
‘3 ಇಡಿಯಟ್ಸ್’ (3 Idiots) ಭಾರತದ ಅತ್ಯುತ್ತಮ ಕಮರ್ಶಿಯಲ್ ಸಿನಿಮಾಗಳಲ್ಲಿ ಒಂದು. ಗುಣಮಟ್ಟದ ಹಾಸ್ಯದ ಜೊತೆಗೆ ಅದ್ಭುತ ಕತೆ, ಸಂದೇಶವನ್ನು ಹೊಂದಿದ್ದ ಈ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಹಲವು ರಾಷ್ಟ್ರಗಳಲ್ಲಿ ವೀಕ್ಷಿಸಲ್ಪಟ್ಟಿದ್ದು, ಕಲ್ಟ್ ಸಿನಿಮಾ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ, ಕರೀನಾ ಕಪೂರ್, ಬೊಮನ್ ಇರಾನಿ ನಟಿಸಿದ್ದ ಈ ಸಿನಿಮಾ 2009 ರಲ್ಲಿ ಬಿಡುಗಡೆ ಆಗಿತ್ತು. ಇದೀಗ 17 ವರ್ಷಗಳ ಬಳಿಕ ಸಿನಿಮಾದ ಎರಡನೇ ಭಾಗ ಬರಲಿದೆ.
‘3 ಇಡಿಯಟ್ಸ್’ ಸಿನಿಮಾದ ಸೀಕ್ವೆಲ್ ಅನ್ನು ಸ್ವತಃ ರಾಜ್ಕುಮಾರ್ ಹಿರಾನಿ ಅವರೇ ನಿರ್ದೇಶನ ಮಾಡಲಿದ್ದಾರಂತೆ. ರಾಜ್ಕುಮಾರ್ ಹಿರಾನಿ ಮತ್ತು ಆಮಿರ್ ಖಾನ್ ಅವರು ದಾದಾಸಾಹೇಬ್ ಫಾಲ್ಕೆಯ ಜೀವನ ಆಧರಿಸಿದ ಸಿನಿಮಾ ಮಾಡುವುದಾಗಿ ಸುದ್ದಿ ಹರಿದಾಡಿತ್ತು. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಶುರುವಾಗಿತ್ತು. ಆದರೆ ಇಬ್ಬರೂ ಸಹ ಸಿನಿಮಾದ ಚಿತ್ರಕತೆ ಕುರಿತಾಗಿ ಒಮ್ಮತಕ್ಕೆ ಬಾರದ ಕಾರಣ ಸಿನಿಮಾವನ್ನು ನಿಲ್ಲಿಸಲಾಗಿದೆಯಂತೆ.
‘3 ಇಡಿಯಟ್ಸ್’ ಸಿನಿಮಾದ ಸೀಕ್ವೆಲ್ ಅನ್ನು ಹಿರಾನಿ ಅವರು ಕೆಲ ವರ್ಷಗಳ ಹಿಂದೆಯೇ ಬರೆದುಕೊಂಡಿದ್ದು, ಆ ಕುರಿತು ಆಮಿರ್ ಖಾನ್ ಮತ್ತು ಹಿರಾನಿ ಇಬ್ಬರೂ ಚರ್ಚಿಸಿ ಅಂತಿಮಗೊಳಿಸಿದ್ದು, ಸಿನಿಮಾ ಶೀಘ್ರವೇ ಪ್ರಾರಂಭವಾಗಲಿದೆ ಎನ್ನಲಾಗುತ್ತಿದೆ. ‘3 ಇಡಿಯಟ್ಸ್’ ಸಿನಿಮಾ ನಡೆದ ಕಾಲಘಟ್ಟದಿಂದ 15 ವರ್ಷದ ಬಳಿಕ ಕತೆ ಶುರುವಾಗಲಿದೆಯಂತೆ. ಈಗ ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ ಮತ್ತು ಕರೀನಾ ಕಪೂರ್ ಅವರ ಪಾತ್ರಗಳು ಹೇಗಿರಲಿವೆ ಎಂಬುದು ಸಿನಿಮಾನಲ್ಲಿ ತೋರಿಸಲಾಗುತ್ತದೆ.
ಇದನ್ನೂ ಓದಿ:‘ಕೂಲಿ’ಯಲ್ಲಿ ಆಮಿರ್ ಖಾನ್, ‘ಜೈಲರ್ 2’ನಲ್ಲಿ ಶಾರುಖ್ ಖಾನ್?
‘3 ಇಡಿಯಟ್ಸ್’ ಸಿನಿಮಾನಲ್ಲಿ ಬೊಮನ್ ಇರಾನಿಯ ವೈರಸ್, ಜಾವೇದ್ ಜೆಫ್ರಿ, ಚತುರ್, ಮಿಲಿಮೀಟರ್ ಇನ್ನೂ ಕೆಲವು ಅದ್ಭುತ ಪಾತ್ರಗಳು ಇದ್ದವು ಆ ಪಾತ್ರಗಳೂ ಸಹ ‘3 ಇಡಿಯಟ್ಸ್’ ಸೀಕ್ವೆಲ್ ನಲ್ಲಿ ಇರಲಿವೆಯೇ ಎಂಬುದು ಕುತೂಹಲ ಕೆರಳಿಸಿದೆ. ‘3 ಇಡಿಯಟ್ಸ್’ ಸಿನಿಮಾ ಶಿಕ್ಷಣ ಪದ್ಧತಿಯ ಕತೆಯನ್ನು ಒಳಗೊಂಡಿತ್ತು, ಈಗ ‘3 ಇಡಿಯಟ್ಸ್’ ಸೀಕ್ವೆಲ್ ಬೇರೊಂದು ಮಹತ್ವದ ವಿಷಯದ ಕತೆಯನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.
ಆಮಿರ್ ಖಾನ್ ಪ್ರಸ್ತುತ ಯಾವುದೇ ಸಿನಿಮಾನಲ್ಲಿ ನಟಿಸುತ್ತಿಲ್ಲ. ಆದರೆ ಅವರ ಕೈಯಲ್ಲಿ ಕೆಲವು ಸಿನಿಮಾಗಳಿವೆ. ಲೋಕೇಶ್ ಕನಗರಾಜ್ ನಿರ್ದೇಶಿಸಲಿರುವ ಸೂಪರ್ ಹೀರೋ ಸಿನಿಮಾನಲ್ಲಿ ಆಮಿರ್ ಖಾನ್ ನಟಿಸುವವರಿದ್ದಾರೆ. ಅದರ ಹೊರತಾಗಿ ಮತ್ತೊಂದು ಐತಿಹಾಸಿಕ ಸಿನಿಮಾನಲ್ಲಿಯೂ ಆಮಿರ್ ಖಾನ್ ನಟಿಸುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