ಬೈಕ್​ ಮಾರಾಟ ಮಾಡಿ ಬಡವರಿಗಾಗಿ ಆಕ್ಸಿಜನ್​ ಖರೀದಿಸುತ್ತಿರುವ ನಟ ಹರ್ಷವರ್ಧನ್​ ರಾಣೆ

|

Updated on: May 03, 2021 | 10:22 AM

ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಹರ್ಷವರ್ಧನ್​ ರಾಣೆ ಅವರು ಈಗ ಬಡವರಿಗಾಗಿ ಆಕ್ಸಿಜನ್​ ಸಿಲಿಂಡರ್​ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮ ನೆಚ್ಚಿನ ಬೈಕ್​ ಮಾರಾಟ ಮಾಡುತ್ತಿದ್ದಾರೆ.

ಬೈಕ್​ ಮಾರಾಟ ಮಾಡಿ ಬಡವರಿಗಾಗಿ ಆಕ್ಸಿಜನ್​ ಖರೀದಿಸುತ್ತಿರುವ ನಟ ಹರ್ಷವರ್ಧನ್​ ರಾಣೆ
ಹರ್ಷವರ್ಧನ್ ರಾಣೆ
Follow us on

ಕೊರೊನಾ ವೈರಸ್​ ಎರಡನೇ ಅಲೆಗೆ ಜನರು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ವಾತಾವರಣ ಬಿಗಿಯಾಗುತ್ತಿದೆ. ಸೂಕ್ತ ಸಮಯಕ್ಕೆ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಅದರಲ್ಲೂ ಆಕ್ಸಿಜನ್​ ಮತ್ತು ವೆಂಟಿಲೇಟರ್​ಗಾಗಿ ಸೋಂಕಿತರು ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್​ ಕೂಡ ಸಿಗದವರ ಕಷ್ಟ ಹೇಳತೀರದು. ಇಂಥ ಸಮಯದಲ್ಲಿ ಕೆಲವು ಸೆಲೆಬ್ರಿಟಿಗಳು ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಅಂಥವರ ಸಾಲಿನಲ್ಲಿ ನಟ ಹರ್ಷವರ್ಧನ್​ ರಾಣೆ ಕೂಡ ಸೇರಿಕೊಂಡಿದ್ದಾರೆ.

ದೊಡ್ಡದಿರಲಿ ಚಿಕ್ಕದಿರಲಿ, ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಮಾಡುವ ಸಹಾಯ ಕೂಡ ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ಸೆಲೆಬ್ರಿಟಿಗಳು ಮಾದರಿ ಆಗಬೇಕು. ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಹರ್ಷವರ್ಧನ್​ ರಾಣೆ ಅವರು ಈಗ ಬಡವರಿಗಾಗಿ ಆಕ್ಸಿಜನ್​ ಸಿಲಿಂಡರ್​ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ತಮ್ಮ ನೆಚ್ಚಿನ ಬೈಕ್​ ಮಾರಾಟ ಮಾಡುತ್ತಿದ್ದಾರೆ.

ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ನನ್ನ ಮೋಟರ್​ ಸೈಕಲ್​ ಮಾರುತ್ತಿದ್ದೇನೆ. ಅದರಿಂದ ಬಂದ ಹಣದಲ್ಲಿ ಆಕ್ಸಿಜನ್​ ಖರೀದಿಸಿ ತುಂಬ ಅವಶ್ಯಕತೆ ಇರುವವರಿಗೆ ನೀಡುತ್ತೇನೆ. ಹೈದರಾಬಾದ್​ನಲ್ಲಿ ಉತ್ತಮ ಆಕ್ಸಿಜನ್​ ಸಾಂದ್ರಕಗಳನ್ನು ಖರೀದಿಸಲು ನನಗೆ ಸಹಾಯ ಮಾಡಿ’ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ರಾಯಲ್​ ಎನ್​ಫೀಲ್ಡ್​ ಬೈಕ್​ ಫೋಟೋವನ್ನು ಅವರು ಇದರ ಜೊತೆ ಹಂಚಿಕೊಂಡಿದ್ದಾರೆ.

ಹರ್ಷವರ್ಧನ್​ ರಾಣೆ ಮಾತ್ರವಲ್ಲದೆ, ಇನ್ನೂ ಅನೇಕ ಸೆಲೆಬ್ರಿಟಿಗಳು ಇಂಥ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ನಟ ಸುನೀಲ್​ ಶೆಟ್ಟಿ ಅವರು ಬೆಂಗಳೂರು ಮತ್ತು ಮುಂಬೈನಲ್ಲಿರುವ ಕೊವಿಡ್​ ಸೋಂಕಿತರಿಗೆ ಆಕ್ಸಿಜನ್​ ದೊರಕಿಸಲು ಪ್ರಯತ್ನಿಸುತ್ತಿದ್ದಾರೆ. ದೆಹಲಿಯ ಆಸ್ಪತ್ರೆಯೊಂದಕ್ಕೆ ಆಕ್ಸಿಜನ್​ ಸಿಲಿಂಡರ್​ ಕಳಿಸಿಕೊಡಲು ನಟಿ ಸುಷ್ಮಿತಾ ಸೇನ್​ ಕಷ್ಟಪಟ್ಟಿದ್ದರು. ನಟ ಜಗ್ಗೇಶ್​ ಕೂಡ ಬೆಂಗಳೂರಿನಲ್ಲಿರುವ ಸೋಂಕಿತರಿಗೆ ಆಕ್ಸಿಜನ್​ ವ್ಯವಸ್ಥೆ ಮಾಡಿದ್ದಾರೆ.

ಇನ್ನು, ಕನ್ನಡದ ನಟ ಅರ್ಜುನ್​ ಗೌಡ ಅವರು ಈ ಕಷ್ಟದ ಸಂದರ್ಭದಲ್ಲಿ ಆ್ಯಂಬುಲೆನ್ಸ್​ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿ ಜನರು ಅನುಭವಿಸುತ್ತಿರುವ ಯಾತನೆಯನ್ನು ನೋಡಲಾಗದೇ ಅವರು ಈ ಸೇವೆ ಮಾಡುತ್ತಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್​ ಪೊನ್ನಣ್ಣ ಕೂಡ ಹೆಲ್ಪ್​ಲೈನ್​ ಆರಂಭಿಸಿ, ಆ ಮೂಲಕ ಬಡವರ ಸಹಾಯಕ್ಕೆ ನಿಂತಿದ್ದಾರೆ. ಈ ಎಲ್ಲ ಸೆಲೆಬ್ರಿಟಿಗಳು ಜನರಿಗೆ ಮಾದರಿ ಆಗಿದ್ದಾರೆ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