ನಟ ಅಲ್ಲು ಅರ್ಜುನ್ (Allu Arjun) ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಪುಷ್ಪ ದಿ ರೈಸ್’ (Pushpa The Rise) ಚಿತ್ರ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಕಲೆಕ್ಷನ್ ವಿಚಾರದಲ್ಲಿ ಮುನ್ನುಗ್ಗುತ್ತಿದೆ. ಮೂಲ ತೆಲುಗಿನಲ್ಲಿ ತಯಾರಾದ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಗೊಂಡಿದೆ. ಇದು ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿರುವ ಅಲ್ಲು ಅರ್ಜುನ್ ಅವರ ಮೊದಲ ಚಿತ್ರವಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಚಿತ್ರ ತೆರೆ ಕಂಡಿದ್ದು, ಚಿತ್ರದ ಕಲೆಕ್ಷನ್ಗೆ ಪ್ಲಸ್ ಆಗಿದೆ. ಮುಖ್ಯವಾಗಿ ಹಿಂದಿ ಮತ್ತು ತಮಿಳಿನಲ್ಲಿ ಚಿತ್ರ ನಿರೀಕ್ಷೆಗಿಂತ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಬಾಕ್ಸಾಫೀಸ್ ತಜ್ಞರ ಪ್ರಕಾರ ‘ಪುಷ್ಪ’ ಚಿತ್ರ ಕೇವಲ ಐದು ದಿನಗಳ ಅವಧಿಯಲ್ಲೇ ₹ 200 ಕೋಟಿ ಕಲೆಕ್ಷನ್ ಕಮಾಯಿ ಮಾಡಿದೆ. ಚಿತ್ರಮಂದಿರಗಳ ಟಿಕೇಟ್ ಹಣದಿಂದಲೇ ಚಿತ್ರ ಇಷ್ಟು ಮೊತ್ತ ಗಳಿಸಿದ್ದು, ಈ ಮೊತ್ತ ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು. ಇದರ ಹೊರತಾಗಿ ಹಲವು ಹಕ್ಕುಗಳಿಂದ ಚಿತ್ರತಂಡ ಈಗಾಗಲೇ ದೊಡ್ಡ ಮೊತ್ತ ಗಳಿಸಿದೆ. ಅಲ್ಲು ಅರ್ಜುನ್ ಅವರ ಸತತ ಎರಡನೇ ಚಿತ್ರ ಈ ಮೈಲಿಗಲ್ಲನ್ನು ತಲುಪಿರುವುದು ಅವರಿಗೆ ಸಹಜವಾಗಿಯೇ ಸಂತಸ ಹೆಚ್ಚಿಸಿದೆ.
ಹಿಂದೂಸ್ತಾನ್ ಟೈಮ್ಸ್ ಪುಷ್ಪದ ಗಳಿಕೆಯ ಕುರಿತು ಬಾಕ್ಸಾಫೀಸ್ ತಜ್ಞರ ವರದಿ ಆಧರಿಸಿ, ಮಾಹಿತಿ ಬಹಿರಂಗಪಡಿಸಿದೆ. ಟ್ರೇಡ್ ವಿಶ್ಲೇಷಕ ತ್ರಿನಾಥ್ ಅವರ ಮಾಹಿತಿಯನ್ನು ಆಧರಿಸಿ, ಗಳಿಕೆಯ ವಿವರ ನೀಡಲಾಗಿದೆ. ಅದರ ಪ್ರಕಾರ, ಐದು ದಿನಗಳಲ್ಲಿ ‘ಪುಷ್ಪ’ ಚಿತ್ರದ ಒಟ್ಟಾರೆ ಗಳಿಕೆ ₹ 200 ಕೋಟಿ ದಾಟಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಿಂದಿಯಲ್ಲೂ ಚಿತ್ರ ಉತ್ತಮ ಗಳಿಕೆ:
‘ಸ್ಪೈಡರ್ ಮ್ಯಾನ್’ ಸರಣಿಯ ಚಿತ್ರದ ತೀವ್ರ ಪೈಪೋಟಿಯ ಹೊರತಾಗಿಯೂ ‘ಪುಷ್ಪ’ ಚಿತ್ರ ಹಿಂದಿಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಹಿಂದಿ ಮಾರುಕಟ್ಟೆಯಲ್ಲಿ ಚಿತ್ರತಂಡ ತೀವ್ರ ಪ್ರಚಾರವನ್ನೂ ಮಾಡಿರಲಿಲ್ಲ. ಅದಾಗ್ಯೂ ಚಿತ್ರದ ಗಳಿಕೆ ಉತ್ತಮವಾಗಿರುವುದು ಬಾಕ್ಸಾಫೀಸ್ ವಿಶ್ಲೇಷಕರಲ್ಲಿ ಅಚ್ಚರಿ ಮೂಡಿಸಿದೆ. ಇದುವರೆಗೆ ಪುಷ್ಪ ಚಿತ್ರವು ಹಿಂದಿ ಮಾರುಕಟ್ಟೆಯೊಂದರಿಂದಲೇ ₹ 20 ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಸ್ಟಾರ್ ನಟರ ಚಿತ್ರಗಳೂ ಬಾಲಿವುಡ್ನಲ್ಲಿ ನೆಲಕಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ದೃಷ್ಟಿಯಲ್ಲಿ ನೋಡುವುದಾದರೆ ಪುಷ್ಪದ ಗಳಿಕೆ ಉತ್ತಮವಾಗಿಯೇ ಇದೆ.
