ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?

Charlie Chaplin Life History: ಚಾಪ್ಲಿನ್ ಅವರ ಚಲನಚಿತ್ರ ವೃತ್ತಿಜೀವನವು 1914 ರಲ್ಲಿ ಪ್ರಾರಂಭವಾಯಿತು ಮತ್ತು 1967 ರಲ್ಲಿ ಕೊನೆಗೊಂಡಿತು. 81 ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಅವರ ನಟನಾ ವೃತ್ತಿಜೀವನ ಮುಗಿದ 10 ವರ್ಷಗಳ ನಂತರ ಅವರು ನಿಧನರಾದರು. ಚಾಪ್ಲಿನ್‌ನ ಮರಣದ ಎರಡು ದಿನಗಳ ನಂತರ, ಆತನನ್ನು ಜಿನೀವಾ ಸರೋವರದ ಇಳಿಜಾರಿನಲ್ಲಿ ಸಮಾಧಿ ಮಾಡಲಾಯಿತು. ಆದರೆ, ಚಾಪ್ಲಿನ್ ಕಥೆ ಅಲ್ಲಿಗೆ ಮುಗಿಯಲಿಲ್ಲ.

ನಗುವಿನ ನಟ-ನಗುವಿನ ಸಾಮ್ರಾಟ ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?
ಚಾರ್ಲಿ ಚಾಪ್ಲಿನ್ ಶವಪೆಟ್ಟಿಗೆಯನ್ನು ಕಳ್ಳರು ಏಕೆ ಕದ್ದರು?
Follow us
ಸಾಧು ಶ್ರೀನಾಥ್​
|

Updated on:Jun 21, 2024 | 9:08 PM

ಚಾರ್ಲಿ ಚಾಪ್ಲಿನ್: ನಾಲ್ಕು ಮದುವೆಗಳು… ಕೊನೆಯಿಲ್ಲದ ಕಷ್ಟಗಳು… ತಿನ್ನಲು ಅನ್ನವೂ ಇಲ್ಲದ ಬಡತನ… ಬಾಲ್ಯದಲ್ಲಿ ಕಣ್ಣೀರನ್ನು ರೆಪ್ಪೆಗಳ ಕೆಳಗೆ ಬಚ್ಚಿಟ್ಟುಕೊಳ್ಳುವ ಅಭ್ಯಾಸವಿತ್ತು. ಹಸಿವನ್ನು ನೀಗಿಸಲು ನೀರು ನೆರವಿಗೆ ಬರುತ್ತದೆ ಎಂಬ ತತ್ವವನ್ನು ಆ ಕಾಲದಿಂದಲೂ ಕಲಿಸಲಾಗಿದೆ. ಆತನಿಗೂ ಅವೇ ಜೀವನದ ಪಾಠಗಳಾಗಿದ್ದವು. ಕಣ್ಣೀರಿನ ಮೌಲ್ಯ… ಅದು ತಂದೊಡ್ಡುವ ಸಂಕಟವನ್ನು ನಿರಂತರವಾಗಿ ಅನುಭವಿಸಿದ.. ಆ ಸಂಕ್ಷೋಭೆಗಳ ನಡುವೆಯೇ ಮುಂದೆ ನಗುವಿನ ನಟನಾಗಿ, ಸಾಮ್ರಾಟನಾಗಿ ಈ ಜಗತ್ತಿಗೆ ತನ್ನನ್ನು ಪರಿಚಯಿಸಿಕೊಂಡ. ಮೂಕಿ ಚಿತ್ರಗಳಲ್ಲಿ ತಮ್ಮ ಹಾವಭಾವದಿಂದ ನವರಸವನ್ನು ಚಿಮ್ಮಿಸಿ ನೋಡುಗರಿಗೆ ಸಂತಸವನ್ನಷ್ಟೇ ಪಸರಿಸಿದ. ಆನಂದ ಅನುಭವಿಸಲು ಮನದ ಭಾಷೆ ಇದ್ದರೆ ಸಾಕು ಎಂದು ಸಾದರ ಪಡಿಸಿದ ಅವರು, ಈ ಜಗತ್ತಿನಲ್ಲಿ ನಗುವಿನ ರಾಜ ಎಂದು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಆತ ಬೇರೆ ಯಾರೂ ಅಲ್ಲ ವಿಶ್ವವಿಖ್ಯಾತ ನಟ. ಚಾರ್ಲಿ ಚಾಪ್ಲಿನ್ ಒಬ್ಬ ಪ್ರಸಿದ್ಧ ಹಾಸ್ಯನಟ, ಬಹು-ಪ್ರತಿಭಾವಂತ, ಲೇಖಕ, ಗಾಯಕ, ಶಾಂತಿಪ್ರಿಯ, ಯಾವಾಗಲೂ ಯುದ್ಧವನ್ನು ಟೀಕಿಸುತ್ತಿದ್ದ. ಒಂದೆಡೆ, ಬೆಳ್ಳಿ ಪರದೆಯ ಮೇಲೆ ರಾರಾಜಿಸುತ್ತಿದ್ದರೆ, ಅದೇ ಬೆಳ್ಳಿ ಪರದೆಯ ಹಿಂದೆ ಅಂದರೆ ತನ್ನ ಬದುಕಿನಲ್ಲಿ ಕರಾಳ ಜೀವನ ನಡೆಸಿದ. ವೈಯಕ್ತಿಕ ಜೀವನವು ವೈವಾಹಿಕ ಯಡವಟ್ಟುಗಳಿಂದಾಗಿ ಏಳುಬೀಳುಗಳೊಂದಿಗೆ ಸಾಗುತ್ತಾ ಇತ್ತು. ಅದರಿಂದಾಗಿಯೇ ನಾಲ್ಕು ಮದುವೆಗಳು ಮತ್ತು 11 ಮಕ್ಕಳೊಂದಿಗೆ ಚಾಪ್ಲಿನ್ ಅವರ ಜೀವನವು ವಿವಾದಾತ್ಮಕ ಗೂಡಾಗಿತ್ತು. ಆತನ ಬದುಕಿನ ಪ್ರತಿ ಹೆಜ್ಜೆಯೂ ವಿಶೇಷವಾಗಿಯೇ ಇತ್ತು. ಕೆಲವೊಮ್ಮೆ ಪ್ರವಾಹದ ವಿರುದ್ಧವಾಗಿ ಈಜಿದರು. ಮತ್ತು ಕೆಲವೊಮ್ಮೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು. ಇನ್ನೂ ಕೆಲವು ಬಾರಿ ಜೀವನದಲ್ಲಿ ಸ್ವತಃ ತಮ್ಮನ್ನು ತಾವೇ ಗಾಢವಾಗಿ ಆವರಿಸಿಕೊಂಡುಬಿಟ್ಟರು. ಅಂತಹ ನಗುವಿನ ರಾಜನ ಬದುಕು ಹುಟ್ಟಿನಿಂದ ಸಾಯುವವರೆಗೆ ಅನೇಕ ತಿರುವುಗಳ ಮೂಲಕ ಸಾಗಿತು.

