ಟಿವಿ9 ಸಂಸ್ಥೆಯ ಸಂಜೀವ್ ಶ್ರೀವಾಸ್ತವಗೆ ‘ಅತ್ಯುತ್ತಮ ಸಿನಿಮಾ ವಿಮರ್ಶಕ’ ರಾಷ್ಟ್ರ ಪ್ರಶಸ್ತಿ

72nd National Film Award: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಮಾಧ್ಯಮ ರಂಗದಲ್ಲಿ ಮತ್ತು ಸಿನಿಮಾ ವಿಮರ್ಶಾ ಕ್ಷೇತ್ರದಲ್ಲಿ ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಟಿವಿ9 ಹೆಮ್ಮೆಯ ಸಾಧನೆ ಮಾಡಿದೆ. ಟಿವಿ9 ಭಾರತ್‌ವರ್ಷ್‌ನ ಸಹಾಯಕ ಸಂಪಾದಕ ಸಂಜೀವ್ ಶ್ರೀವಾಸ್ತವ ಅವರು ‘ಅತ್ಯುತ್ತಮ ಸಿನಿಮಾ ವಿಮರ್ಶಕ’ ಪ್ರಶಸ್ತಿ ಪಡೆದಿದ್ದಾರೆ.

ಟಿವಿ9 ಸಂಸ್ಥೆಯ ಸಂಜೀವ್ ಶ್ರೀವಾಸ್ತವಗೆ ‘ಅತ್ಯುತ್ತಮ ಸಿನಿಮಾ ವಿಮರ್ಶಕ’ ರಾಷ್ಟ್ರ ಪ್ರಶಸ್ತಿ
Sanjeev Shrivastava

Updated on: Jul 20, 2026 | 4:01 PM

ಮುಖ್ಯಾಂಶಗಳು

  • ‘ಅತ್ಯುತ್ತಮ ಸಿನಿಮಾ ವಿಮರ್ಶಕ’ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸಂಜೀವ್ ಶ್ರೀವಾಸ್ತವ.
  • ಕಳೆದ 25 ವರ್ಷಗಳಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿರುವ ಹಿರಿಯ ಪತ್ರಕರ್ತ, ಲೇಖಕ.
  • ಬರವಣಿಗೆಯ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಟಿವಿ9 ಸಂಸ್ಥೆಗೆ ಧನ್ಯವಾದ ಅರ್ಪಿಸಿದ ಸಂಜೀವ್.

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ (72nd National Film Awards 2026) ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಟಿವಿ9 ಸಂಸ್ಥೆಗೆ ದೊಡ್ಡ ಗೌರವ ಲಭಿಸಿದೆ. ಟಿವಿ9 ಭಾರತ್‌ವರ್ಷ್‌ನ ಅಸಿಸ್ಟೆಂಟ್ ಎಡಿಟರ್ ಹಾಗೂ ಖ್ಯಾತ ಲೇಖಕ, ಸಿನಿಮಾ ವಿಮರ್ಶಕ ಸಂಜೀವ್ ಶ್ರೀವಾಸ್ತವ (Sanjeev Shrivastava) ಅವರು ಅತ್ಯುತ್ತಮ ಸಿನಿಮಾ ವಿಮರ್ಶಕ (ಹಿಂದಿ) ವಿಭಾಗದಲ್ಲಿ ಪ್ರತಿಷ್ಠಿತ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಂಸ್ಥೆಗೆ ಧನ್ಯವಾದ ಅರ್ಪಿಸಿದ ಸಂಜೀವ್ ಶ್ರೀವಾಸ್ತವ:

