Mandya Job Fair: ಮಂಡ್ಯ ಟು ಇಂಡಿಯಾ ಉದ್ಯೋಗ ಮೇಳ ಆರಂಭ, ಇಲ್ಲಿದೆ ವಿವರ

| Updated By: Ganapathi Sharma

Updated on: Oct 18, 2024 | 2:59 PM

ಸಕ್ಕರೆ ನಾಡು ಮಂಡ್ಯದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌ಡಿ ಕುಮಾರಸ್ವಾಮಿ ಆಶಯದಂತೆ ಬೃಹತ್ ಉದ್ಯೋಗ ಮೇಳ ಆರಂಭವಾಗಿದೆ. ಇಂದು ಮತ್ತು ನಾಳೆ ನಡೆಯಲಿರುವ ಉದ್ಯೋಗ ಮೇಳದಲ್ಲಿ ಸುಮಾರು 3000 ಮಂದಿಗೆ ಉದ್ಯೋಗ ದೊರಕಿಸಿಕೊಡುವ ಗುರಿ ಹೊಂದಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಉದ್ಯೋಗ ಮೇಳದ ಕುರಿತ ವಿವರ ಇಲ್ಲಿದೆ.

ಮಂಡ್ಯ, ಅಕ್ಟೋಬರ್ 18: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ‘ಮಂಡ್ಯ ಟು ಇಂಡಿಯಾ’ ಎಂಬ ಬೃಹತ್ ಉದ್ಯೋಗ ಮೇಳ ನಡೆಯುತ್ತಿದೆ. ಇಂದು ಮತ್ತು ನಾಳೆ (ಅ. 19) ನಡೆಯಲಿರುವ ಉದ್ಯೋಗ ಮೇಳದಲ್ಲಿ 3,000 ಕ್ಕೂ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯ ನಿರೀಕ್ಷೆ ಇದೆ.

ಉದ್ಯೋಗ ಮೇಳದ ಸ್ಥಳ

ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಎರಡೂ ದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಉದ್ಯೋಗ ಮೇಳ ನಡೆಯಲಿದೆ.

ಯಾವೆಲ್ಲ ಕಂಪನಿಗಳು ಭಾಗವಹಿಸುತ್ತಿವೆ?

ಉದ್ಯೋಗ ಮೇಳದಲ್ಲಿ ಮೆಕಾನ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್), ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಂಡಿಸಿ), ಲಾಯ್ಡ್ಸ್ ಮೆಟಲ್ಸ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್), ಮತ್ತು ಜಿಂದಾಲ್ ಸ್ಟೀಲ್ ಸೇರಿದಂತೆ ಪ್ರಮುಖ ಕಂಪನಿಗಳು ನೇರ ನೇಮಕಾತಿ ನಡೆಸಲಿವೆ.

ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು, ಜಿಲ್ಲಾಡಳಿತ ಪ್ರತಿನಿಧಿಗಳೊಂದಿಗೆ ಮೇಳದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು…

ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಾವಂತರಿಗೆ ಕೊರತೆಯಿಲ್ಲ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿದ್ದು, ಪ್ರತಿ ವರ್ಷ ಅನೇಕ ಯುವಕರು ಪದವಿ ಪಡೆಯುತ್ತಿದ್ದಾರೆ. ಸಾಧ್ಯವಾದಷ್ಟು ಉದ್ಯೋಗಾವಕಾಶ ಕಲ್ಪಿಸುವುದು ನನ್ನ ದೃಢ ಸಂಕಲ್ಪ ಎಂದು ಹೆಚ್​ಡಿ ಕುಮಾರಸ್ವಾಮಿ ಉದ್ಯೋಗ ಮೇಳದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅನೇಕ ಯುವಕರು ಉದ್ಯೋಗ ಅರಸಿ ತಮ್ಮ ಬಳಿಗೆ ಬರುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಪ್ರತಿದಿನ, ಹಲವಾರು ನಿರುದ್ಯೋಗಿ ಯುವಕರು ಕೆಲಸ ಅರಸಿ ನನ್ನ ಮನೆಗೆ ಭೇಟಿ ನೀಡುತ್ತಾರೆ. ಅವರ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಭರವಸೆ ಹೊಂದಿದ್ದಾರೆ. ನೂರಾರು ಜನರು ನನ್ನ ಮನೆಗೆ ಪ್ರತಿದಿನ ಭೇಟಿ ನೀಡಿದಾಗ ನಾನು ಸಾಧ್ಯವಾದಷ್ಟು ಸಹಾಯ ಮಾಡಿದ್ದೇನೆ. ಆದರೆ ದೊಡ್ಡ ಪ್ರಮಾಣದ ಉದ್ಯೋಗವನ್ನು ರಚಿಸಲು ನನಗೆ ಸಾಧ್ಯವಾಗಲಿಲ್ಲ. ಈ ಉದ್ಯೋಗ ಮೇಳದ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ಸಿಗಲಿದೆ ಎಂದು ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸೈಬರ್ ಸೆಕ್ಯೂರಿಟಿ ಉದ್ಯೋಗಾವಕಾಶ ಶೇ. 14ರಷ್ಟು ಹೆಚ್ಚಳ; ಬೆಂಗಳೂರಿನಲ್ಲೇ ಹೆಚ್ಚು ಪೋಸ್ಟಿಂಗ್ಸ್

ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ಸ್ವಯಂಸೇವಕರು ಮತ್ತು ಅಧಿಕಾರಿಗಳು ಇದ್ದಾರೆ. ವಿದ್ಯಾರ್ಹತೆಗಳನ್ನು ಮೌಲ್ಯಮಾಪನ ಮಾಡುವ ಮತ್ತು ಅದಕ್ಕೆ ಸೂಕ್ತವಾದ ಉದ್ಯೋಗ ನೀಡುವ ಕಂಪನಿಯ ಪ್ರತಿನಿಧಿಗಳೊಂದಿಗೆ ಸಂಪರ್ಕ ಸಾಧಿಸಲು ಅಧಿಕಾರಿಗಳು ಅಭ್ಯರ್ಥಿಗಳಿಗೆ ನೆರವಾಗಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