ಜೂ.14ರವರೆಗೆ ಹೇಮಾಗೆ ನ್ಯಾಯಾಂಗ ಬಂಧನ; ರೇವ್ ಪಾರ್ಟಿ ಕೇಸ್​ನಲ್ಲಿ ನಟಿ ಜೈಲು ಪಾಲು

| Updated By: ಮದನ್​ ಕುಮಾರ್​

Updated on: Jun 03, 2024 | 9:48 PM

ತೆಲುಗು ಚಿತ್ರರಂಗದ ನಟಿ ಹೇಮಾ ಅವರನ್ನು ಜೂನ್​ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೇವ್​ ಪಾರ್ಟಿ ಕೇಸ್​ನಲ್ಲಿ ಅವರ ಬಂಧನ ಆಗಿದೆ. ಆದರೆ ತಾನು ತಪ್ಪು ಮಾಡಿಲ್ಲ ಎಂದು ನಟಿ ವಾದಿಸುತ್ತಲೇ ಇದ್ದಾರೆ. ಇಂದು (ಜೂ.3) ಜಡ್ಜ್​ ನಿವಾಸದಿಂದ ಪರಪ್ಪನ ಅಗ್ರಹಾರಕ್ಕೆ ತೆರಳುವಾಗಲೂ ಅವರು ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

ಜೂ.14ರವರೆಗೆ ಹೇಮಾಗೆ ನ್ಯಾಯಾಂಗ ಬಂಧನ; ರೇವ್ ಪಾರ್ಟಿ ಕೇಸ್​ನಲ್ಲಿ ನಟಿ ಜೈಲು ಪಾಲು
ಹೇಮಾ
Follow us on

ರೇವ್​ ಪಾರ್ಟಿ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿರುವ ತೆಲುಗು ನಟಿ ಹೇಮಾ (Hema) ಅವರನ್ನು ಇಂದು (ಜೂನ್​ 3) ಸಿಸಿಬಿ ಪೊಲೀಸರು ಬಂಧಿಸಿದ್ದರು. ಆನೇಕಲ್​​ನ 4ನೇ ಹೆಚ್ಚುವರಿ ಸಿವಿಲ್ ಜೆಎಂಎಫ್​ಸಿ ನ್ಯಾಯಾಲಯದ ಜಡ್ಜ್​ ಸಲ್ಮಾ ಎ.ಎಸ್. ಎದುರು ಹೇಮಾರನ್ನು ಹಾಜರುಪಡಿಸಲಾಗಿತ್ತು. ನಟಿಗೆ ಜೂನ್ 14ರ ತನಕ ನ್ಯಾಯಾಂಗ ಬಂಧನ (Judicial Custody) ವಿಧಿಸಲಾಗಿದೆ. ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದು ಎಲೆಕ್ಟ್ರಾನಿಕ್​ ಸಿಟಿಯ ಜೆ.ಆರ್​. ಫಾರ್ಮ್​ಹೌಸ್​ನಲ್ಲಿ ರೇವ್​ ಪಾರ್ಟಿ (Rave Party) ಮಾಡಿದ ಆರೋಪ ಹೇಮಾ ಅವರ ಮೇಲಿದೆ. ಈ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದಾರೆ.

ಹೇಮಾ ಅವರು ಈ ಪ್ರಕರಣದಲ್ಲಿ ಆರಂಭದಿಂದಲೂ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಪಾರ್ಟಿ ನಡೆದ ಸ್ಥಳದಲ್ಲಿ ಹೇಮಾ ಇದ್ದರು ಎಂಬುದನ್ನು ಬೆಂಗಳೂರು ಪೊಲೀಸರು ಖಚಿತ ಪಡಿಸಿದ್ದಾರೆ. ಆದರೆ ತಾನು ಅಲ್ಲಿ ಇರಲೇ ಇಲ್ಲ ಎಂದು ಹೇಮಾ ವಾದಿಸುತ್ತಲೇ ಬರುತ್ತಿದ್ದಾರೆ. ಇಂದು ಕೂಡ ಅವರು ಅದೇ ಮಾತನ್ನು ಹೇಳಿದ್ದಾರೆ. ಮಾಧ್ಯಮಗಳ ಎದುರು ಕೂಗಾಡಿದ್ದಾರೆ.

ಇತ್ತೀಚೆಗೆ ಜೆ.ಆರ್​. ಫಾರ್ಮ್​ಹೌಸ್​ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಹೇಮಾ ಸಿಕ್ಕಿಬಿದ್ದಿದ್ದರು. ಆ ಸುದ್ದಿ ಹೊರಬೀಳುತ್ತಿದ್ದಂತೆಯೇ ಅದೇ ಫಾರ್ಮ್​ಹೌಸ್​ನ ಆವರಣದಿಂದ ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟು ತಾವು ಹೈದರಾಬಾದ್​ನಲ್ಲಿ ಇರುವುದಾಗಿ ಬಿಂಬಿಸಲು ಹೇಮಾ ಪ್ರಯತ್ನಿಸಿದ್ದರು. ‘ನಾನೇನೂ ತಪ್ಪು ಮಾಡಿಲ್ಲ. ನಾನು ನಿಜವಾಗಿ ಹೈದರಾಬಾದ್​ನಿಂದ ವಿಡಿಯೋ ಮಾಡಿದ್ದು. ಸಿಸಿಬಿಯವರು ನೋಡಿ ಹೇಗೆ ಕರೆದುಕೊಂಡು ಹೋಗ್ತಿದ್ದಾರೆ. ನಾನು ಬರ್ತ್​ಡೇ ಕೇಕ್​ ಕಟ್ ಮಾಡಿ ಹೈದರಾಬಾದ್​ಗೆ ಬಂದುಬಿಟ್ಟೆ. ನಮ್ಮ ಮನೆಯಿಂದ ಬಿರಿಯಾನಿ ವಿಡಿಯೋ ಹಾಕಿದ್ದೆ. ನಾನು ಡ್ರಗ್ಸ್ ತಗೊಂಡಿಲ್ಲ’ ಎಂದು ಹೇಮಾ ಹೇಳಿದ್ದಾರೆ.

ಇದನ್ನೂ ಓದಿ: ಬುರ್ಕಾ ಧರಿಸಿ ಡ್ರಗ್ಸ್ ಪಾರ್ಟಿ ಕೇಸ್​ ವಿಚಾರಣೆಗೆ ಬಂದ ನಟಿ ಹೇಮಾ; ಬಂಧಿಸಿದ ಪೊಲೀಸರು

ಬೆಂಗಳೂರಲ್ಲಿ ಹೇಮಾ ಅವರನ್ನು ಬಂಧಿಸಿದ ಬಳಿಕ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಅವರ ಮೆಡಿಕಲ್​ ಟೆಸ್ಟ್​ ಮಾಡಿಸಲಾಗಿದೆ. ರಕ್ತ, ಮೂತ್ರ, ಕೂದಲು, ಉಗುರಿನ ಸ್ಯಾಂಪಲ್​ ಪಡೆಯಲಾಗಿದೆ. ಫಾರ್ಮ್​​ಹೌಸ್​ ಮೇಲೆ ದಾಳಿ ನಡೆದ ದಿನವೂ ಹೇಮಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಅವರು ಡ್ರಗ್ಸ್​ ಸೇವಿಸಿರುವುದು ಖಚಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆ ಬಳಿಕ ವಿಚಾರಣೆಗೆ ಹಾಜರಾಗುವಂತೆ ಅವರಿಗೆ 2 ಬಾರಿ ನೋಟಿಸ್​ ನೀಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.