
ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಮನೆಯಲ್ಲಿ ದೊಡ್ಡ ಮೊತ್ತದ ಹಣ ಕಳ್ಳತನವಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೋಹನ್ ಬಾಬು ಅವರಿಗೆ ಸೇರಿದ್ದು ಎನ್ನಲಾಗುತ್ತಿರುವ ಹತ್ತು ಲಕ್ಷ ರೂಪಾಯಿ ಹಣವನ್ನು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕಳ್ಳತನ ಮಾಡಿದ್ದು, ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಕಳ್ಳನ ಬಂಧನದ ಬಳಿಕ ಹಣದ ಮೂಲದ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾಗಿವೆ.
ಮೋಹನ್ ಬಾಬು ಅವರಿಗೆ ಸೇರಿದ ಜಲಪಳ್ಳಿಯಲ್ಲಿ ನಿರ್ಮಿಸಲಾಗಿರುವ ಕೆಲಸಗಾರರ ಮನೆಯಲ್ಲಿ ಇಡಲಾಗಿದ್ದ 10 ಲಕ್ಷ ರೂಪಾಯಿ ಹಣ ಕಾಣೆಯಾಗಿತ್ತು. ಹಣ ಕಾಣೆಯಾದ ಬಳಿಕ ಮೋಹನ್ ಬಾಬು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್ ನಾಯಕ್ ಸಹ ನಾಪತ್ತೆಯಾಗಿದ್ದ. ಹಾಗಾಗಿ ಪೊಲೀಸರು ಗಣೇಶ್ ನಾಯಕ್ ಹಿಂದೆ ಬಿದ್ದಿದ್ದರು.
ಗಣೇಶ್ ನಾಯಕ್, ಸರ್ವೆಂಟ್ ಮನೆಯಲ್ಲಿ ಇಡಲಾಗಿದ್ದ ಹತ್ತು ಲಕ್ಷ ರೂಪಾಯಿ ಹಣವನ್ನು ಎತ್ತಿಕೊಂಡು ತಿರುಪತಿಗೆ ಪರಾರಿಯಾಗಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ತಿರುಪತಿಗೆ ತೆರಳಿ ಆರೋಪಿಯನ್ನು ಬಂಧಿಸಿ, ಹಣವನ್ನೂ ಸಹ ರಿಕವರಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಮೋಹನ್ ಬಾಬು ಪುತ್ರಿ
ಆದರೆ ಪೊಲೀಸರು ಹಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಹತ್ತು ಲಕ್ಷ ರೂಪಾಯಿ ನಗದು ಹಣವನ್ನು ಕೆಲಸಗಾರರಿಗೆ ಎಂದು ಕಟ್ಟಿಸಲಾಗಿದ್ದ ಮನೆಯಲ್ಲಿ ಇಡಲು ಕಾರಣವೇನು ಎಂಬ ಪ್ರಶ್ನೆ ಎದ್ದಿದೆ. ಮೋಹನ್ ಬಾಬು ಹೇಳಿರುವಂತೆ, ಆ ಹಣವನ್ನು ಉದ್ಯಮಕ್ಕೆ ಸಂಬಂಧಿಸಿದಂತೆ ಯಾರಿಗೋ ನೀಡಲು ಅಲ್ಲಿ ಇರಿಸಿದ್ದರಂತೆ. ಆದರೆ ಪೊಲೀಸರು ಐದು ಲಕ್ಷಕ್ಕಿಂತಲೂ ಹೆಚ್ಚಿನ ಹಣ ವಶಪಡಿಸಿಕೊಂಡರೆ ಅದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಿರುತ್ತದೆ. ಅಂತೆಯೇ ಮೋಹನ್ ಬಾಬು ಪ್ರಕರಣದಲ್ಲಿಯೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದಲ್ಲಿ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮೋಹನ್ ಬಾಬು ಅವರನ್ನು ವಿಚಾರಣೆಗೆ ಒಳಪಡಿಸಲಿದೆ.
ಮೋಹನ್ ಬಾಬು ತೆಲುಗು ಚಿತ್ರರಂಗದ ಹಿರಿಯ ನಟ. ಚಿರಂಜೀವಿ ಹಾಗೂ ಮೋಹನ್ ಬಾಬು ಬಹುತೇಕ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. ‘ಪೆದರಾಯುಡು’ ಸೇರಿದಂತೆ ಕೆಲ ಹಿಟ್ ಸಿನಿಮಾಗಳಲ್ಲಿ ಮೋಹನ್ ಬಾಬು ನಟಿಸಿದ್ದಾರೆ. ಆದರೆ ಚಿರಂಜೀವಿ, ಬಾಲಕೃಷ್ಣ ರೀತಿ ಮಾಸ್ ಹೀರೋ ಎನಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೋಹನ್ ಬಾಬು ಅವರ ಮಕ್ಕಳಾದ ಮಂಚು ವಿಷ್ಣು, ಮಂಚು ಮನೋಜ್ ಇಬ್ಬರೂ ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪುತ್ರಿ ಮಂಚು ಲಕ್ಷ್ಮಿ ಸಹ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಬಾಲಿವುಡ್ಗೆ ಹಾರಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