ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಮೋಹನ್ ಬಾಬು ಪುತ್ರಿ
ತೆಲುಗು ಚಿತ್ರರಂಗದ ಜನಪ್ರಿಯ ಕುಟುಂಬವಾದ ಮಂಚು ಕುಟುಂಬದ ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ತಮ್ಮ ಕುಟುಂಬದ ವಿರುದ್ಧ ಟೀಕೆ ಮಾಡಿದ್ದಾರೆ. ತಮ್ಮ ಬೆಳವಣಿಗೆಗೆ ಅವರು ಅಡ್ಡಿಯಾಗಿದ್ದರು ಎಂದಿದ್ದಾರೆ.

ತೆಲುಗು ಚಿತ್ರರಂಗದ (Tollywood) ಮೇಲೆ ಕೆಲವು ಕುಟುಂಬಗಳ ಹಿಡಿತ ಇರುವುದು ಗೊತ್ತಿರುವ ಸಂಗತಿಯೇ. ಪ್ರಮುಖವಾಗಿ ನಂದಮೂರಿ ಕುಟುಂಬ, ಚಿರಂಜೀವಿ ಅವರ ಕೋನಿಡೆಲ ಕುಟುಂಬ, ನಾಗಾರ್ಜುನ ಅವರ ಅಕ್ಕಿನೇನಿ ಕುಟುಂಬ, ವೆಂಕಟೇಶ್, ಸುರೇಶ್, ರಾಣಾ ಅವರ ದಗ್ಗುಬಾಟಿ ಕುಟುಂಬ ಇದರ ಜೊತೆಗೆ ಇನ್ನೂ ಕೆಲವು ಕುಟುಂಬಗಳು ಸಹ ತೆಲುಗು ಚಿತ್ರರಂಗದಲ್ಲಿ ಜನಪ್ರಿಯವಾಗಿವೆ, ಈಗಲೂ ಸಹ ಸಿನಿಮಾಗಳಲ್ಲಿ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿದೆ ಅದರಲ್ಲಿ ಪ್ರಮುಖವಾದುದು ಮಂಚು ಕುಟುಂಬ.
ತೆಲುಗಿನ ಹಿರಿಯ ನಟ ಮೋಹನ್ ಬಾಬು ಅವರ ಕುಟುಂಬವೇ ಈ ಮಂಚು ಕುಟುಂಬ. ಮಂಚು ಕುಟುಂಬದಿಂದ ಮಂಚು ವಿಷ್ಣು ಹಾಗೂ ಅವರ ಸಹೋದರ ಮಂಚು ಮನೋಜ್ ನಾಯಕನಟರಾಗಿದ್ದಾರೆ. ಮಂಚು ವಿಷ್ಣು ತೆಲುಗು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ನಾಯಕಿಯಾಗಿಯೂ ಮಿಂಚುತ್ತಿದ್ದಾರೆ. ಆದರೆ ಈಗ ಒಮ್ಮೆಲೆ ತಮ್ಮ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ ಮಂಚು ಲಕ್ಷ್ಮಿ.
ಉತ್ತಮ ಪಾತ್ರಗಳಿಗಾಗಿ ಹೈದರಾಬಾದ್ನಿಂದ ಮುಂಬೈಗೆ ವಾಸಸ್ಥಳ ಬದಲಾಯಿಸಿರುವ ಮಂಚು ಲಕ್ಷ್ಮಿ, ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘ಇಷ್ಟು ತಡವಾಗಿ ನಾನು ಮುಂಬೈಗೆ ಶಿಫ್ಟ್ ಆಗಲು ನನ್ನ ಕುಟುಂಬವೇ ಕಾರಣ. ಅವರಿಗೆ ನಾನು ನಟಿಯಾಗುವುದು ಇಷ್ಟವಿಲ್ಲ, ನಾನು ನಟಿಯಾಗಿ ಮುಂದುವರೆಯುವುದು ಇಷ್ಟವಿರಲಿಲ್ಲ. ನಮ್ಮದು ಒಳ್ಳೆಯ ಕುಟುಂಬವೇ ಆದರೆ ಇಷ್ಟು ದೊಡ್ಡ ಸಮುದ್ರದಲ್ಲಿ ನೀನು ಸಣ್ಣ ಮೀನಾಗುತ್ತೀಯ ಎಂದು ಹೇಳುತ್ತಾ ನನ್ನನ್ನು ಕುಗ್ಗಿಸುತ್ತಲೇ ಬಂದರು’ ಎಂದಿದ್ದಾರೆ.