ಐದನೇ ವಯಸ್ಸಿನಲ್ಲಿ ಸ್ಟೇಜ್ ಶೋಗಳು

ಚಾರ್ಲಿ ಚಾಪ್ಲಿನ್… ಈ ಹೆಸರನ್ನು ಕೇಳದವರು ಮತ್ತು ಅವರ ಸಿನಿಮಾಗಳನ್ನು ನೋಡದವರು ಇಲ್ಲವೇ ಇಲ್ಲ ಎನ್ನಬಹುದು. ಈ ಹೆಸರು ಕೇಳಿದರೆ ಎಲ್ಲರ ಮುಖದಲ್ಲೂ ನಗು ಬರುತ್ತದೆ. ಕೈಯಲ್ಲಿ ಕೋಲು, ಹರಿದ ಕೋಟು, ತಲೆಯ ಮೇಲೆ ದೊಡ್ಡ ಟೋಪಿ, ವಿಶಿಷ್ಟವಾದ ನಡೆ-ನುಡಿಯೊಂದಿಗೆ ಅವರು ತಮ್ಮದೇ ಆದ ವಿಶಿಷ್ಟತೆಯನ್ನು ಗಳಿಸಿದರು. ಜೋಲಾಡುವ ಪ್ಯಾಂಟ್, ದೊಡ್ಡ ಬೂಟುಗಳು ಮತ್ತು ಚಿಕ್ಕ ಮೀಸೆಯೊಂದಿಗೆ ಅವರು ಪ್ರೇಕ್ಷಕರ ಹೃದಯದಲ್ಲಿ ತಮ್ಮ ಮುಖಚಿತ್ರದ ಅಚ್ಚೊತ್ತಿದರು. ನಟನೆಯಲ್ಲಿ ತಮ್ಮ ಮುಗ್ಧ ಚೇಷ್ಟೆಗಳಿಂದ ಎಲ್ಲರನ್ನೂ ನಗಿಸಿದರು. ಚಾರ್ಲಿ ಚಾಪ್ಲಿನ್ ಅವರ ಪೂರ್ಣ ಹೆಸರು ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್. ಚಾರ್ಲಿ ಏಪ್ರಿಲ್ 16, 1889 ರಂದು ಹನ್ನಾ ಮತ್ತು ಚಾರ್ಲ್ಸ್ ದಂಪತಿಗೆ ಜನಿಸಿದರು. ತಂದೆ-ತಾಯಿ ಇಬ್ಬರೂ ನಟರು. ಅವರಿಂದ ಪ್ರೇರಿತರಾಗಿ, ಚಾರ್ಲಿ ಶೀಘ್ರವಾಗಿ ಹಾಸ್ಯದ ಕೌಶಲ್ಯಕ್ಕಾಗಿ ಹೆಸರುವಾಸಿಯಾದರು. ಅವರ ತಾಯಿ ಲಂಡನ್ ಮ್ಯೂಸಿಕ್ ಹಾಲ್‌ನಲ್ಲಿ ಪ್ರದರ್ಶನ ನೀಡುತ್ತಿದ್ದರು. ಚಾರ್ಲಿ ತನ್ನ ತಾಯಿಯಿಂದ ಹಾಡಲು ಮತ್ತು ನೃತ್ಯ ಮಾಡಲು ಕಲಿತರು. ಸಿನಿಮಾ ಎಂಬ ಮನರಂಜನಾ ಮಾಧ್ಯಮದ ಮೂಲಕ ಜಗತ್ಪ್ರಸಿದ್ಧರಾದ ಚಾರ್ಲಿ ಚಾಪ್ಲಿನ್ ತಮ್ಮ ಬಾಲ್ಯದಲ್ಲಿ ಬದುಕಿಗಾಗಿ ಹೆಣಗಾಡಿದರು. ಅವರು ತಮ್ಮ ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರು. ತಿನ್ನಲು ಅನ್ನವಿಲ್ಲದೆ ದಯನೀಯ ಜೀವನದಿಂದ ಕಂಗಾಲಾಗಿದ್ದರು. ಹಸಿವು ತಾಳಲಾರದೆ ಬಂಧುಗಳು, ಪರಿಚಯಸ್ಥರ ಮನೆಗೆ ಊಟದ ಸಮಯಕ್ಕೆ ಸರಿಯಾಗಿ ಹೋಗುತ್ತಿದ್ದರು. ಹೇಗಾದರು ಅಲ್ಲೊಂದಿಷ್ಟು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಎಂದು ಆಸೆಗಣ್ಣಿನಿಂದ ಹೋಗುತ್ತಿದ್ದ. ಬಡತನದಿಂದಾಗಿ ಅವರು ತಮ್ಮ 5 ನೇ ವಯಸ್ಸಿನಲ್ಲಿ ವೇದಿಕೆಯೇರಿ ಪ್ರದರ್ಶನ ನೀಡಲು ಪ್ರಾರಂಭಿಸಿದರು.

ಚಾರ್ಲಿಯ ತಂದೆ ಕುಡುಕ. ಅವನು ತನ್ನ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳದೆ ಓಡಿಹೋದ. ಹಾಗಾಗಿ ಬಾಲ್ಯದಿಂದಲೂ ಚಾಪ್ಲಿನ್​ ಅನಾಥಾಶ್ರಮದಲ್ಲಿ ಬೆಳೆದನು. ತಾಯಿ ಒಬ್ಬಳೇ ಸಂಸಾರ ನಡೆಸಬೇಕಾಗಿತ್ತು. ಈ ಮಧ್ಯೆ, ಚಾರ್ಲಿಯ ತಂದೆ ಚಾರ್ಲ್ಸ್ ತನ್ನ 37 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದರು. ಆ ದಿನಗಳಲ್ಲಿ ಚಾರ್ಲಿ ತಾಯಿ ಮನಸ್ಸು ವಿಚಲಿತಳಾಗಿ ಹುಚ್ಚಿಯಂತೆ ವರ್ತಿಸುತ್ತಿದ್ದಳು. ಆಗ ಸ್ವತಃ ಚಾರ್ಲಿಯೇ ತನ್ನ ತಾಯಿಯನ್ನು ಮನೋವೈದ್ಯಕೀಯ ಆಸ್ಪತ್ರೆಗೆ ಸೇರಿಸಿದನು. ಅವನ ತಂದೆ ಜಗತ್ತನ್ನು ತೊರೆದಾಗ, ಅವನ ತಾಯಿ ಬದುಕಿನ ಸ್ಟೇಜ್ನಿಂದ ಹಂದೆ ಸರಿದು ಅಜ್ಞಾತವಾಗುತ್ತಿದ್ದಂತೆ, ತೊಂದರೆಗಳು ಚಾರ್ಲಿಯನ್ನು ಸುತ್ತುವರೆದವು. ಚಿಕ್ಕವಯಸ್ಸಿನಲ್ಲೇ ಚಾರ್ಲಿ ತನ್ನ ದುಃಖದಿಂದಲೇ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಅದಕ್ಕೂ ಮುನ್ನ ಮೂರನೆ ವಯಸ್ಸಿನಲ್ಲಿ ಮಿಮಿಕ್ರಿ ಕರಗತ ಮಾಡಿಕೊಂಡಿದ್ದರು. ಕಷ್ಟಗಳಲ್ಲೇ ಬೆಳೆದ ಚಾರ್ಲಿ, ವಿಧಿಯೊಂದಿಗೆ ಸಂಘರ್ಷಕ್ಕೆ ಇಳಿಯುವ ಮನುಷ್ಯನ ದುರಂತಗಳನ್ನು ಅದ್ಭುತವಾಗಿ ಮಾನವೀಕರಿಸುತ್ತಾನೆ. ಏಳನೇ ವಯಸ್ಸಿನಲ್ಲಿ ತಂದೆ-ತಾಯಿಯಿಂದ ದೂರ ಸರಿದು ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಜೀವನ ಸಾಗಿಸಲು ಆರಂಭಿಸಿದರು. ಅವರು ಹದಿಹರೆಯದಲ್ಲಿ ಸ್ವಲ್ಪ ಕಾಲ ಕ್ಷೌರಿಕನ ಅಂಗಡಿಯಲ್ಲಿ ಕೆಲಸ ಮಾಡಿದರು. ಅವರೊಂದು ಮ್ಯೂಸಿಕ್​ ಹಾಲ್​​ನಲ್ಲಿ ಜೀವನೋಪಾಯಕ್ಕಾಗಿ ಭದ್ರತಾ ಸಿಬ್ಬಂದಿಯಾಗಿಯೂ ಕೆಲಸ ಮಾಡಿದರು.

