ಹಿಂದಿ ಡಬ್ಬಿಂಗ್​​ ಮೂಲಕ 100 ಕೋಟಿ ರೂ. ಬಾಚಿದ ‘ಪುಷ್ಪ’ ಚಿತ್ರ; ಹಾಗಾದ್ರೆ ‘ಕೆಜಿಎಫ್​’ ಗಳಿಸಿದ್ದೆಷ್ಟು?

| Updated By: ಮದನ್​ ಕುಮಾರ್​

Updated on: Jan 31, 2022 | 11:50 AM

Pushpa Hindi Box Office Collection: ಒಟಿಟಿಯಲ್ಲಿ ‘ಪುಷ್ಪ’ ಬಿಡುಗಡೆ ಆದ ಬಳಿಕವೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಿಂದಿ ಡಬ್ಬಿಂಗ್​ನಿಂದ 100 ಕೋಟಿ ರೂಪಾಯಿ ಗಳಿಕೆ ಆಗಿದೆ.

ಹಿಂದಿ ಡಬ್ಬಿಂಗ್​​ ಮೂಲಕ 100 ಕೋಟಿ ರೂ. ಬಾಚಿದ ‘ಪುಷ್ಪ’ ಚಿತ್ರ; ಹಾಗಾದ್ರೆ ‘ಕೆಜಿಎಫ್​’ ಗಳಿಸಿದ್ದೆಷ್ಟು?
ಅಲ್ಲು ಅರ್ಜುನ್
Follow us on

ಬಾಕ್ಸ್​ ಆಫೀಸ್​ನಲ್ಲಿ ‘ಪುಷ್ಪ’ ಸಿನಿಮಾ ಬಂಗಾರದ ಬೆಳೆ ತೆಗೆದಿದೆ. ಅಲ್ಲು ಅರ್ಜುನ್ (Allu Arjun)​ ಅವರಿಗೆ ಈ ಚಿತ್ರದ ಮೂಲಕ ಭರ್ಜರಿ ಗೆಲುವು ಸಿಕ್ಕಿದೆ. ಸುಕುಮಾರ್​ ಅವರು ಓರ್ವ ಯಶಸ್ವಿ ನಿರ್ದೇಶಕ ಎಂಬುದು ‘ಪುಷ್ಪ’ (Pushpa Movie) ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಕೀರ್ತಿ ಹೆಚ್ಚಿದೆ. ವಿಶ್ವಾದ್ಯಂತ ಈ ಸಿನಿಮಾ 350 ಕೋಟಿ ರೂಪಾಯಿ (Pushpa Box Office Collection) ಗಳಿಸಿದೆ. ತೆಲುಗಿನಲ್ಲಿ ತಯಾರಾದ ‘ಪುಷ್ಪ’ ಚಿತ್ರ ಹಿಂದಿ, ಕನ್ನಡ, ಮಲಯಾಳಂ ಮತ್ತು ತಮಿಳಿಗೂ ಡಬ್​ ಆಗಿ ತೆರೆ ಕಂಡಿದೆ. ವಿಶೇಷ ಏನೆಂದರೆ ಕೇವಲ ಹಿಂದಿ ಅವತರಣಿಕೆಯಿಂದಲೇ ಈ ಸಿನಿಮಾ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಸಿದೆ. ಆ ಮೂಲಕ ಬಾಲಿವುಡ್​ ಗಲ್ಲಾಪೆಟ್ಟಿಗೆಯಲ್ಲಿ ತೆಲುಗಿನ ಚಿತ್ರ ಅಬ್ಬರಿಸಿದೆ. ಮೂಲ ಹಿಂದಿ ಸಿನಿಮಾಗಳೇ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಲು ಕಷ್ಟಪಡುತ್ತಿರುವ ಕಾಲದಲ್ಲಿ ಒಂದು ಡಬ್ಬಿಂಗ್​ ಸಿನಿಮಾ ಈ ಪರಿ ಯಶಸ್ಸು ಕಂಡಿರುವುದಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲು ಅರ್ಜುನ್​ ಅವರ ಮುಂಬರುವ ಚಿತ್ರಗಳಿಗೆ ‘ಪುಷ್ಪ’ ಸಿನಿಮಾದ ಈ ಗೆಲುವು ಸಹಕಾರಿ ಆಗಲಿದೆ.