ಇದನ್ನೂ ಓದಿ:ರೇವ್ ಪಾರ್ಟಿ: ನಟಿ ಹೇಮಾ ಬೆಂಬಲಕ್ಕೆ ನಟ ಮಂಚು ವಿಷ್ಣು ಮತ್ತು ಕಲಾವಿದರ ಸಂಘ
‘ದಕ್ಷಿಣದಲ್ಲಿ ಹೀರೋಗಳ ಪತ್ನಿ, ಸಹೋದರಿ, ಮಗಳು ನಟಿಯಾಗುವುದನ್ನು ಒಪ್ಪಿಕೊಳ್ಳುವುದಿಲ್ಲ. ಅದನ್ನು ಹೀರೋಗಳು ಸಹ ವಿರೋಧಿಸುತ್ತಾರೆ ಮತ್ತು ಚಿತ್ರರಂಗದ ಮಂದಿಯೂ ವಿರೋಧಿಸುತ್ತಾರೆ. ನನ್ನನ್ನು ಪ್ರಕಾಶ್ ಚಿತ್ರರಂಗಕ್ಕೆ ಪರಿಚಯಿಸಿದ. ಆದರೆ ನನ್ನ ತಂದೆ ಹಾಗೂ ಅವರ ತಂದೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಾನು ಗೆಳತಿ ರಕುಲ್ ಪ್ರೀತ್ ಸಿಂಗ್ ಮನೆಯಲ್ಲಿ ವಾಸವಿರುತ್ತಿದ್ದೆ, ಆಕೆ ನನಗೆ ಮುಂಬೈಗೆ ಬರುವಂತೆ ಸತತವಾಗಿ ಹೇಳುತ್ತಲೇ ಇದ್ದಲು, ಅಲ್ಲದೆ ರಾಣಾ ದಗ್ಗುಬಾಟಿಯ ಮಾತುಗಳು ಸಹ ನನಗೆ ಸ್ಪೂರ್ತಿ ತುಂಬಿ, ಈಗ ಮುಂಬೈಗೆ ವಾಸ್ತವ್ಯ ಬದಲಾಯಿಸಿದ್ದೇನೆ, ಇಲ್ಲಿ ಹೊಸ ಅವಕಾಶಕ್ಕಾಗಿ ಹುಡುಕಾಡುತ್ತಿದ್ದೇನೆ’ ಎಂದಿದ್ದಾರೆ.
ನನ್ನ ಸಹೋದರರಿಗೆ ಹಲವು ಸವಲತ್ತುಗಳು, ಅವಕಾಶಗಳು ಮಹಿಳೆ ಎಂಬ ಕಾರಣಕ್ಕೆ ನನಗೆ ಸಿಕ್ಕಿರಲಿಲ್ಲ. ಹಲವು ಬಾರಿ ನನ್ನ ಹಕ್ಕಿಗಾಗಿ ಕುಟುಂಬದಲ್ಲಿ ಜಗಳವಾಡಿದ್ದಿದೆ. ಈ ಸಮಸ್ಯೆ ದಕ್ಷಿಣ ಭಾರತದಲ್ಲಿ ಮಾತ್ರವೇ ಅಲ್ಲ ಇಡೀ ದೇಶದಲ್ಲಿಯೇ ಇದೆ ಎಂದಿದ್ದಾರೆ ಲಕ್ಷ್ಮಿ ಮಂಚು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