ಚಾರ್ಲಿ ಚಾಪ್ಲಿನ್ ಅವರ ಸಿನಿಮಾ ವೃತ್ತಿಜೀವನವು ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಯಿತು. 1913 ರಲ್ಲಿ, ಅವರು ಫ್ರೆಡ್ ಕಾರ್ನೋಟ್ ಅವರ ಕಂಪನಿಯೊಂದಿಗೆ ಅಮೆರಿಕ ಪ್ರವಾಸಕ್ಕೆ ಹೋದರು, ಅದು ಅವರ ಜೀವನವನ್ನು ಬದಲಾಯಿಸಿತು. ಮ್ಯಾಕ್ಸೆನಿತ್ ಎಂಬ ನಿರ್ಮಾಪಕರು 150 ಡಾಲರ್ ಸಂಬಳಕ್ಕೆ ಕಿರುಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ನೀಡಿದರು. ಚಾರ್ಲಿಯ ಮೊದಲ ಚಿತ್ರ ಫೆಬ್ರವರಿ 2, 1914 ರಂದು ಬಿಡುಗಡೆಯಾಯಿತು. ಈ ಚಿತ್ರದ ಹೆಸರು ‘ಮೇಕಿಂಗ್ ಎ ಲಿವಿಂಗ್’. ಚಾರ್ಲಿ ಈ ಸಿನಿಮಾದಲ್ಲಿ ತಮ್ಮ ಅತ್ಯುತ್ಸಾಹದ/ಉಲ್ಲಾಸದ ಅಭಿನಯದಿಂದ ಜಗತ್ತಿನಾದ್ಯಂತ ಸಿನಿಮಾ ಅಭಿಮಾನಿಗಳನ್ನು ನಗಿಸಿದರು. ಚಾರ್ಲಿ ಸಿನಿಮಾಗಳಿಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವರ ಅತ್ಯಂತ ಪ್ರಸಿದ್ಧ ಚಿತ್ರಗಳಲ್ಲಿ ಒಂದಾದ ‘ದಿ ಟ್ರಂಪ್’ ಚಾರ್ಲಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. 15 ನಿಮಿಷದ ಈ ಸಿನಿಮಾ ಸಂಪೂರ್ಣವಾಗಿ ಕಾಮಿಡಿಯಲ್ಲಿ ಮೂಡಿಬಂದಿತ್ತು. ಅಲ್ಲದೇ ಇದೊಂದು ಸಂಪೂರ್ಣ ಮೂಕ ಚಿತ್ರ. ಅವರು ತಮ್ಮ ಆಕ್ಷನ್ ಮತ್ತು ಎಕ್ಸ್‌ಪ್ರೆಶನ್‌ಗಳಿಂದ ಇಡೀ ಪ್ರೇಕ್ಷಕರನ್ನು ಹೊಟ್ಟೆ ತುಂಬಾ ನಗಿಸಿದರು. ಅವನ ಹೆಸರು ಪ್ರಪಂಚದಾದ್ಯಂತ ಪ್ರಸಿದ್ಧವಾಯಿತು. ಅಲ್ಲಿಂದಾಚೆಗೆ ಚಾರ್ಲಿ ಹಿಂತಿರುಗಿ ನೋಡಲಿಲ್ಲ. ಹಲವಾರು ಯಶಸ್ವಿ ಚಿತ್ರಗಳನ್ನು ಪ್ರೇಕ್ಷಕರ ಮುಂದಿಟ್ಟರು.

1920 ರ ಹೊತ್ತಿಗೆ ಚಾರ್ಲಿ ಚಾಪ್ಲಿನ್ 69 ಚಿತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾದರು. 150 ಡಾಲರ್‌ಗಳಿಂದ ಪ್ರಾರಂಭವಾದ ಅವರ ಸಂಬಳ ಇದ್ದಕ್ಕಿದ್ದಂತೆ ಮಿಲಿಯನ್ ಡಾಲರ್‌ಗೆ ತಿರುಗಿತು. ಚಾರ್ಲಿ ನಟಿಸಿದ ಪೂರ್ಣಪ್ರಮಾಣದ ಚಿತ್ರ ‘ದಿ ಕಿಡ್’ 1921 ರಲ್ಲಿ ಬಿಡುಗಡೆಯಾಯಿತು. ಚಾರ್ಲಿ ಚಾಪ್ಲಿನ್ ಅವರ ಸಿನಿಮಾಗಳು ವಿಶೇಷವಾಗಿ ಎ ವುಮನ್ ಆಫ್ ಪ್ಯಾರಿಸ್, ಸಿಟಿ ಲೈಟ್ಸ್, ದಿ ಗೋಲ್ಡ್ ರಶ್, ದಿ ಸರ್ಕಸ್, ಮಾಡರ್ನ್ ಟೈಮ್ಸ್ ಪ್ರೇಕ್ಷಕರ ಮೇಲೆ ಅಳಿಸಲಾಗದ ಪ್ರಭಾವ ಬೀರಿತು. ಅವರು ತಮ್ಮ ಹಾಸ್ಯದ ಶೈಲಿಯಿಂದ ಅನೇಕ ಸಿನಿಮಾಗಳನ್ನು ಮಾಡಿದರು ಮತ್ತು ತಮ್ಮ ವೃತ್ತಿಜೀವನದಲ್ಲಿ ಅತ್ಯುನ್ನತ ಶಿಖರ ತಲುಪಿದರು. ಹಾಲಿವುಡ್ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ತನ್ನದೇ ಛಾಪು ಮೂಡಿಸಿದ ಸ್ಟಾರ್ ಆದರು. ಅವರು ಹಾಸ್ಯನಟರಾಗಿ ಮಾತ್ರವಲ್ಲದೆ ಬರಹಗಾರರಾಗಿ, ಸಂಗೀತಗಾರರಾಗಿ ಮತ್ತು ನಿರ್ದೇಶಕರಾಗಿಯೂ ಮಿಂಚಿದ್ದರು. ಅವರು ತಮ್ಮ ಸಿನಿಮಾಗಳನ್ನು ಎಲ್ಲ ರೀತಿಯಲ್ಲೂ ಅದ್ಭುತವಾಗಿಸಿದ್ದಾರೆ.