ರಾಷ್ಟ್ರ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅಪಾರ ಸಂತಸ ವ್ಯಕ್ತಪಡಿಸಿರುವ ಸಂಜೀವ್ ಶ್ರೀವಾಸ್ತವ, ‘ರಾಷ್ಟ್ರ ಪ್ರಶಸ್ತಿ ಘೋಷಣೆಯಾದಾಗ ಪ್ರತಿಯೊಬ್ಬರಿಗೂ ಸಂತೋಷವಾಗುವುದು ಸಹಜ, ನನಗೂ ಅತೀವ ಆನಂದವಾಗಿದೆ. ಇದು ನಮ್ಮ ಕೆಲಸಕ್ಕೆ ಸಿಕ್ಕ ಸರಿಯಾದ ಮನ್ನಣೆಯಾಗಿದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಕೈಯಿಂದ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದು ನನ್ನ ಜೀವನದ ಅತಿ ದೊಡ್ಡ ಸಾಧನೆಯಾಗಿದೆ. ಟಿವಿ9 ಭಾರತ್‌ವರ್ಷ್‌ನ ಹಿಂದಿ ವೆಬ್‌ಸೈಟ್‌ನಲ್ಲಿ ಸಿನಿಮಾ ಕುರಿತು ಬರೆಯಲು ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಇದಕ್ಕಾಗಿ ನನ್ನ ಸಂಸ್ಥೆಗೆ ಹಾಗೂ ಬೆಂಬಲವಾಗಿ ನಿಂತ ಎಲ್ಲಾ ಹಿರಿಯ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಗೌರವ ಟಿವಿ9 ಸಂಸ್ಥೆಯಿಂದಾಗಿಯೇ ನನಗೆ ಸಿಕ್ಕಿದೆ’ ಎಂದು ಹೇಳಿದ್ದಾರೆ.

ಸಿನಿಮಾ ಸಂಸ್ಕೃತಿಯನ್ನು ಬಲಪಡಿಸುವುದೇ ಮುಖ್ಯ ಉದ್ದೇಶ:

ತಮ್ಮ ಬರವಣಿಗೆಯ ಶೈಲಿ ಹಾಗೂ ಸಿನಿಮಾ ವಿಶ್ಲೇಷಣೆಯ ಕುರಿತು ಮಾತನಾಡಿದ ಸಂಜೀವ್ ಶ್ರೀವಾಸ್ತವ ಅವರು, ‘ಕಳೆದ ಎರಡೂವರೆ ದಶಕಗಳಿಂದ ನಾನು ವೃತ್ತಿಪರ ಪತ್ರಕರ್ತನಾಗಿ ಮತ್ತು ಲೇಖಕನಾಗಿ ಕೆಲಸ ಮಾಡುತ್ತಿದ್ದೇನೆ. ಅರ್ಥಪೂರ್ಣ ಬರವಣಿಗೆ ಮತ್ತು ಸೂಕ್ತ ವಿಶ್ಲೇಷಣೆಯು ಚಲನಚಿತ್ರಗಳಿಗೆ ಉತ್ತಮ ಗೌರವವನ್ನು ತಂದುಕೊಡುತ್ತದೆ. ಸಿನಿಮಾ ಎನ್ನುವುದು ಜನಸಾಮಾನ್ಯರನ್ನು ತಲುಪುವ ಒಂದು ಮಾಂತ್ರಿಕ ಶಕ್ತಿ. ಇದು ಕೇವಲ ಮನರಂಜನೆಯಷ್ಟೇ ಅಲ್ಲದೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಂತೆ ಸಮಾಜದ ಮೇಲೆ ನೇರ ಪ್ರಭಾವ ಬೀರುತ್ತದೆ. ನನ್ನ ವಿಮರ್ಶೆಗಳು ಕೇವಲ ಕಥೆಯನ್ನಷ್ಟೇ ಹೇಳದೆ, ಸಿನಿಮಾದ ವೈವಿಧ್ಯಮಯ ಆಯಾಮಗಳನ್ನು ಪ್ರೇಕ್ಷಕರಿಗೆ ತಲುಪಿಸುವಂತಿರುತ್ತವೆ. ಇದು ಸಿನಿಮಾ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುತ್ತದೆ’ ಎಂದಿದ್ದಾರೆ.

