ಚಿತ್ರರಂಗಕ್ಕೆ ಕಾಲಿಟ್ಟ ಸೂರ್ಯ-ಜ್ಯೋತಿಕ ಪುತ್ರಿ, ಮೊದಲ ಪ್ರಯತ್ನದಲ್ಲೇ ಯಶಸ್ಸು

ನಟ ಸೂರ್ಯ ಮತ್ತು ನಟಿ ಜ್ಯೋತಿಕಾ ದಂಪತಿಗಳ ಪುತ್ರಿ ದಿವ್ಯಾ ಸೂರ್ಯ ಸಹ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ ತೆರೆ ಮುಂದೆ ಅಲ್ಲ ತೆರೆ ಹಿಂದೆ. ದಿವ್ಯಾ ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದು, ಅವರ ಮೊದಲ ಡಾಕ್ಯುಮೆಂಟರಿಗೆ ಪ್ರಶಸ್ತಿ ಬಂದಿದೆ.

ಚಿತ್ರರಂಗಕ್ಕೆ ಕಾಲಿಟ್ಟ ಸೂರ್ಯ-ಜ್ಯೋತಿಕ ಪುತ್ರಿ, ಮೊದಲ ಪ್ರಯತ್ನದಲ್ಲೇ ಯಶಸ್ಸು

Updated on: Oct 04, 2024 | 1:08 PM

ನಟರ ಮಕ್ಕಳು ನಟರಾಗುವುದು ಸಾಮಾನ್ಯ. ಆದರೆ ತಮಿಳಿನ ಸ್ಟಾರ್ ದಂಪತಿಗಳಾದ ಸೂರ್ಯ ಹಾಗೂ ಜ್ಯೋತಿಕಾರ ಪುತ್ರಿ ದಿವ್ಯಾ ಸೂರ್ಯ ಭಿನ್ನ ಹಾದಿ ಹಿಡಿದಿದ್ದಾರೆ. ಚಿತ್ರರಂಗದ ಬಗ್ಗೆ ಒಲವಿರುವ ದಿವ್ಯಾ ಸೂರ್ಯ, ನಟಿಯಾಗುವ ಬದಲಿಗೆ ನಿರ್ದೇಶನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ದಿವ್ಯಾ ಕ್ಯಾಮೆರಾ ಹಿಂದೆ ಕೆಲಸ ಮಾಡಿದ ಮೊದಲ ಕಿರುಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ದೊರೆತಿದ್ದು, ಈ ಖುಷಿಯ ವಿಷಯವನ್ನು ನಟ ಸೂರ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೂರ್ಯ ಹಾಗೂ ಜ್ಯೋತಿಕಾ ದೊಡ್ಡ ಸ್ಟಾರ್ ನಟ-ನಟಿ ಆಗಿರುವ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಪ್ಪ-ಅಮ್ಮನಿಂದ ಈ ಕಳಕಳಿಯನ್ನು ಬಳುವಳಿಯಾಗಿ ಪಡೆದಂತಿರುವ ದಿವ್ಯಾ ಸೂರ್ಯ, ತಮ್ಮ ಮೊದಲ ಕಿರುಚಿತ್ರ ಅಥವಾ ಡಾಕ್ಯುಮೆಂಟರಿಗೆ ಇಂಥಹುದೇ ಒಂದು ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಸಾಕಷ್ಟು ಮಹಿಳೆಯರು ಕೆಲಸ ಮಾಡುತ್ತಾರೆ ಆದರೆ ಬಹುತೇಕರು ಕ್ಯಾಮೆರಾ ಮುಂದೆ ಕೆಲಸ ಮಾಡುತ್ತಾರೆ ಅಥವಾ ನಿರ್ದೇಶಕಿ ಆಗಿರುತ್ತಾರೆ ಆದರೆ ಇತರೆ ಟೆಕ್ನಿಕಲ್ ವಿಭಾಗಗಳಲ್ಲಿ ವಿಶೇಷವಾಗಿ ಲೈಟಿಂಗ್, ಸಿನಿಮಾಟೊಗ್ರಫಿ ಇನ್ನಿತರೆ ಮಹತ್ತರವಾದ ವಿಭಾಗದಲ್ಲಿ ಆನ್​ಫೀಲ್ಡ್​ಗೆ ಹೋಗಿ ಕೆಲಸ ಮಾಡುವ ಮಹಿಳೆಯರ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದಾರೆ ದಿವ್ಯಾ.