#Pushpa is all FIRE… Proves all calculations/estimations wrong… Day 5 higher than Day 1, 2, TERRIFIC HOLD… Mass circuits unstoppable… Shows increased at multiplexes… Fri 3.11 cr, Sat 3.55 cr, Sun 5.18 cr, Mon 4.25 cr, Tue 4.05 cr. Total: ₹ 20.14 cr. #India biz. #PushpaHindi pic.twitter.com/5nxIV8bcAF
— taran adarsh (@taran_adarsh) December 22, 2021
‘ಪುಷ್ಪ’ 2ನೇ ಭಾಗ ಯಾವಾಗ?
ರಕ್ತ ಚಂದನವನ್ನು ಕಳ್ಳಸಾಗಣೆ ಮಾಡುವ ಲಾರಿ ಡ್ರೈವರ್ ಕಥಾನಕವನ್ನು ಚಿತ್ರವು ಹೊಂದಿದ್ದು, ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಸಂಪೂರ್ಣವಾಗಿ ಆವರಿಸಿರುವ ಅಲ್ಲು ಅರ್ಜುನ್ ಅವರದ್ದು, ಒನ್ ಮ್ಯಾನ್ ಶೋ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ಹೊರಹಾಕಿದ್ದರು. ಅಲ್ಲದೇ ಅಲ್ಲು ಅರ್ಜುನ್ ಪಾತ್ರ ನಿರ್ವಹಣೆ ಚಿತ್ರದ ಬಹುದೊಡ್ಡ ಪ್ಲಸ್ ಎಂದು ಅಭಿಮಾನಿಗಳು ಸೇರಿದಂತೆ ಹಲವರು ಹೊಗಳಿದ್ದರು. ಇದು ಚಿತ್ರಕ್ಕೆ ಪ್ಲಸ್ ಆಗಿದೆ.
‘ಪುಷ್ಪ’ ಚಿತ್ರತಂಡ ಎರಡನೇ ಭಾಗದ ಬಿಡುಗಡೆಯನ್ನು ಘೋಷಿಸಿದ್ದು, 2022ರ ಡಿಸೆಂಬರ್ನಲ್ಲಿ ‘ಪುಷ್ಪ: ದಿ ರೂಲ್’ ತೆರೆಕಾಣಲಿದೆ. ಅದು ಫಹಾದ್ ಫಾಸಿಲ್ ಹಾಗೂ ಅಲ್ಲು ಅರ್ಜುನ್ ಮುಖಾಮುಖಿಯನ್ನು ಪ್ರಮುಖವಾಗಿ ಒಳಗೊಂಡಿರಲಿದೆ ಎಂದು ತಿಳಿಸಲಾಗಿದೆ.
ಅಲ್ಲು ಅರ್ಜುನ್ ಹಿಂದಿನ ಚಿತ್ರ ‘ಅಲಾ ವೈಕುಂಠಪುರಮುಲೋ’ ಕಮರ್ಷಿಯಲ್ ಹಿಟ್ ಆಗಿತ್ತು. ತ್ರಿವಿಕ್ರಮ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್ನ ಆ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆ ಚಿತ್ರ ಕೇವಲ ಚಿತ್ರಮಂದಿರದ ಗಳಿಕೆಯಿಂದಲೇ ಸುಮಾರು 200 ಕೋಟಿ ರೂ ಬಾಚಿಕೊಂಡಿತ್ತು. ಇದೀಗ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಕೂಡ ₹ 200 ಕೋಟಿ ಕ್ಲಬ್ ಸೇರಿದ್ದು, ಅಲ್ಲು ಅರ್ಜುನ್ ಯಶಸ್ಸಿನ ಖುಷಿಯಲ್ಲಿದ್ದಾರೆ.
ಇದನ್ನೂ ಓದಿ:
‘ರೈಡರ್’, ‘ಬಡವ ರಾಸ್ಕಲ್’ ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೀತಿ-ಪ್ರೋತ್ಸಾಹ
Alia Bhatt: ಮದುವೆಯಲ್ಲಿ ಗೆಳತಿಯರೊಂದಿಗೆ ಕುಣಿದು ಕುಪ್ಪಳಿಸಿದ ಆಲಿಯಾ; ವಿಡಿಯೋ ನೋಡಿ
Published On - 2:49 pm, Wed, 22 December 21