ಚಿತ್ರರಂಗದ ಜೊತೆಗಿನ ಅಪಾರ ಒಡನಾಟ:

ಸಂಜೀವ್ ಶ್ರೀವಾಸ್ತವ ಅವರು ಕೇವಲ ಹೊಸ ಸಿನಿಮಾಗಳ ವಿಮರ್ಶೆಯಷ್ಟೇ ಅಲ್ಲದೆ, ಹಳೆಯ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಅನೇಕ ಲೇಖನಗಳು ಹಾಗೂ ಸಂಶೋಧನಾ ಬರಹಗಳನ್ನು ಬರೆದಿದ್ದಾರೆ. ಇವರ ಬರವಣಿಗೆಯಲ್ಲಿ ಮೂಡಿಬಂದಿರುವ ‘ಸಮಯ್ ಸಿನಿಮಾ ಔರ್ ಇತಿಹಾಸ್’ (ಪ್ರಕಾಶನ ವಿಭಾಗ) ಮತ್ತು ಮಾಧುರಿ ಪತ್ರಿಕೆಯ ಮಾಜಿ ಸಂಪಾದಕ ಅರವಿಂದ್ ಕುಮಾರ್ ಅವರೊಂದಿಗಿನ ಸಂಭಾಷಣೆ ಆಧಾರಿತ ‘ಮಾಧುರಿ ಕಾಲ್’ (ಇ-ಬುಕ್) ಪುಸ್ತಕಗಳು ಚಿತ್ರರಂಗದಲ್ಲಿ ಭಾರೀ ಗಮನ ಸೆಳೆದಿವೆ. ಸಿನಿಮಾದ ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಹೊಂದಿರುವ ಇವರು ಕವಿತೆ, ಕಥೆ ಹಾಗೂ ಕಾದಂಬರಿಗಳನ್ನೂ ಬರೆಯುತ್ತಾರೆ.

ಇದನ್ನೂ ಓದಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಮಿಂಚಿದ ಕನ್ನಡ ಸಿನಿಮಾ ‘ಮಿಥ್ಯ’

ಸಂಜೀವ್ ಶ್ರೀವಾಸ್ತವ ಯಾರು?

ಮೂಲತಃ ಬಿಹಾರದ ಸೀತಾಮಢಿಯವರಾದ ಸಂಜೀವ್ ಶ್ರೀವಾಸ್ತವ ಅವರು ಕಳೆದ 25 ವರ್ಷಗಳಿಂದ ದೆಹಲಿ ಮತ್ತು ಮುಂಬೈನ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಬ್ರೇಕಿಂಗ್ ನ್ಯೂಸ್‌ನಿಂದ ಹಿಡಿದು ಕ್ರಿಯೇಟಿವ್ ರೈಟಿಂಗ್‌ವರೆಗೂ ಅಪಾರ ಕೌಶಲ ಹೊಂದಿರುವ ಇವರು ದೇಶ-ವಿದೇಶಗಳ ರಾಜಕೀಯ, ಚಲನಚಿತ್ರ, ಸಾಹಿತ್ಯ ಹಾಗೂ ಅಪರಾಧ ಜಗತ್ತಿನ ಕುರಿತು ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತಾರೆ. ಸಾಮಾನ್ಯ ಓದುಗರಿಗೂ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಬರೆಯುವುದು ಇವರ ಹೆಗ್ಗಳಿಕೆ. ಚಿತ್ರರಂಗದ ಮೇಲಿನ ಒಲವಿನಿಂದಾಗಿ ಈಗಾಗಲೇ ಮೂರು ಪುಸ್ತಕಗಳು, ಎರಡು ಕಾದಂಬರಿಗಳು ಹಾಗೂ ಕೆಲವು ಚಿತ್ರಕಥೆ-ಸಂಭಾಷಣೆಗಳನ್ನೂ ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us