ಅಮೆರಿಕದಿಂದ ಸ್ವಿಟ್ಜರ್ಲೆಂಡ್‌ಗೆ ಸ್ಥಳಾಂತರಗೊಂಡ ಚಾಪ್ಲಿನ್​​

ಚಾರ್ಲಿ ಕೂಡ ತನ್ನ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಹೊಂದಿದ್ದರು. ‘ದಿ ಗ್ರೇಟ್ ಡಿಟೆಕ್ಟರ್’ ಚಿತ್ರದ ಮೂಲಕ ಚಾರ್ಲಿ ಕಮ್ಯುನಿಸ್ಟರ ಕೋಪಕ್ಕೆ ಗುರಿಯಾಗಬೇಕಾಯಿತು. 1940 ರಲ್ಲಿ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್​​​ ಹಿಟ್ಲರ್ ಅವರನ್ನು ವಿಡಂಬನಾತ್ಮಕವಾಗಿ ಅನುಕರಿಸಿದ ‘ದಿ ಗ್ರೇಟ್ ಡಿಟೆಕ್ಟರ್’ ಚಿತ್ರದಿಂದಾಗಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಮತ್ತು ರಾಜಕೀಯ ವಿವಾದಗಳನ್ನು 10 ವರ್ಷಗಳ ಕಾಲ ಅನೇಕ ಏರಿಳಿತಗಳನ್ನು ಎದುರಿಸಿದರು. ಅವರನ್ನು ಕಮ್ಯುನಿಸ್ಟ್ ಸಹಾನುಭೂತಿ ಎಂದು ಬ್ರಾಂಡ್ ಮಾಡಲಾಯಿತು ಮತ್ತು ತನಗಿಂತ ಚಿಕ್ಕವರನ್ನು ಮದುವೆಯಾಗಿದ್ದಕ್ಕಾಗಿ ಟೀಕಿಸಲಾಯಿತು. ತನ್ನನ್ನು ಸುತ್ತುವರೆದಿರುವ ಕೆಲವು ಪ್ರಕರಣಗಳಿಂದಾಗಿ ಬಹುಕಾಲ ಆಶ್ರಯ ನೀಡಿದ್ದ ಅಮೆರಿಕವನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಮೇರಿಕದ ಪತ್ರಕರ್ತರು ಮತ್ತು ರಾಜಕಾರಣಿಗಳು ಚಾಪ್ಲಿನ್ ಅವರನ್ನು ವ್ಯಭಿಚಾರಿ ಮತ್ತು ಕಮ್ಯುನಿಸ್ಟ್ ಎಂದು ಮಸಿ ಬಳಿದ ನಂತರ, ಅವರು ತಮ್ಮ ನಾಲ್ಕನೇ ಪತ್ನಿ ಓನಾ ಒನೆಲ್ ಅವರೊಂದಿಗೆ ಅಮೆರಿಕವನ್ನು ತೊರೆದರು ಮತ್ತು 1952 ರಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನೆಲೆಸಿದರು. ಮತ್ತೆ 20 ವರ್ಷಗಳ ನಂತರ 1972ರಲ್ಲಿ ಒಮ್ಮೆ ಮಾತ್ರ ಅಮೆರಿಕಕ್ಕೆ ಹೋಗಿ ಗೌರವ ಸ್ವೀಕರಿಸಿದರು. ಅಮೇರಿಕನ್ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಅವರಿಗೆ ಆಸ್ಕರ್ ಪ್ರಶಸ್ತಿಯನ್ನು ನೀಡಿತು. ಸುಮಾರು 20 ವರ್ಷಗಳ ಕಾಲ 20 ನೇ ಶತಮಾನದ ಸಿನಿಮಾವನ್ನು ಕಲೆಯಾಗಿ ರೂಪಿಸುವಲ್ಲಿ ಚಾಪ್ಲಿನ್ ಅವರ ಅಮೂಲ್ಯವಾದ ಕೆಲಸವನ್ನು ಶ್ಲಾಘಿಸಿದರು. ತನ್ನ ಜೀವನದುದ್ದಕ್ಕೂ, ಚಾರ್ಲಿ ಸ್ವಿಟ್ಜರ್ಲೆಂಡ್‌ನಲ್ಲಿರುವ ತನ್ನ ಕುಟುಂಬದೊಂದಿಗೆ ಶಾಂತಿ ಮತ್ತು ಸೌಖ್ಯವನ್ನು ಅನುಭವಿಸಿದನು.

