
ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಮೇಲೆ ಎಷ್ಟು ಪ್ರೀತಿ ಇರುತ್ತದೆಯೋ ಸ್ಟಾರ್ಗಳಿಗೂ ಅಷ್ಟೇ ಪ್ರೀತಿ ತಮ್ಮ ಫ್ಯಾನ್ಸ್ ಮೇಲೆ ಇರುತ್ತದೆ. ಇದು ಅನೇಕ ಬಾರಿ ಸಾಬೀತಾಗಿದೆ. ಅನೇಕ ಸ್ಟಾರ್ ನಟ-ನಟಿಯರು ಸಹಾಯ ಕೇಳಿಕೊಂಡು ಬಂದ ಅಭಿಮಾನಿಗಳಿಗೆ ಸಹಾಯ ಹಸ್ತ ಚಾಚಿದ ಉದಾಹರಣೆ ಸಾಕಷ್ಟಿದೆ. ಈಗ ತಮಿಳು ನಟ ಸೂರ್ಯ ಅವರು (Actor Suriya) ಅಪಘಾತದಲ್ಲಿ ಮೃತಪಟ್ಟ ಅಭಿಮಾನಿ ಮನೆಗೆ ತೆರಳಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅಷ್ಟೇ ಅಲ್ಲ ಸಹಾಯದ ಹಸ್ತ ಚಾಚಿದ್ದಾರೆ.
ಜಗದೀಶ್ ಎಂಬುವವರು ಅಪಘಾತದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದರು. ಅವರು ಸೂರ್ಯ ಅವರ ಅಪ್ಪಟ ಅಭಿಮಾನಿ ಆಗಿದ್ದರು. ಜಗದೀಶ್ ನಮಕ್ಕಲ್ನಲ್ಲಿರುವ ಸೂರ್ಯ ಫ್ಯಾನ್ ಕ್ಲಬ್ನ ಕಾರ್ಯದರ್ಶಿ ಆಗಿದ್ದರು. ಸೂರ್ಯ ಅವರು ಜಗದೀಶ್ ಸಾವಿನ ಸುದ್ದಿ ಕೇಳಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಜಗದೀಶ್ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದ್ದಾರೆ. ಜತೆಗೆ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಜಗದೀಶ್ ಅವರ ಪತ್ನಿಗೆ ಕೆಲಸ ಕೊಡಿಸುವುದು ಹಾಗೂ ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ವರದಿ ಆಗಿದೆ.
ಜಗದೀಶ್ ಮನೆಗೆ ಸೂರ್ಯ ಭೇಟಿ ನೀಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್ ಆದ ಪೋಸ್ಟ್ನಲ್ಲಿ ಸೂರ್ಯ ಅವರು ಜಗದೀಶ್ ಫೋಟೋದ ಎದುರು ನಿಂತಿದ್ದಾರೆ. ಈ ವೇಳೆ ಅವರು ಭಾವುಕರಾಗಿರುವುದು ಕಂಡು ಬಂತು. ಸೂರ್ಯ ಅವರ ಭೇಟಿ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ನಟನಿಂದ ಈ ರೀತಿ ಕಾರ್ಯ ಆಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಸೂರ್ಯ ಅವರು ತಮಿಳು ಸಿನಿಮಾ ‘ಇಟಿ’ ಚಿತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ನಿರ್ದೇಶಕ ಬಾಲ ಅವರ ಜತೆಗೆ ಇನ್ನೂ ಹೆಸರಿಡದ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. 2003ರ ನಂತರ ಇಬ್ಬರೂ ಇದೇ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ.
‘ಸೂರರೈ ಪೊಟ್ರು’ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಚಿತ್ರಕ್ಕೆ ಅಕ್ಷಯ್ ಕುಮಾರ್ ಹೀರೋ. ಈ ಚಿತ್ರವನ್ನು ಸೂರ್ಯ ಅವರು ತಮ್ಮ 2ಡಿ ಎಂಟರ್ಟೇನ್ಮೆಂಟ್ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಮೂಲ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕೊವಿಡ್ ಕಾರಣದಿಂದ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಯಿತು. ಇದನ್ನು ಬಾಲಿವುಡ್ ಮಂದಿ ಹೇಗೆ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ‘ವಿಕ್ರಮ್’ ಸಿನಿಮಾದಲ್ಲಿ ಸೂರ್ಯ ಅತಿಥಿ ಪಾತ್ರ ಮಾಡಿದ್ದಾರೆ. ಕಮಲ್ ಹಾಸನ್ ನಟನೆಯ ಈ ಸಿನಿಮಾ ಜೂನ್ 3ರಂದು ತೆರೆಗೆ ಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:43 am, Tue, 31 May 22