Siddharth: ಸೈನಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಿದ್ಧಾರ್ಥ್​ಗೆ ಸಂಕಷ್ಟ; ಪ್ರಕರಣ ದಾಖಲಿಸಿದ ಹೈದರಾಬಾದ್ ಪೊಲೀಸರು

| Updated By: shivaprasad.hs

Updated on: Jan 12, 2022 | 9:43 PM

Saina Nehwal: ನಟ ಸಿದ್ಧಾರ್ಥ್ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕುರಿತು ಕೀಳು ಮಟ್ಟದ ಟ್ವೀಟ್ ಮಾಡಿದ ಪ್ರಕರಣ ಅವರು ಕ್ಷಮೆ ಕೇಳಿದ ನಂತರ ತಣ್ಣಗಾಗಿತ್ತು. ಇದೀಗ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಸಿದ್ಧಾರ್ಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Siddharth: ಸೈನಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸಿದ್ಧಾರ್ಥ್​ಗೆ ಸಂಕಷ್ಟ; ಪ್ರಕರಣ ದಾಖಲಿಸಿದ ಹೈದರಾಬಾದ್ ಪೊಲೀಸರು
ಸಿದ್ಧಾರ್ಥ್
Follow us on

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ (Saina Nehwal) ಟ್ವೀಟ್​ಗೆ ಪ್ರತಿಕ್ರಿಯಿಸುವ ಭರದಲ್ಲಿ ಅವಹೇಳನಕಾರಿ ಟ್ವೀಟ್ ಮಾಡಿದ್ದ ಕಾಲಿವುಡ್ ನಟ ಸಿದ್ಧಾರ್ಥ್​ಗೆ (Siddharth) ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಇಂದು ಹೈದರಾಬಾದ್ ಪೊಲೀಸರು ಸಿದ್ಧಾರ್ಥ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಸೈನಾ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.  ಹೈದರಾಬಾದ್​ನಲ್ಲಿ ಮಹಿಳೆಯೋರ್ವರು ಸಿದ್ಧಾರ್ಥ್ ಹೇಳಿಕೆಯ ವಿರುದ್ಧ ದೂರು ನೀಡಿದ್ದರು. ಮಹಿಳೆಯರ ಗೌರವಕ್ಕೆ ಹಾನಿ ಮಾಡುವ ಉದ್ದೇಶದಿಂದ ಹೀಗೆ ಹೇಳಿದ್ದಾರೆ ಎಂಬ ಹಿನ್ನೆಲೆಯಲ್ಲಿ ಇದೀಗ ಸಿದ್ಧಾರ್ಥ್ ವಿರುದ್ಧ ಐಪಿಸಿ ಸೆಕ್ಷನ್ 509ರ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಐಟಿ ಆಕ್ಟ್​ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಹೇಳಿಕೆಗೆ ಕ್ಷಮೆ ಕೋರಿದ್ದ ಸಿದ್ಧಾರ್ಥ್:
ಸೈನಾ ಪಂಜಾಬ್​ನಲ್ಲಿ ನಬಡೆದಿದ್ದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪ ಪ್ರಕರಣದ ಕುರಿತಂತೆ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಅದನ್ನು ಟೀಕಿಸುವ ಭರದಲ್ಲಿ ಸಿದ್ಧಾರ್ಥ್ ಆಕ್ಷೇಪಾರ್ಹ ಪದ ಬಳಸಿದ್ದರು. ತಮ್ಮ ಟ್ವೀಟ್ ವಿವಾದಕ್ಕೆ ಕಾರಣವಾಗಿದ್ದರ ಕುರಿತು ನಂತರ ಸಿದ್ಧಾರ್ಥ್ ಕ್ಷಮೆ ಕೋರಿದ್ದರು. ‘ಡಿಯರ್​ ಸೈನಾ.. ಕೆಲವೇ ದಿನಗಳ ಹಿಂದೆ ನಿಮ್ಮ ಟ್ವೀಟ್​ಗೆ ಪ್ರತಿಯಾಗಿ ನಾನು ಕೆಟ್ಟ ಜೋಕ್​ ಮಾಡಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಮತ್ತು ಸಿಟ್ಟು ಕೂಡ ನಾನು ಬಳಸಿದ ಪದಗಳು ಹಾಗೂ ಧಾಟಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್​ ಅನ್ನು ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದಾದರೆ ಅದು ಒಳ್ಳೆಯ ಜೋಕ್​ ಅಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಸಿದ್ದಾರ್ಥ್ ತಮ್ಮ ಪತ್ರದಲ್ಲಿ ತಿಳಿಸಿದ್ದರು. ಅಲ್ಲದೇ ತಾವೂ ಸ್ತ್ರೀವಾದಿ ಎಂದಿದ್ದ ಸಿದ್ಧಾರ್ಥ್, ಮಹಿಳೆಯರಿಗೆ ಅವಾಚ್ಯವಾಗಿ ಏನನ್ನೂ ಹೇಳುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಸಿದ್ಧಾರ್ಥ್ ಕ್ಷಮೆಗೆ ಪ್ರತಿಕ್ರಿಯಿಸಿದ್ದ ಸೈನಾ:
‘ಇದು ಮಹಿಳೆಯರ ಘನತೆಗೆ ಸಂಬಂಧಿಸಿದ ವಿಚಾರ. ಓರ್ವ ಮಹಿಳೆಯನ್ನು ಅವರು ಈ ರೀತಿ ಟಾರ್ಗೆಟ್​​ ಮಾಡಬಾರದು. ಆದರೆ ಇಂಥ ವಿಚಾರಗಳಿಂದ ನಾನು ವಿಚಲಿತ ಆಗಿಲ್ಲ. ನನ್ನ ಕ್ಷೇತ್ರದಲ್ಲಿ ನಾನು ಖುಷಿಯಾಗಿದ್ದೇನೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಸೈನಾ ನೆಹ್ವಾಲ್​ ಸಿದ್ಧಾರ್ಥ್ ಕ್ಷಮೆಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ:

‘ಸಿದ್ದಾರ್ಥ್​ಗೆ ದೇವರು ಒಳ್ಳೆಯದು ಮಾಡಲಿ’; ಕ್ಷಮೆ ಬಳಿಕ ಪ್ರತಿಕ್ರಿಯಿಸಿದ ಸೈನಾ ನೆಹ್ವಾಲ್​​

Saina Nehwal: ‘ನನ್ನ ಮಗಳು ದೇಶಕ್ಕಾಗಿ ಪದಕ ಗೆದ್ದಿದ್ದಾಳೆ; ನೀವೇನು ಮಾಡಿದ್ದೀರಿ?’ ನಟ ಸಿದ್ಧಾರ್ಥ್​ಗೆ ಸೈನಾ ತಂದೆಯ ನೇರ ಪ್ರಶ್ನೆ