ನಾಲ್ಕು ಮದುವೆ, 11 ಮಕ್ಕಳು… ಅದರೂ ಇರಲಿಲ್ಲ ನೆಮ್ಮದಿ

ಸಿನಿಮಾಗಳನ್ನು ಅಮಿತವಾಗಿ ಆರಾಧಿಸುತ್ತಿದ್ದ ಚಾರ್ಲಿ ಚಾಪ್ಲಿನ್ ತನ್ನ ಪ್ರೇಮ ಜೀವನವನ್ನು ಅದೇ ಪ್ರಮಾಣದಲ್ಲಿ ಆರಾಧಿಸಿದರು/ ಅನುಭವಿಸಿದರು. ಚಾರ್ಲಿ ಚಾಪ್ಲಿನ್ ತನಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ. ವೇಶ್ಯಾಗೃಹಗಳಿಗೂ ಎಡತಾಕುತ್ತಿದ್ದ. ಚಾಪ್ಲಿನ್ ತನ್ನ ಜೀವನದಲ್ಲಿ ಒಟ್ಟು ನಾಲ್ಕು ಮದುವೆಗಳನ್ನು ಮಾಡಿಕೊಂಡಿದ್ದನು. ಅವರಲ್ಲಿ ಮೂವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಚಾರ್ಲಿ 23 ಅಕ್ಟೋಬರ್ 1918 ರಂದು 14 ವರ್ಷದ ಮಿಲ್ರೆಡ್ ಹ್ಯಾರಿಸ್ ಅವರನ್ನು ವಿವಾಹವಾದರು. 1920 ರಲ್ಲಿ ಕೆಲವು ಕಾರಣಗಳಿಂದ ಚಾರ್ಲಿ ಮತ್ತು ಮಿಲ್ರೆಡ್ಸ್ ಬೇರ್ಪಟ್ಟರು. 1914 ರಲ್ಲಿ ಲಿಟಾಗ್ರೆ ಎಂಬ ಆರು ವರ್ಷದ ಹುಡುಗಿ ಚಾಪ್ಲಿನ್ ಅನ್ನು ಆಕರ್ಷಿಸಿದಳು. ನಂತರ, 12 ನೇ ವಯಸ್ಸಿನಲ್ಲಿ, ಅವಳು ಅವಕಾಶಕ್ಕಾಗಿ ಚಾರ್ಲಿ ಸ್ಟುಡಿಯೋಗೆ ಬಂದಳು. 1923 ರಲ್ಲಿ, ಅವರು ಅವಳಿಗೆ ದಿ ಗೋಲ್ಡ್​ ರಶ್ ಚಿತ್ರದಲ್ಲಿ ಅವಕಾಶ ನೀಡಿದರು. ಆ ನಂತರ ಇಬ್ಬರೂ ಒಟ್ಟಿಗೆ ಇದ್ದರು. 1924 ರಲ್ಲಿ, ಲಿಟಾಗ್ರೆ ಗರ್ಭಿಣಿಯಾದಳು. ಅವರಿಬ್ಬರೂ 24 ನವೆಂಬರ್ 1924 ರಂದು ವಿವಾಹವಾದರು. ಆಕೆಗೆ ಇನ್ನೂ 16 ವರ್ಷ. ಚಾಪ್ಲಿನ್‌ಗೆ 35 ವರ್ಷ. ಈ ವಿಷಯಗಳನ್ನು ಲಿಟಾಗ್ರೆ ತನ್ನ ಜೀವನಚರಿತ್ರೆಯಲ್ಲಿ ವಿವರಿಸಿದ್ದಾನೆ. ತನ್ನ ಜೀವನಚರಿತ್ರೆಯಲ್ಲಿ ಇನ್ನೊಂದು ವಿಷಯವನ್ನೂ ಹೇಳಿದ್ದಾಳೆ. ಒಂದು ಸಂದರ್ಭದಲ್ಲಿ, ತನ್ನ ಮುಂದೆ 100 ಮಹಿಳೆಯರು ಇದ್ದಾಗ, ಚಾಪ್ಲಿನ್ ಅವರು ಎರಡು ನಿಮಿಷಗಳಲ್ಲಿ ತನಗೆ ಇಷ್ಟವಾದ ಮಹಿಳೆಯನ್ನು ಆಯ್ಕೆ ಮಾಡಬಲ್ಲರು ಎಂದು ಹೇಳಿದರು. ಅವರ ಎರಡು ವರ್ಷದ ವಿವಾಹ ಜೀವನಕ್ಕೆ ಇಬ್ಬರು ಮಕ್ಕಳಾದ ನಂತರ, ಲಿಟಾಗ್ರೆ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಅವಳು ಬರೆದ 42 ಪುಟಗಳ ಕಾನೂನು ದೂರು ದಾಖಲೆ ಪುಸ್ತಕವನ್ನು ಜನರು ಮುಗಿಬಿದ್ದು ಖರೀದಿಸಿದರು. ಅದರಲ್ಲಿ ತಮ್ಮ ಮನದಾಳದ ಹಲವು ಸಂಗತಿಗಳನ್ನು ಅವಳು ತೆರೆದಿಟ್ಟಳು.

ಅದರ ನಂತರ ಚಾರ್ಲಿ ಪೌಲೆಟ್ಟಿ ಗೊಡಾರ್ಡ್ ಎಂಬ 20 ವರ್ಷದ ನಟಿಯನ್ನು ಭೇಟಿಯಾದರು. ಅವರು 1936 ರಲ್ಲಿ ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದರು. ಸ್ವಲ್ಪ ಸಮಯದವರೆಗೆ ಚಾಪ್ಲಿನ್ ಮಕ್ಕಳಿಗೆ ಬಾಡಿಗೆ ತಾಯಿಯಾಗಿದ್ದರು. 1941 ರಲ್ಲಿ 22 ವರ್ಷದ ಯುವತಿ ಜೋನ್ ಬೆರ್ರಿ ಚಾಪ್ಲಿನ್ ಸ್ಟುಡಿಯೋಗೆ ನಟನೆಗಾಗಿ ಬಂದರು. ನಂತರ ಅವರು ಚಾರ್ಲಿಯಿಂದ ದೂರವಾದರು. ತದನಂತರ ಆಗಾಗ್ಗೆ ಚಾಪ್ಲಿನ್ ಬಳಿಗೆ ಬಂದು ಹೋಗುತ್ತಿದ್ದಳು. ಸ್ವಲ್ಪ ಸಮಯದ ನಂತರ ಅವರು ನ್ಯೂಯಾರ್ಕ್ಗೆ ತೆರಳಿದರು. ಚಾಪ್ಲಿನ್ ನಂತರ ಖ್ಯಾತ ನಾಟಕಕಾರ ಯುಜೆನಿ ಬೊನೆಲ್ ಅವರ ಮಗಳು 17 ವರ್ಷದ ಓನಾ ಒನೆಲ್ ಅವರನ್ನು ಭೇಟಿಯಾದರು. ಅವರು 1943 ರಲ್ಲಿ ಅವರನ್ನು ವಿವಾಹವಾದರು. ಇದು ಚಾರ್ಲಿ ಚಾಪ್ಲಿನ್ ಅವರ ನಾಲ್ಕನೇ ವಿವಾಹವಾಗಿದೆ. ಈ ಮದುವೆಯು ಚಾರ್ಲಿಯ ಜೀವನದಲ್ಲಿ ಯಶಸ್ವಿಯಾಯಿತು. ಇವರಿಬ್ಬರು ಬಹಳ ಕಾಲ ಸುಖವಾಗಿ ಬಾಳಿದರು. ಚಾಪ್ಲಿನ್ ಸಾಯುವವರೆಗೂ ಓ’ನೀಲ್ ಜೊತೆ ಸಂಪರ್ಕದಲ್ಲಿದ್ದ.

ಆದರೆ, ಮೇ 1943 ರ ಮಧ್ಯದಲ್ಲಿ, ಜಾನ್‌ಬೆರಿ ಚಾರ್ಲಿ ಚಾಪ್ಲಿನ್‌ ಮನೆಗೆ ನುಗ್ಗಿದಳು. ದೌರ್ಜನ್ಯದಿಂದ ಚಾರ್ಲಿ ಇದ್ದ ಮನೆಗೆ ನುಗ್ಗಿ ಜಗಳವಾಡುತ್ತಾಳೆ. ಪರಿಣಾಮವಾಗಿ, ಅವಳು ತಿಂಗಳುಕಾಲ ಜೈಲಿನಲ್ಲಿದ್ದಳು. ಆಗ ಆಕೆ 3 ತಿಂಗಳ ಗರ್ಭಿಣಿ ಎಂದು ತಿಳಿದುಬರುತ್ತದೆ. ಜೈಲಿನಿಂದ ಬಿಡುಗಡೆಯಾದ ನಂತರ, ತನ್ನ ಮಗುವಿನ ತಂದೆ ಚಾರ್ಲಿ ಚಾಪ್ಲಿನ್ ಎಂದು ಆತನ ವಿರುದ್ಧ ಮೊಕದ್ದಮೆ ಹೂಡಿದಳು. ಡಿಎನ್ಎ ಪರೀಕ್ಷೆಯಲ್ಲಿ ಚಾಪ್ಲಿನ್ ಮಗುವಿನ ತಂದೆ ಅಲ್ಲ ಎಂದು ತಿಳಿದುಬರುತ್ತದೆ. ಚಾಪ್ಲಿನ್ ತನ್ನ 70 ರ ಹರೆಯದಲ್ಲಿ ತನ್ನ ಕೊನೆಯ 11 ನೇ ಮಗುವನ್ನು ಹೊಂದಿದ್ದ. ಚಾರ್ಲಿ ತನ್ನ ಆತ್ಮಚರಿತ್ರೆಯಲ್ಲಿ.. ತನ್ನ ವೈವಾಹಿಕ ಜೀವನದ ಬಗ್ಗೆ ಬರೆದುಕೊಂಡಿದ್ದಾನೆ.. ಓನಾ ಅಂತಹ ಮಹಿಳೆಯನ್ನು ನಾನು ಈ ಮೊದಲೇ ಭೇಟಿಯಾಗಿದ್ದರೆ.. ಹೆಣ್ಣುಗಳಿಂದ ನನಗೆ ಯಾವುದೇ ಸಮಸ್ಯೆ ಬರುತ್ತಿರಲಿಲ್ಲ. ತನಗೇ ತಿಳಿಯದೆ ಜೀವನಪೂರ್ತಿ ಅವಳಿಗಾಗಿ ಕಾದಿದ್ದೇನೆ ಎಂದಿದ್ದಾನೆ. ಇದಲ್ಲದೆ, ಚಾಪ್ಲಿನ್ ಅನೇಕ ಖ್ಯಾತ ಮಹಿಳೆಯರೊಂದಿಗೆ ಸಂಬಂಧವನ್ನು ಹೊಂದಿದ್ದ.

