
ಧನುಷ್ (Actor Dhanush) ಈಗಾಗಲೇ ತಮಿಳು, ಇಂಗ್ಲಿಷ್, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ‘ಅತ್ರಂಗಿ ರೇ’ ಸಿನಿಮಾ ಮೂಲಕ ಅವರು ಮತ್ತೆ ಬಾಲಿವುಡ್ಗೆ ಮರಳುತ್ತಿದ್ದಾರೆ. ಇದಲ್ಲದೆ, ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಈಗ ಧನುಷ್ ತೆಲುಗು ಚಿತ್ರರಂಗಕ್ಕೆ ಕಾಲಿಡೋಕೆ ರೆಡಿ ಆಗಿದ್ದಾರೆ. ಈ ಚಿತ್ರದ ಟೈಟಲ್ ಇಂದು ಘೋಷಣೆ ಆಗಿದೆ. ಈ ಮೂಲಕ ಅವರ ಮುಂದಿನ ಚಿತ್ರ ಯಾವುದು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ತಮಿಳಿನಲ್ಲಿ ‘ವಾತಿ’ ಹಾಗೂ ತೆಲುಗಿನಲ್ಲಿ ‘ಸರ್’ ಎಂದು ಹೆಸರಿಡಲಾಗಿದೆ. ಪೋಸ್ಟರ್ಗಳನ್ನು ಹಂಚಿಕೊಳ್ಳುವ ಮೂಲಕ ಧನುಷ್ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಕಡೆಯಿಂದ ಶುಭಾಶಯಗಳು ಬಂದಿವೆ.
ಸಿತಾರಾ ಎಂಟರ್ಟೇನ್ಮೆಂಟ್ನ ಸೂರ್ಯದೇವ ನಾಗ ವಂಶಿ ಹಾಗೂ ಫಾರ್ಚೂನ್ ಫೋರ್ ಸಿನೇಮಾಸ್ನ ಸಾಯಿ ಸೌಜನ್ಯ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ರಂಗ್ ದೇ’ ಖ್ಯಾತಿಯ ವೆಂಕಿ ಅಟ್ಲುರಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಸಾಮಾನ್ಯ ವ್ಯಕ್ತಿಯ ಮಹತ್ವಾಕಾಂಕ್ಷೆಯ ಮತ್ತು ಹೃದಯಕ್ಕೆ ಹತ್ತಿರ ಆಗುವಂತಹ ಪ್ರಯಾಣ’ ಎಂದು ನಾಗ ವಂಶಿ ಬರೆದುಕೊಂಡಿದ್ದಾರೆ.
ಜ್ಯೂನಿಯರ್ ಕಾಲೇಜ್ನ ಉಪನ್ಯಾಸಕರಾಗಿ ಧನುಷ್ ಕಾಣಿಸಿಕೊಳ್ಳುತ್ತಿದ್ದಾರೆ. ಸಂಯುಕ್ತಾ ಮೆನನ್ ಅವರು ಈ ಸಿನಿಮಾದಲ್ಲಿ ಧನುಷ್ಗೆ ಜತೆಯಾಗಿ ಕಾಣಸಿಕೊಳ್ಳುತ್ತಿದ್ದಾರೆ. ಸಾಯಿ ಕುಮಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ದಿನೇಶ್ ಕೃಷ್ಣನ್ ಛಾಯಾಗ್ರಾಹಣ ಚಿತ್ರಕ್ಕಿದೆ. ಜನವರಿಯಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.
ಧನುಷ್ ‘ಅತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ನಲ್ಲಿ ಧನುಷ್ ಪರ್ಫಾರ್ಮೆನ್ಸ್ ನೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಆನಂದ್ ಎಲ್. ರಾಯ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕ್ರಿಸ್ಮಸ್ ಪ್ರಯುಕ್ತ ಈ ಚಿತ್ರ ಡಿಸೆಂಬರ್ 24ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಬ್ಯುಸಿ ಆಗಿದೆ.
ಇದನ್ನೂ ಓದಿ: ಒಟಿಟಿಯಲ್ಲೂ ಸ್ಟಾರ್ ವಾರ್; ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಚಿತ್ರಗಳ ಮುಖಾಮುಖಿ