ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ, 9 ಕೋಟಿ ಹಣಕ್ಕೆ ಬೇಡಿಕೆ

Actor Ravi Mohan: ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ರವಿ ಮೋಹನ್ ಇತ್ತೀಚೆಗೆ ತಮ್ಮ ಖಾಸಗಿ ಬದುಕು, ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿ ಆಗುತ್ತಿದ್ದಾರೆ. ಪತ್ನಿಯೊಂದಿಗಿನ ಜಗಳದಿಂದ ಸುದ್ದಿಯಾಗಿದ್ದ ರವಿ ಮೋಹನ್ ಇದೀಗ, ನಿರ್ಮಾಣ ಸಂಸ್ಥೆಯೊಂದರ ವಿರುದ್ಧ ದೂರು ನೀಡಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ. 9 ಕೋಟಿ ರೂಪಾಯಿ ಹಣ ಪರಿಹಾರವಾಗಿ ನೀಡಬೇಕು ಎಂದಿದ್ದಾರೆ. ಏನಿದು ಕೇಸು?

ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ, 9 ಕೋಟಿ ಹಣಕ್ಕೆ ಬೇಡಿಕೆ
Ravi Mohan

Updated on: Jul 18, 2025 | 5:10 PM

ತಮಿಳಿನ ಸ್ಟಾರ್ ನಟ ಜಯಂ ರವಿ (Jayam Ravi) ಇತ್ತೀಚೆಗೆ ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿ ಆಗುತ್ತಿದ್ದಾರೆ. ‘ಜಯಂ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಜಯಂ ರವಿ, 2000 ದಶಕದ ತೆಲುಗು, ಕನ್ನಡದ ಹಿಟ್ ಸಿನಿಮಾಗಳನ್ನು ರೀಮೇಕ್ ಮಾಡಿ-ಮಾಡಿ ಯಶಸ್ವಿ ನಾಯಕ ಎನಿಸಿಕೊಂಡರು. ಆ ನಂತರವೂ ಹಲವು ಹಿಟ್ ಸಿನಿಮಾಗಳನ್ನು ನೀಡಿ ಈಗ ತಮಿಳಿನ ಸ್ಟಾರ್ ನಟರುಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಜಯಂ ರವಿ ಅವರು ತಮ್ಮ ಖಾಸಗಿ ಬದುಕಿನಿಂದಾಗಿ ಸುದ್ದಿಯಲ್ಲಿದ್ದರು. ಇದೀಗ ರವಿ ಅವರು ನಿರ್ಮಾಪಕರುಗಳ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.

ರವಿ ಮೋಹನ್ ಅಲಿಯಾಸ್ ಜಯಂ ರವಿ ಅವರು ಸಿನಿಮಾ ನಿರ್ಮಾಣ ಸಂಸ್ಥೆ ವಿರುದ್ಧ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಎರಡೂ ಸಿನಿಮಾ ನಿರ್ಮಾಣ ಸಂಸ್ಥೆಗಳು ತಮಗೆ 9 ಕೋಟಿ ರೂಪಾಯಿ ಹಣವನ್ನು ಪರಿಹಾರ ಮೊತ್ತವನ್ನಾಗಿ ನೀಡಬೇಕು ಎಂದು ರವಿ ಮೋಹನ್ ಅವರು ನ್ಯಾಯಾಲಯದಲ್ಲಿ ಹಾಕಿರುವ ಅರ್ಜಿಯಲ್ಲಿ ಕೋರಿದ್ದಾರೆ.