ಇದನ್ನೂ ಓದಿ: ಇಬ್ಬರು ಸೂಪರ್ ಸ್ಟಾರ್ ನಟರ ಸಿನಿಮಾದ ಭಾಗವಾಗುವ ಅವಕಾಶ ಕೈಬಿಟ್ಟ ನಾನಿ

ಲೈಟಿಂಗ್ ವಿಭಾಗದಲ್ಲಿ ದಶಕಕ್ಕೂ ಹೆಚ್ಚು ಸಮಯದಿಂದಲೂ ಕೆಲಸ ಮಾಡುತ್ತಿರುವ ಪ್ರತಿಭಾವಂತ ತಂತ್ರಜ್ಞೆ ಹೆತಾಲ್ ದೆದಿಯಾ, ಪ್ರಿಯಾಂಕಾ ಸಿಂಗ್, ಸಿನಿಮಾಟೊಗ್ರಫಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಲೀನಾ ಗಂಗುರ್ಡೆ ಇನ್ನಿತರರನ್ನು ಸಂದರ್ಶನ ಮಾಡಿದ್ದಾರೆ ದಿವ್ಯಾ. ಇದು ಕೇವಲ ಸಂದರ್ಶನ ವಿಡಿಯೋ ಅಲ್ಲ ಬದಲಿಗೆ ಡಾಕ್ಯುಮೆಂಟರಿ ಚಿತ್ರೀಕರಣ ಮಾಡಿದ್ದಾರೆ. ಪುರುಷ ಪ್ರಾತಿನಿಧ್ಯ ಅತಿ ಹೆಚ್ಚಾಗಿರುವ ಕ್ಷೇತ್ರದಲ್ಲಿ ಕೆಲಸ ಮಾಡಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಮಹಿಳೆಯರನ್ನು ಪರಿಚಯ ಮಾಡಿಸುವ ಅವರಿಗೆ ಎದುರಾದ ಸಮಸ್ಯೆಗಳು, ಅವುಗಳನ್ನು ಎದುರಿಸಿದ ರೀತಿ ಇನ್ನಿತರೆ ವಿಷಯಗಳನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಈ ಡಾಕ್ಯುಮೆಂಟರಿಗೆ ‘ಲೀಡಿಂಗ್ ಲೈಟ್’ ಎಂದು ಹೆಸರಿಟ್ಟಿದ್ದಾರೆ ದಿವ್ಯಾ.

ದಿವ್ಯಾ ಸೂರ್ಯ ಅವರ ‘ಲೀಡಿಂಗ್ ಲೈಟ್’ ಡಾಕ್ಯುಮೆಂಟರಿಗೆ ‘ಅತ್ಯುತ್ತಮ ವಿದ್ಯಾರ್ಥಿ ಡಾಕ್ಯುಮೆಂಟರಿ’ ಪ್ರಶಸ್ತಿ ಲಭಿಸಿದೆ. ಮಗಳಿಗೆ ಪ್ರಶಸ್ತಿ ಬಂದ ಖುಷಿಯನ್ನು ಹಂಚಿಕೊಂಡಿರುವ ನಟ ಸೂರ್ಯ, ‘ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಕ್ಕಾಗಿ ನಾನು ನಿಮ್ಮ ಬಗ್ಗೆ ಬಹಳ ಹೆಮ್ಮೆಪಡುತ್ತೇನೆ. ತೆರೆಮರೆಯಲ್ಲಿರುವ ಅದ್ಭುತ ಮಹಿಳೆಯರಿಗೆ ನೀವು ಧ್ವನಿ ನೀಡಿರುವ ಬಗೆ ನೋಡಲು ಸ್ಫೂರ್ತಿದಾಯಕವಾಗಿದೆ. ಇದು ನಿಮ್ಮ ಅದ್ಭುತ ಪ್ರಯಾಣದ ಪ್ರಾರಂಭವಾಗಿದೆ ಎಂದು ನನಗೆ ತಿಳಿದಿದೆ. ನಾನು ನಿನ್ನ ತಂದೆ ಆಗಿರುವ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ನಿನ್ನ ಈ ಉತ್ಸಾಹ ನಿನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂಬುದನ್ನು ನೋಡಲು ನಾನು ಕಾತರಳಾಗಿದ್ದೇನೆ’ ಎಂದಿದ್ದಾರೆ ಸೂರ್ಯ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