಚಾಲಕರನ್ನು ನೇಮಕ ಮಾಡಲಾಗುತ್ತದೆ.
ವೇತನ:
ಕೆಎಸ್ಆರ್ಟಿಸಿಯಲ್ಲಿ ಗುತ್ತಿಗೆ ಆಧಾರ ಮೇಲೆ ನೇಮಕವಾಗುವ ಸಿಬ್ಬಂದಿಗಳಿಗೆ 25 ದಿನಗಳ ಹಾಜರಾತಿಗೆ ತಕ್ಕಂತೆ ಸಂಭಾವನಾ ವೇತನವಾಗಿ 23,000 ರೂಪಾಯಿ ನೀಡಲಾಗುತ್ತದೆ. ಇನ್ನು ಚಾಲಕ 25 ದಿನಗಳವರೆಗೆ ಸೇವೆಯನ್ನು ಬಳಸಿಕೊಳ್ಳದಿದ್ದರೆ ಪ್ರತಿ ಗಂಟೆಗೆ ಸ್ಟೀರಿಂಗ್ ಮತ್ತು ಪ್ರೋತ್ಸಾಹಕವಾಗಿ 100 ರೂ. ಅನ್ನು ವೇತನವಾಗಿ ನಿಗದಿಪಡಿಸಲಾಗುತ್ತದೆ. ಇದಾಗ್ಯೂ ನಿಯಮಿತ ನೌಕರರಿಗೆ ನೀಡುವ ಯಾವುದೇ ಭತ್ಯೆಯನ್ನು ಚಾಲಕರು ಪಡೆಯುವುದಿಲ್ಲ.
ಕೆಎಸ್‌ಆರ್‌ಟಿಸಿ ನೇಮಕಾತಿಯಲ್ಲಿ ಈ ಬದಲಾವಣೆ ಯಾಕೆ?
ಈ ಹೊಸ ಯೋಜನೆಯ ಮೂಲಕ ಕೆಎಸ್‌ಆರ್‌ಟಿಸಿ ವೇತನ ವೆಚ್ಚವನ್ನು ಕಡಿತಗೊಳಿಸುವ ಆಶಯ ಹೊಂದಿದೆ. ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಚಾಲಕರನ್ನು ನೇಮಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಪಡೆಯಲಾಗುವುದಿಲ್ಲ. ಈಗ ಅಸ್ತಿತ್ವದಲ್ಲಿರುವ ನೌಕರರು ಮಂಗಳೂರು ಮತ್ತು ಪುತ್ತೂರಿನಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಬಯಸುವುದಿಲ್ಲ, ಮತ್ತೊಂದೆಡೆ, ಸಾರಿಗೆ ಸೇವೆಗಳನ್ನು ಒದಗಿಸಲು ನಮಗೆ ಕನಿಷ್ಠ 1,000 ಹೆಚ್ಚುವರಿ ಚಾಲಕರ ಅಗತ್ಯವಿದೆ. ಪ್ರಯಾಣದ ಬೇಡಿಕೆಗೆ ಅನುಗುಣವಾಗಿ, ಈಗ ಟೆಂಡರ್ ಮೂಲಕ ನಾವು ಚಾಲಕರನ್ನು ಗುತ್ತಿಗೆಯ ಮೇಲೆ ನೇಮಿಸಲು ಮುಂದಾಗಿದ್ದೇವೆ ಎಂದು ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ನಿಯಮ ಅನ್ವಯ:
ಈ ಯೋಜನೆಯ ಮೂಲಕ ನೇಮಕ ಮಾಡಲಾಗುವ ಸಿಬ್ಬಂದಿಗಳ ವಿರುದ್ದ ಪ್ರಸ್ತುತ ಕೆಎಸ್‌ಆರ್‌ಟಿಸಿ ನಿಯಮದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಂದರೆ ಈಗಿರುವ ಚಾಲಕರಿಗೆ ಅನ್ವಯಿಸುವ ಎಲ್ಲಾ ನಿಯಮಗಳು ಗುತ್ತಿಗೆ ಆಧಾರದಲ್ಲಿರುವ ಚಾಲಕರಿಗೆ ಅನ್ವಯವಾಗಲಿದೆ. ಇನ್ನು ಸುರಕ್ಷತಗೆ ಆದ್ಯತೆ ನೀಡಲು ಇಲಾಖೆಯಿಂದ ದಂಡ ಸೇರಿದಂತೆ ಅಗತ್ಯ ಷರತ್ತುಗಳನ್ನು ಜಾರಿಗೊಳಿಸಲಾಗುತ್ತದೆ. ಇನ್ನು, ಕಳ್ಳತನ ಅಥವಾ ವಂಚನೆಯಂತಹ ಚಾಲಕರ ದುರ್ವರ್ತನೆಗಳಿಗೆ ಏಜೆನ್ಸಿಯನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಖಾಸಗೀಕರಣ..?
ಇದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಅಲ್ಲದೆ ಸಾರ್ವಜನಿಕ ಸಾರಿಗೆಯ ಕಲ್ಪನೆಗೆ ಇದು ದೊಡ್ಡ ಹೊಡೆತ ನೀಡಲಿದೆ. ಏಕೆಂದರೆ ಬಸ್ ಚಾಲಕನ ಕೆಲಸವು ಬಹಳಷ್ಟು ಅಪಾಯವನ್ನು ಒಳಗೊಂಡಿರುತ್ತದೆ. ಇದಾಗ್ಯೂ ಅವರು ಕೇವಲ 25 ಸಾವಿರ ರೂ.ಗೆ ಕೆಲಸ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸಲಾಗುತ್ತಿದೆ?. ಅಲ್ಲದೆ ಖಾಸಗಿ ಉದ್ಯೋಗಿಯು ಪ್ರಸ್ತುತ ಇರುವ ಉದ್ಯೋಗಿಗಳಂತೆ ಬದ್ಧರಾಗಿರುವುದಿಲ್ಲ. ಇದಾಗ್ಯೂ ಕೆಎಸ್ಆರ್ಟಿಸಿಯನ್ನು ಖಾಸಗೀಕರಣಗೊಳಿಸಲು ಇಂತಹದೊಂದು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕರ ಸಮಿತಿಯ ಎಚ್. ವಿ. ಅನಂತ ಸುಬ್ಬರಾವ್ ಹೇಳಿದ್ದಾರೆ.