ಜಗತ್ತಿನ ಖ್ಯಾತ ನಾಮರೊಂದಿಗೆ ಒಡನಾಟಗಳು.. ಅರಸಿಬಂದ ಪ್ರಶಸ್ತಿಗಳು..

ಚಾರ್ಲಿ ದೈಹಿಕವಾಗಿ ಕುಬ್ಜರಾಗಿ ಚಿಕ್ಕವರಾಗಿ ಕಂಡುಬರುತ್ತಿದ್ದರು. ಅವರು ಕೇವಲ 5.5 ಅಡಿ ಎತ್ತರದೊಂದಿಗೆ ತೆಳ್ಳಗಿದ್ದರು. ಆದರೂ ಅವರು ತಮ್ಮ ಪ್ರತಿಭೆಯಿಂದ ಜಗತ್ತನ್ನು ನಗಿಸಿದರು. ಆ ನಂತರ ಹಲವಾರು ಪ್ರಶಸ್ತಿಗಳನ್ನೂ ಗೆದ್ದುಕೊಂಡರು. 1940 ರ ದಶಕದಲ್ಲಿ, ಅವರು ‘ದಿ ಗ್ರೇಟ್ ಡಿಕ್ಟೇಟರ್’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. 1952 ರಲ್ಲಿ, ನಿಷೇಧಿತ ಚಲನಚಿತ್ರ ಲೈಮ್‌ಲೈಟ್ ಸಂಗೀತಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಚಾರ್ಲಿಯನ್ನು ಸಾಮಾನ್ಯ ಜನರು ಮತ್ತು ಮಹಾನ್ ಗಣ್ಯರು ತದೆಕಚಿತ್ತದಿಂದ ಆರಾಧಿಸುತ್ತಾರೆ. ಚಾರ್ಲಿ ಬರೆದ ಜೀವನಚರಿತ್ರೆಯಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಇಷ್ಟಪಡುತ್ತೇನೆ ಎಂದು ಬರೆದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಬ್ರಿಟಿಷ್ ಪ್ರಧಾನಿ ವಿನ್​​ಸ್ಟನ್​ ಚರ್ಚಿಲ್ ಅವರನ್ನು ಭೇಟಿಯಾದಾಗ, ಚಾರ್ಲಿ ಅವರನ್ನು ಮಹಾತ್ಮ ಗಾಂಧಿಯನ್ನು ಭೇಟಿಯಾಗುವಂತೆ ಕೇಳಿಕೊಂಡರು. ಈ ಕಾರಣಕ್ಕಾಗಿಯೇ ಅವರು ಮಹಾತ್ಮ ಗಾಂಧಿಯವರನ್ನೂ ಭೇಟಿಯಾದರು. ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಕೂಡ ಚಾರ್ಲಿಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಭೇಟಿಯಾದರು. ಚಾರ್ಲಿ ಚಾಪ್ಲಿನ್ ಅವರು ಜೀವನಚರಿತ್ರೆಯಲ್ಲಿ ತಮ್ಮ ಜೀವನದಲ್ಲಿ ನಡೆದ ಆ ಘಟನೆಯನ್ನು ಬರೆದುಕೊಂಡಿದ್ದಾರೆ.

ಅದು 1953ನೇ ಇಸವಿ. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸಮ್ಮೇಳನವೊಂದರಲ್ಲಿ ಭಾಗವಹಿಸಲು ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದರು. ಅಲ್ಲಿ ಅವರು ಚಾರ್ಲಿ ಚಾಪ್ಲಿನ್ ಅವರನ್ನು ಭೇಟಿಯಾದರು. ಚಾಪ್ಲಿನ್ ತನ್ನ ಆತ್ಮಚರಿತ್ರೆಯಲ್ಲಿ ಈ ಭೇಟಿಯನ್ನು ಉಲ್ಲೇಖಿಸುತ್ತಾರೆ. ಮರುದಿನ ಪಂಡಿತ್ ನೆಹರೂ ಅವರು ಚಾಪ್ಲಿನ್ ಕಾರಿನಲ್ಲಿ ಎಲ್ಲಿಗೋ ಹೋಗುತ್ತಿದ್ದರು. ಏನೇನೋ ಮಾತನಾಡುತ್ತಾ ಇಬ್ಬರೂ ಮಾತಿನಲ್ಲಿ ಮುಳುಗಿದ್ದರು. ಅಷ್ಟರಲ್ಲಿ ಅವರ ಚಾಲಕ ಹಠಾತ್ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸಿದ. ಏಕಾಏಕಿ ಇಬ್ಬರೂ ಬೆಚ್ಚಿಬಿದ್ದರು. ಆದರೆ ದೊಡ್ಡ ಅಪಾಯವೊಂದು ತಪ್ಪಿತ್ತು. ಚಾಲಕ ಚಾಣಾಕ್ಷತನದಿಂದ ವರ್ತಿಸಿ ಅಪಘಾತ ತಪ್ಪಿಸಿದ್ದಾನೆ ಎಂದು ತಿಳಿದುಬರುತ್ತದೆ. ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯಲು ಮುಂದಾದಾಗ, ಚಾಲಕ ತಮ್ಮನ್ನು ರಕ್ಷಿಸಿದ್ದಾರೆ ಎಂದು ಅವರಿಗೆ ಅರಿವಾಯಿತು. ಇಬ್ಬರೂ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾರ್ಲಿ ಚಾಪ್ಲಿನ್ ಅವರ ಆತ್ಮಕಥನದ ಮೂಲಕ ಜಗತ್ತಿಗೆ ಇದು ತಿಳಿಯಿತು.

