ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಹುಟ್ಟೂರಾದ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಲಿದ್ದಾರೆ. ಬಿಜೆಪಿ ಪರವಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಟಿಕೆಟ್ ನೀಡಿದ್ದಕ್ಕೆ ಕಂಗನಾ ಧನ್ಯವಾದ ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ರಾಜಕೀಯಕ್ಕೆ ಕಾಲಿಡುತ್ತಾರೆ. ಬಾಲಿವುಡ್ ನಟಿ ನೇಹಾ ಶರ್ಮಾ ಕೂಡ ಈಗ ಚುನಾವಣೆಗೆ ಸ್ಪರ್ಧಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನೇಹಾ ಶರ್ಮಾ ಈಗ ಸುದ್ದಿಯಲ್ಲಿರುತ್ತಾರೆ. ನೇಹಾ ಶರ್ಮಾ ಅನೇಕ ಬಾಲಿವುಡ್ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಇದರ ಹೊರತಾಗಿಯೂ ನೇಹಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಯಾವಾಗಲೂ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ನೇಹಾ ಶರ್ಮಾಗೆ ಅಪಾರ ಅಭಿಮಾನಿಗಳಿದ್ದಾರೆ. ನೇಹಾ ಶರ್ಮಾ ರಾಜಕೀಯಕ್ಕೆ ಕಾಲಿಡೋ ಸೂಚನೆ ಸಿಕ್ಕಿದೆ.
ಬಾಲಿವುಡ್ನಲ್ಲಿ ಮಿಂಚಿದ ನೇಹಾ ಶರ್ಮಾ ರಾಜಕೀಯದಲ್ಲಿಯೂ ಸದ್ದು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಈ ಬಾರಿ ರಾಜಕೀಯಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಇದೀಗ ಈ ಬಗ್ಗೆ ದೊಡ್ಡ ಮಾಹಿತಿಯೊಂದು ಹೊರಬಿದ್ದಿದೆ. ನೇಹಾ ಶರ್ಮಾ ನೇರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಅವರ ತಂದೆಯೇ ಈ ಹೇಳಿಕೆ ನೀಡಿದ್ದಾರೆ.
ನೇಹಾ ಶರ್ಮಾ ಕಾಂಗ್ರೆಸ್ ನಾಯಕ ಅಜಯ್ ಶರ್ಮಾ ಅವರ ಮಗಳು. ಅವರ ತಂದೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅಜಯ್ ಶರ್ಮಾ ಬಿಹಾರದ ಭಾಗಲ್ಪುರದ ಶಾಸಕರಾಗಿದ್ದಾರೆ. ‘ನನ್ನ ಮಗಳು ನೇಹಾ ಶರ್ಮಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು ನನ್ನ ಆಶಯ’ ಎಂದು ಅಜಯ್ ಶರ್ಮಾ ಹೇಳಿದ್ದಾರೆ.
ನೇಹಾ ಶರ್ಮಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ನಟಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ನೇಹಾ ಶರ್ಮಾ ನಿಜವಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸುವರೇ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ನೇಹಾ ಶರ್ಮಾ ಭಾಗಲ್ಪುರದಿಂದ ಲೋಕಸಭೆಗೆ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ನೇಹಾ ಶರ್ಮಾ ಅಭಿಮಾನಿ ಬಳಗ ದೊಡ್ಡದಿದ್ದು, ಈ ಫೈಟ್ ಕ್ಲೋಸ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ನೇಹಾ ಶರ್ಮಾ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದು 2007ರಲ್ಲಿ. ತೆಲುಗು ಚಿತ್ರರಂಗದಿಂದ ಅವರು ಬಣ್ಣದ ಬದುಕು ಆರಂಭಿಸಿದರು. ರಾಮ್ ಚರಣ್ ನಟನೆಯ ‘ಚಿರುತಾ’ ಅವರ ಮೊದಲ ಸಿನಿಮಾ. ನಂತರ ಹಿಂದಿ ಚಿತ್ರರಂಗದಲ್ಲಿ ಅವರು ಬ್ಯುಸಿ ಆದರು. 2017ರಿಂದ ಈಚೆಗೆ ಅವರು ಅಷ್ಟಾಗಿ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅವರು ಇನ್ನೂ ಮದುವೆ ಆಗಿಲ್ಲ.
ಇದನ್ನೂ ಓದಿ: ‘ಕೃಷ್ಣನ ಆಶೀರ್ವಾದ ಸಿಕ್ಕರೆ..’; ಚುನಾವಣೆ ಸ್ಪರ್ಧೆ ಬಗ್ಗೆ ಮೊದಲೇ ಸೂಚನೆ ಕೊಟ್ಟಿದ್ದ ಕಂಗನಾ ರಣಾವತ್
‘ತುಮ್ ಬಿನ್ 2’, ‘ಯಂಗಿಸ್ತಾನ್’,‘ ಕ್ಯಾ ಸೂಪರ್ ಕೂಲ್ ಹೇ ಹಮ್’, ‘ಜಯಂತಭಾಯ್ ಕಿ ಲವ್ ಸ್ಟೋರಿ’, ‘ತಾನಾಜಿ’, ‘ಯಮ್ಲಾ ಪಾಗ್ಲಾ ದೀವಾನಾ 2’ ಮುಂತಾದ ಚಿತ್ರಗಳಲ್ಲಿ ನೇಹಾ ಶರ್ಮಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