25 ದಿನ ಯಶಸ್ವಿ ಪ್ರದರ್ಶನ ಕಂಡ ‘ಅಮರನ್’ ಸಿನಿಮಾ; ಒಟಿಟಿ ಬಿಡುಗಡೆ ವಿಳಂಬ?

|

Updated on: Nov 24, 2024 | 5:28 PM

ಬಾಕ್ಸ್​ ಆಫೀಸ್​ನಲ್ಲಿ ‘ಅಮರನ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಯಶಸ್ವಿಯಾಗಿ 25 ದಿನಗಳ ಪ್ರದರ್ಶನ ಕಂಡಿದೆ. ಈ ಸಿನಿಮಾದಿಂದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಅವರಿಗೆ ಗೆಲುವು ಸಿಕ್ಕಿದೆ. ಎಲ್ಲ ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಥಿಯೇಟರ್​ನಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಒಟಿಟಿ ರಿಲೀಸ್ ವಿಳಂಬ ಆಗುವ ಸಾಧ್ಯತೆ ಇದೆ.

25 ದಿನ ಯಶಸ್ವಿ ಪ್ರದರ್ಶನ ಕಂಡ ‘ಅಮರನ್’ ಸಿನಿಮಾ; ಒಟಿಟಿ ಬಿಡುಗಡೆ ವಿಳಂಬ?
ಶಿವಕಾರ್ತಿಕೇಯನ್, ಸಾಯಿ ಪಲ್ಲವಿ
Follow us on

ಮೇಜರ್ ಮುಕುಂದ್ ವರದರಾಜನ್ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ತಯಾರಾದ ‘ಅಮರನ್’ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಶಿವ ಕಾರ್ತಿಕೇಯನ್ ಅವರು ಈ ಸಿನಿಮಾದಲ್ಲಿ ವರದರಾಜನ್ ಪಾತ್ರವನ್ನು ಮಾಡಿದ್ದಾರೆ. ನಟನೆಯ ಮೂಲಕ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ವರದರಾಜನ್ ಪತ್ನಿ ರೆಬೆಕಾ ಪಾತ್ರವನ್ನು ಸಾಯಿ ಪಲ್ಲವಿ ಮಾಡಿದ್ದು, ಅವರಿಗೆ ಈ ಸಿನಿಮಾ ಮೂಲಕ ಗೆಲುವು ಸಿಕ್ಕಿದೆ. ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳಲ್ಲಿ 25 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.

‘ಅಮರನ್’ ಸಿನಿಮಾಗೆ ರಾಜ್‌ಕುಮಾರ್ ಪೆರಿಯಸ್ವಾಮಿ ಅವರು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್ ಅವರು ಕೂಡ ಈ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ರಾಹುಲ್ ಬೋಸ್, ಭುವನ್ ಅರೋರ, ಶ್ಯಾಮ್ ಪ್ರಸಾದ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿನ ಪಾತ್ರಕ್ಕಾಗಿ ದೇಹ ದಂಡಿಸಿ, ಖಡಕ್ ಲುಕ್‌ನಲ್ಲಿ ಶಿವಕಾರ್ತಿಕೇಯನ್ ಅವರು ಕಾಣಿಸಿಕೊಂಡಿದ್ದಾರೆ. ಅವರ ನಟನೆ ಅಭಿಮಾನಿಗಳಿಗೆ ಇಷ್ಟ ಆಗಿದೆ.

ರಿಯಲ್​ ಲೈಫ್​ ಘಟನೆಗಳನ್ನು ಆಧರಿಸಿದ ಸಿನಿಮಾ ಆದ್ದರಿಂದ ಪ್ರೇಕ್ಷಕರಿಗೆ ‘ಅಮರನ್‌ʼ ಸಿನಿಮಾ ಹೆಚ್ಚು ಇಷ್ಟ ಆಗುತ್ತಿದೆ. ಒಬ್ಬ ಸೈನಿಕ ಮತ್ತು ಸೈನ್ಯದ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸಿನಿಮಾವನ್ನು‌ ಕಟ್ಟಿಕೊಡಲಾಗಿದೆ ಎಂದು ವಿಮರ್ಶಕರು ಹೊಗಳಿದ್ದಾರೆ. ಅಕ್ಟೋಬರ್ ತಿಂಗಳ 31ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು. ಯಶಸ್ವಿಯಾಗಿ 25 ದಿನಗಳನ್ನು ಕಳೆದ ಬಳಿಕವೂ ಚಿತ್ರದ ಬಗ್ಗೆ ಸಿನಿಪ್ರಿಯರು ಮಾತನಾಡುತ್ತಿದ್ದಾರೆ.

ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿರುವುದು ಚಿತ್ರತಂಡಕ್ಕೆ ಪ್ಲಸ್ ಆಗಿದೆ. ಶಿವಕಾರ್ತಿಕೇಯನ್ ಅವರ ಕೆರಿಯರ್​ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ‘ಅಮರನ್​’ ಚಿತ್ರದ್ದು. ಈ ಸಿನಿಮಾದಲ್ಲಿ ಎಮೋಷನ್​ ಹಾಗೂ ಆಕ್ಷನ್ ಹೈಲೈಟ್‌ ಆಗಿದೆ. ಈ ಸಿನಿಮಾದ ಕಥೆಯು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೈನಿಕರ ಕುರಿತಾಗಿದೆ.

ಇದನ್ನೂ ಓದಿ: ‘ಅಮರನ್’ ಚಿತ್ರಕ್ಕಾಗಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು?

ಚಿತ್ರಮಂದಿರದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ ಪಡೆದುಕೊಂಡಿದೆ. ಡಿಸೆಂಬರ್ 5 ಅಥವಾ 10ರಿಂದ ಒಟಿಟಿಯಲ್ಲಿ ಪ್ರಸಾರ ಆಗುವ ಸಾಧ್ಯತೆ ಇದೆ. ಆದರೆ ಇಂದಿಗೂ ಚಿತ್ರಮಂದಿರದಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದರಿಂದ ಒಟಿಟಿ ರಿಲೀಸ್​ ಇನ್ನಷ್ಟು ತಡ ಆಗಬಹುದು ಎನ್ನಲಾಗಿದೆ. ಒಟಿಟಿ ರಿಲೀಸ್ ಸ್ವಲ್ಪ ವಿಳಂಬ ಆಗಲಿ ಎಂಬ ಬೇಡಿಕೆ ಚಿತ್ರಮಂದಿರಗಳ ಮಾಲೀಕರಿಂದಲೂ ಕೇಳಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.