ನಟ ರವಿ ಮೋಹನ್ ಅವರು ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ನಿರ್ಮಾಣ ಸಂಸ್ಥೆಗೆ ಬರೋಬ್ಬರಿ 80 ದಿನಗಳ ಕಾಲ್ ಶೀಟ್ ಅನ್ನು ನೀಡಿದ್ದರಂತೆ. ಆದರೆ ಆ ನಿರ್ಮಾಣ ಸಂಸ್ಥೆ ಒಪ್ಪಂದದ ಪ್ರಕಾರ ಸಿನಿಮಾ ನಿರ್ಮಾಣ ಪ್ರಾರಂಭವನ್ನೇ ಮಾಡಲಿಲ್ಲವಂತೆ. ರವಿ ಮೋಹನ್ 80 ದಿನಗಳ ಕಾಲ್ ಶೀಟ್ ಅದಾಗಲೇ ಕೊಟ್ಟಿದ್ದ ಕಾರಣ ಬೇರೆ ಸಿನಿಮಾಗಳಲ್ಲಿ ಸಹ ರವಿ ಮೋಹನ್​ಗೆ ನಟಿಸಲು ಸಾಧ್ಯವಾಗಲಿಲ್ಲ. ಇದೇ ವರ್ಷದ ಜನವರಿ ತಿಂಗಳಲ್ಲಿ ರವಿ ಅವರು ನಿರ್ಮಾಣ ಸಂಸ್ಥೆಗೆ 80 ದಿನದ ಡೇಟ್ಸ್ ನೀಡಿದ್ದರಂತೆ. ಆ ಸಮಯದಲ್ಲಿ ಇನ್ನೂ ಎರಡು ಸಿನಿಮಾಗಳು ಅವರಿಗೆ ಆಫರ್ ಆಗಿದ್ದವು ಆದರೆ ಡೇಟ್ಸ್ ಕೊಟ್ಟುಬಿಟ್ಟಿದ್ದರ ಕಾರಣಕ್ಕೆ ಸಿನಿಮಾನಲ್ಲಿ ನಟಿಸಲಿಲ್ಲವಂತೆ ರವಿ ಮೋಹನ್.

ಇದನ್ನೂ ಓದಿ:ಮಾಜಿ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಜಯಂ ರವಿ

ನಿರ್ಮಾಣ ಸಂಸ್ಥೆಯು ಸುಳ್ಳು ಭರವಸೆ ನೀಡಿ, ಸಿನಿಮಾ ಮಾಡುವುದಾಗಿ ಮೋಸ ಮಾಡಿದೆ. ಇದರಿಂದ ತಮ್ಮ ಅಮೂಲ್ಯ 80 ದಿನಗಳು ಹಾಳಾಗಿದ್ದು, ಇದರಿಂದ ತಮಗೆ ಕೋಟ್ಯಂತರ ರೂಪಾಯಿ ಹಣ ನಷ್ಟ ಉಂಟಾಗಿದೆ ಎಂದು ಆರೋಪಿಸಿ, ಇದಕ್ಕೆ ಪರಿಹಾರವಾಗಿ 9 ಕೋಟಿ ರೂಪಾಯಿ ಮೊತ್ತವನ್ನು ತಮಗೆ ಕೊಡಿಸಿಕೊಡಬೇಕು ಎಂದು ರವಿ ಮೋಹನ್ ಮದ್ರಾಸ್ ಹೈಕೋರ್ಟ್​​ನಲ್ಲಿ ಅರ್ಜಿ ಹಾಕಿದ್ದಾರೆ.

ಡೇಟ್ಸ್ ನೀಡಿದ್ದ ಸಮಯದಲ್ಲಿ ರವಿ ಮೋಹನ್ ಅವರು ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಿಗೆ ಕರೆ ಮಾಡಿ ತಾವು ಅಡ್ವಾನ್ಸ್ ಹಣ ಮರಳಿಸುವುದಾಗಿ ಹೇಳಿದ್ದರಂತೆ. ಆದರೆ ಅವರು ಒಪ್ಪದೆ ಸಿನಿಮಾ ಮಾಡುವುದಾಗಿ ಹೇಳಿದ್ದರಂತೆ. ಇತ್ತೀಚೆಗೆ ರವಿ ಮೋಹನ್ ತಮಿಳಿನ ‘ಪರಾಶಕ್ತಿ’ ಸಿನಿಮಾನಲ್ಲಿ ನಟಿಸಲು ಸಹಿ ಮಾಡಿದ್ದಾರೆ. ಆದರೆ ಇದನ್ನು ಅಕ್ರಮ ಎಂದು ಕರೆದಿರುವ ಬಾಂಬೆ ಟಚ್ ಗೋಲ್ಡ್ ಯೂನಿವರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರವಿ ಮೋಹನ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತು. ಅದರ ಬೆನ್ನಲ್ಲೆ ಇದೀಗ ರವಿ ಮೋಹನ್, ನಿರ್ಮಾಣ ಸಂಸ್ಥೆಯ ವಿರುದ್ಧ ಕೋರ್ಟ್​ಗೆ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Fri, 18 July 25