ಇದನ್ನೂ ಓದಿ: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಚಾರ್ಲಿ ಸಾವಿನ ಹಿಂದಿನ ನಿಜವಾದ ಕಾರಣ ಏನು?

ಅಮೆರಿಕದ ಅಧಿಕಾರಿಗಳ ಕಿರುಕುಳ ಸಹಿಸಲಾಗದೆ ಚಾರ್ಲಿ ಸ್ವಿಟ್ಜರ್ಲೆಂಡ್‌ಗೆ ತೆರಳಿ 88ನೇ ವಯಸ್ಸಿನಲ್ಲಿ ನಿಧನರಾದರು. ಡಿಸೆಂಬರ್ 24, 1977 ರಂದು ಚಾರ್ಲಿ ಚಾಪ್ಲಿನ್‌ಗೆ ಜಗತ್ತು ಕಣ್ಣೀರಿನ ವಿದಾಯ ಹೇಳಿತು. ಕ್ರಿಸ್‌ಮಸ್ ಆಚರಣೆಗೆ ಕೆಲವೇ ಗಂಟೆಗಳ ಮೊದಲು ಅವರು ಕೊನೆಯುಸಿರೆಳೆದಿದ್ದಾರೆ. ವಿಶ್ವಾದ್ಯಂತ ಮನ್ನಣೆ ಗಳಿಸಿರುವ ಚಾರ್ಲಿ ಚಾಪ್ಲಿನ್ ಹೇಗೆ ಸತ್ತರು ಎಂಬುದು ನಿಗೂಢವಾಗಿಯೇ ಉಳಿದಿದೆ. ಡಿಸೆಂಬರ್ 25, 1977 ರಂದು ಚಾರ್ಲಿ ನಿದ್ರೆಯಲ್ಲಿದ್ದಾಗ ಬ್ರೈನ್ ಸ್ಟ್ರೋಕ್ ಅನ್ನು ಅನುಭವಿಸಿದನು. ಆ ಬ್ರೈನ್ ಸ್ಟ್ರೋಕ್‌ನಿಂದ ಅವರು ಮತ್ತೆ ಏಳಲು ಸಾಧ್ಯವಾಗಲಿಲ್ಲ. ಆದರೆ ಅವರ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಆರೋಗ್ಯ ಸರಿಯಿಲ್ಲದ ಕಾರಣ ಆಮ್ಲಜನಕ ನೀಡಿದ್ದರು. ಆದರೆ ಆ ಸಮಯದಲ್ಲಿಯೇ ಚಾರ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ, ಚಾರ್ಲಿ ವಯಸ್ಸಾದ ಕಾರಣ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆ ಸಮಯದಲ್ಲಿ ಅವರ ನಾಲ್ಕನೇ ಪತ್ನಿ ಓನಾ ಚಾಪ್ಲಿನ್‌ನ 11 ಮಕ್ಕಳ ಪೈಕಿ ನಾಲ್ಕು ಮಕ್ಕಳನ್ನು ಹೊಂದಿದ್ದರು.

ಚಾರ್ಲಿಯ ಸಮಾಧಿಯನ್ನು ಏಕೆ ಕಾಂಕ್ರೀಟ್ ಮಾಡಲಾಗಿದೆ?

ಚಾಪ್ಲಿನ್ ಅವರ ಚಲನಚಿತ್ರ ವೃತ್ತಿಜೀವನವು 1914 ರಲ್ಲಿ ಪ್ರಾರಂಭವಾಯಿತು ಮತ್ತು 1967 ರಲ್ಲಿ ಕೊನೆಗೊಂಡಿತು. 81 ಸಿನಿಮಾಗಳನ್ನು ಅವರು ನಿರ್ಮಿಸಿದ್ದಾರೆ. ಅವರ ನಟನಾ ವೃತ್ತಿಜೀವನ ಮುಗಿದ 10 ವರ್ಷಗಳ ನಂತರ ಅವರು ನಿಧನರಾದರು. ಚಾಪ್ಲಿನ್‌ನ ಮರಣದ ಎರಡು ದಿನಗಳ ನಂತರ, ಆತನನ್ನು ಜಿನೀವಾ ಸರೋವರದ ಇಳಿಜಾರಿನಲ್ಲಿ ಸಮಾಧಿ ಮಾಡಲಾಯಿತು. ಆದರೆ, ಚಾಪ್ಲಿನ್ ಕಥೆ ಅಲ್ಲಿಗೆ ಮುಗಿಯಲಿಲ್ಲ. ಚಾರ್ಲಿಗೆ ಸಂಬಂಧಿಸಿದ ಮತ್ತೊಂದು ಸಂವೇದನಾಶೀಲ ಘಟನೆ ಆತನ ಸಾವಿನ ನಂತರ ನಡೆಯಿತು. ಮಾರ್ಚ್ 1978 ರಲ್ಲಿ, ಚಾರ್ಲಿಯ ಮರಣದ ಕೆಲವು ತಿಂಗಳ ನಂತರ, ಇಬ್ಬರು ದರೋಡೆಕೋರರು ಚಾಪ್ಲಿನ್ ಅವರ ಶವಪೆಟ್ಟಿಗೆಯನ್ನು ತೆಗೆದು ದೇಹವನ್ನು ಹೊತ್ತೊಯ್ದರು. ಚಾಪ್ಲಿನ್ ಅವರ ದೇಹವನ್ನು ಹಿಂದಿರುಗಿಸಲು, ಅವರು 4 ಲಕ್ಷ ಪೌಂಡ್‌ಗಳನ್ನು ಪಾವತಿಸಲು ಒತ್ತಾಯಿಸಿದರು. ಇದು ಪ್ರಸ್ತುತ ಮೌಲ್ಯದಲ್ಲಿ 23.5 ಲಕ್ಷ ಡಾಲರ್‌ಗಳು. ಚಾಪ್ಲಿನ್‌ನ ಮರಣದ ನಂತರ, ಆತನ ಹೆಂಡತಿಯು 1.2 ಮಿಲಿಯನ್ ಪೌಂಡ್‌ಗಳ ಉತ್ತರಾಧಿಕಾರವನ್ನು ಪಡೆದರು. ಇಂದಿನ ಮೌಲ್ಯದಲ್ಲಿ ಸುಮಾರು $ 7 ಮಿಲಿಯನ್. ಆದರೆ, ಕಳ್ಳರು ಕೇಳಿದಷ್ಟು ಹಣವನ್ನು ನೀಡಲು ಚಾಪ್ಲಿನ್ ಪತ್ನಿ ನಿರಾಕರಿಸಿದ್ದಳು. ನಂತರ ದರೋಡೆಕೋರರು ಕರೆ ಮಾಡಿ ಹಣ ನೀಡದಿದ್ದರೆ ಆಕೆಯ ಮಕ್ಕಳಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಚಾಪ್ಲಿನ್ ಶವಪೆಟ್ಟಿಗೆ ಬಗ್ಗೆ ಕಳ್ಳರ ಬೆದರಿಕೆಯ ಬಗ್ಗೆ ಆಕೆಯ ಕುಟುಂಬಸ್ಥರು ಬಹಿರಂಗವಾಗಿ ಮಾತನಾಡಿಲ್ಲ. ಆದರೆ, ಶವಪೆಟ್ಟಿಗೆಯ ನಾಪತ್ತೆ ಬಗ್ಗೆ ವದಂತಿ ಹರಡಿತು. ಪರಿಣಾಮವಾಗಿ, ಸ್ವಿಸ್ ಪೊಲೀಸರು ಇನ್ನೂರು ಟೆಲಿಫೋನ್ ಕಿಯೋಸ್ಕ್‌ಗಳ ಮೇಲೆ ಕಣ್ಗಾವಲು ನಡೆಸಿದರು. ಚಾಪ್ಲಿನ್ ಅವರ ದೂರವಾಣಿಯನ್ನೂ ಕದ್ದಾಲಿಕೆ ಮಾಡಲಾಗಿದೆ.