ಕಳೆದ ವರ್ಷ ಡಿ.17ರಂದು ‘ಪುಷ್ಪ’ ಸಿನಿಮಾ ವಿಶ್ವಾದ್ಯಂತ ತೆರೆಕಂಡಿತು. ಚಿತ್ರಮಂದಿರದಲ್ಲಿ ಈ ಸಿನಿಮಾಗೆ ಭರ್ಜರಿ ಓಪನಿಂಗ್​ ಸಿಕ್ಕಿತು. ಬಳಿಕ ಕೊರೊನಾ ವೈರಸ್​ ಮೂರನೇ ಅಲೆ ಹೆಚ್ಚಿತು. ಆಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಸ್ವಲ್ಪ ಕುಸಿಯಿತು. ಅನೇಕ ರಾಜ್ಯಗಳಲ್ಲಿ ಶೇ.50ರಷ್ಟು ಆಸನ ಮಿತಿ ನಿರ್ಬಂಧ ಹೇರಲಾಯಿತು. ಇದೆಲ್ಲದರ ಪರಿಣಾಮದಿಂದ ‘ಪುಷ್ಪ’ ಸಿನಿಮಾವನ್ನು ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ಒಟಿಟಿಯಲ್ಲಿ ಪ್ರಸಾರ ಮಾಡಲಾಯಿತು. ಒಟಿಟಿಯಲ್ಲೂ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡಿದ್ದಾರೆ. ಒಟಿಟಿಯಲ್ಲಿ ‘ಪುಷ್ಪ’ ಬಿಡುಗಡೆ ಆದ ಬಳಿಕವೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮುಂಬೈನ ಅನೇಕ ಕಡೆಗಳಲ್ಲಿ ಜನರು ‘ಪುಷ್ಪ’ ವೀಕ್ಷಿಸಲು ಥಿಯೇಟರ್​ಗೆ ಬರುತ್ತಿದ್ದಾರೆ.

ಕನ್ನಡದ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾ ಕೂಡ ಹಿಂದಿಗೆ ಡಬ್​ ಆಗಿ ತೆರೆಕಂಡಿತ್ತು. ಶಾರುಖ್​ ಖಾನ್​ ನಟನೆಯ ‘ಜೀರೋ’ ಚಿತ್ರದ ಎದುರಿನಲ್ಲಿ ಯಶ್​ ಸಿನಿಮಾ ಪೈಪೋಟಿ ನೀಡಿತ್ತು. ಹಿಂದಿ ವರ್ಷನ್​ನಿಂದ ‘ಕೆಜಿಎಫ್​’ ಚಿತ್ರ ಬರೋಬ್ಬರಿ 44 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಸದ್ಯ ‘ಕೆಜಿಎಫ್​: ಚಾಪ್ಟರ್​​ 2’ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲಿ ಬಾಲಿವುಡ್​ ನಟರಾದ ಸಂಜಯ್​ ದತ್​, ರವೀನಾ ಟಂಡನ್​ ಅಭಿನಯಿಸಿದ್ದಾರೆ. ಹಾಗಾಗಿ ಹಿಂದಿ ಪ್ರೇಕ್ಷಕರ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ‘ಪುಷ್ಪ’ ಚಿತ್ರದ ದಾಖಲೆಯನ್ನು ‘ಕೆಜಿಎಫ್​: ಚಾಪ್ಟರ್​ 2’ ಮುರಿಯಬಹುದೇ ಎಂಬ ಕೌತುಕ ನಿರ್ಮಾಣ ಆಗಿದೆ.

ಇದನ್ನೂ ಓದಿ:

ಅಲ್ಲು ಅರ್ಜುನ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್​ ಸೀಕ್ರೆಟ್​ ಇಲ್ಲಿದೆ..

ಅಲ್ಲು ಅರ್ಜುನ್​ ಹೊಸ ಚಿತ್ರಕ್ಕೆ ಅಟ್ಲಿ ನಿರ್ದೇಶನ; ಸಂಭಾವನೆ ಎಷ್ಟು ಅಂತ ಕೇಳಿದ್ರೆ ಅಚ್ಚರಿ ಆಗತ್ತೆ

Published On - 11:44 am, Mon, 31 January 22