ಐದು ವಾರಗಳ ನಂತರ, ಚಾಪ್ಲಿನ್ ಶವಪೆಟ್ಟಿಗೆಯನ್ನು ಕದ್ದ ಕಳ್ಳರನ್ನು ಗುರುತಿಸಿ ಬಂಧಿಸಲಾಯಿತು. ಜಿನೀವಾ ಸರೋವರದ ಕಾರ್ನ್ ಫೀಲ್ಡ್ನಲ್ಲಿ ಸಮಾಧಿ ಮಾಡಲಾದ ಚಾಪ್ಲಿನ್ ಶವಪೆಟ್ಟಿಗೆಯನ್ನು ಪೊಲೀಸರು ಪತ್ತೆ ಹಚ್ಚಿದರು. ಚಾಪ್ಲಿನ್ ಶವಪೆಟ್ಟಿಗೆಯನ್ನು ಕದ್ದ ಇಬ್ಬರ ವಿರುದ್ಧ ಕೇಸು ದಾಖಲಿಸಲಾಯಿತು ಎಂದು ಜಿನೀವಾ ಪೊಲೀಸರು ಹೇಳಿದ್ದರು. ಪೋಲೆಂಡ್‌ನಿಂದ ನಿರಾಶ್ರಿತರಾದ ರೋಮನ್ ವರ್ಧಾಸ್, 11 ಡಿಸೆಂಬರ್ 1978 ರಂದು ಸ್ವಿಸ್ ನ್ಯಾಯಾಲಯದಲ್ಲಿ ಚಾಪ್ಲಿನ್ ಮರಣದ ಒಂದು ವರ್ಷದ ನಂತರ ಶವಪೆಟ್ಟಿಗೆಯನ್ನು ಕದ್ದಿರುವುದಾಗಿ ಒಪ್ಪಿಕೊಂಡರು. ಸಮಾಧಿ ಸ್ಥಳದಿಂದ ಚಾರ್ಲ್ಸ್‌ನ ದೇಹವನ್ನು ಹೊರತೆಗೆದಿರುವುದಾಗಿ ಅವರು ಹೇಳಿಕೊಂಡರು ಮತ್ತು ಅವರ ಕುಟುಂಬದಿಂದ ಹಣವನ್ನು ಸುಲಿಗೆ ಮಾಡಿದರು. ಯಾವುದೇ ಉದ್ಯೋಗ ಇಲ್ಲದ ಕಾರಣ ಈ ರೀತಿ ದುಡಿಯಬೇಕಾಯಿತು ಎನ್ನುತ್ತಾರೆ ಆಟೋ ಮೆಕಾನಿಕ್ ರೋಮನ್ ವರ್ಧಾಸ್. ಇದಕ್ಕಾಗಿ ಗೆಳೆಯನ ನೆರವು ಪಡೆದಿದ್ದೇನೆ ಎಂದು ವಿವರಿಸಿದರು. ಈ ಪ್ರಕರಣದಲ್ಲಿ ವಾರ್ಧಾಸ್‌ಗೆ ನಾಲ್ಕೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದರೆ, ಆತನ ಸ್ನೇಹಿತನಿಗೆ 18 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ನಂತರ ಮೊದಲು ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲಿಯೇ ಚಾಪ್ಲಿನ್​​ ದೇಹವನ್ನು ಮರು ಅಂತ್ಯಕ್ರಿಯೆ ಮಾಡಲಾಯಿತು. ಈ ವೇಳೆ ಕಳ್ಳತನಕ್ಕೆ ಅವಕಾಶವಿಲ್ಲದಂತೆ ಕಾಂಕ್ರೀಟ್‌ ಹಾಕಿ ಸಮಾಧಿ ಮಾಡಲಾಯಿತು.

ಕ್ಷುದ್ರಗ್ರಹಕ್ಕೆ ಚಾರ್ಲಿ ಚಾಪ್ಲಿನ್ ಹೆಸರಿಡಲಾಗಿದೆ

ಉಕ್ರೇನ್‌ನ ಖಗೋಳಶಾಸ್ತ್ರಜ್ಞರು ಕ್ಷುದ್ರಗ್ರಹಕ್ಕೆ ಚಾಪ್ಲಿನ್ 3623 ಎಂದು ಹೆಸರಿಟ್ಟರು. ಅಲ್ಲದೆ, ಹಾಲಿವುಡ್ ತೊರೆದ ನಂತರ ಚಾಪ್ಲಿನ್ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ವಾಸಿಸುತ್ತಿದ್ದರು. ಅವರ ನೆನಪಿಗಾಗಿ ಮ್ಯೂಸಿಯಂ ಕೂಡ ಇದೆ. ಸ್ಕಾಟ್ಲೆಂಡ್‌ನಲ್ಲಿರುವ ನೈರ್ನ್ ಚಾಪ್ಲಿನ್ ಅವರ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ಚಾರ್ಲಿ ಪ್ರತಿ ವರ್ಷ ಇಲ್ಲಿಗೆ ಹೋಗುತ್ತಿದ್ದರು. ಇಲ್ಲಿ ಸಿಕ್ಕ ಪ್ರಶಾಂತತೆಗೆ ಬೆಲೆ ಕಟ್ಟಲಾಗದು ಎಂದು ಚಾಪ್ಲಿನ್ ತನ್ನ ಆತ್ಮೀಯ ಗೆಳೆಯರಿಗೆ ಹೇಳುತ್ತಿದ್ದರು. ಆದರೆ, ಇದರ ಹಿಂದಿರುವ ಅಸಲಿ ಸಂಗತಿ ಏನೆಂದರೆ, ನಾಯರ್ನ್ ಜನರಿಗೆ ಚಾಪ್ಲಿನ್ ಬಗ್ಗೆ ಅಷ್ಟಾಗಿ ತಿಳಿದಿಲ್ಲ. ಹಾಗಾಗಿ.. ಇಲ್ಲಿ ಅಭಿಮಾನಿಗಳ ಘರ್ಷಣೆ ಇರಲಿಲ್ಲ! ಅದೇ ಅವರಿಗೆ ತುಂಬಾ ಖುಷಿ ಕೊಟ್ಟಿದ್ದು.

ಮತ್ತಷ್ಟು  ಪ್ರೀಮಿಯಂ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

Published On - 9:06 pm, Fri, 21 June 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