ಮಲಯಾಳಂಗೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಅನುಷ್ಕಾ ಶೆಟ್ಟಿ
Anushka Shetty: ಅನುಷ್ಕಾ ಶೆಟ್ಟಿ ನಟನೆಯ ಈ ಹಿಂದಿನ ತೆಲುಗು ಸಿನಿಮಾ ‘ಘಾಟಿ’ ಬಾಕ್ಸ್ ಆಫೀಸ್ನಲ್ಲಿ ಹೀನಾಯವಾಗಿ ಸೋತಿತ್ತು. ಇದೀಗ ಅನುಷ್ಕಾ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅವರ ನಟನೆಯ ಮೊದಲ ಮಲಯಾಳಂ ಸಿನಿಮಾ ‘ಕಥನಾರ್’ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಹೇಗಿದೆ?

ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ (Anushka Shetty) ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ದಶಕದ ಕಾಲ ಸ್ಟಾರ್ ನಟಿಯಾಗಿ ಮೆರೆದವರು. ಅದರಲ್ಲೂ ತೆಲುಗು ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ವರ್ಗವನ್ನು ಅನುಷ್ಕಾ ಹೊಂದಿದ್ದಾರೆ. ‘ಅರುಂಧತಿ’ ಸೇರಿದಂತೆ ಕೆಲವು ಮಹಿಳಾ ಪ್ರಧಾನ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿರುವ ಅನುಷ್ಕಾ ಶೆಟ್ಟಿ, ಒಂದು ಭರ್ಜರಿ ಕಮ್ಬ್ಯಾಕ್ಗಾಗಿ ಪ್ರಯತ್ನಿಸುತ್ತಿದ್ದಾರೆ. ಅನುಷ್ಕಾರ ಈ ಹಿಂದಿನ ಸಿನಿಮಾ ‘ಘಾಟಿ’ ಸಿನಿಮಾ ನಿರೀಕ್ಷೆ ಮೂಡಿಸಿತ್ತಾದರೂ ಬಾಕ್ಸ್ ಆಫೀಸ್ನಲ್ಲಿ ಧಾರುಣ ಸೋಲು ಕಂಡಿತು, ಇದೀಗ ಮಲಯಾಳಂ ಚಿತ್ರರಂಗಕ್ಕೆ ಅನುಷ್ಕಾ ಎಂಟ್ರಿ ಕೊಟ್ಟಿದ್ದು, ಸಿನಿಮಾದ ಟ್ರೈಲರ್ ಭರವಸೆ ಮೂಡಿಸಿದೆ.
ಅನುಷ್ಕಾ ಶೆಟ್ಟಿ ಇದೇ ಮೊದಲ ಬಾರಿಗೆ ಮಲಯಾಳಂ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಹೆಸರು ‘ಕಥನಾರ್’. ಫ್ಯಾಂಟಸಿ ಶೈಲಿಯ ಕತೆಯನ್ನು ಹೊಂದಿರುವ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸುಮಾರು 2 ನಿಮಿಷ 58 ಸೆಕೆಂಡ್‌ಗಳ ಈ ಟ್ರೈಲರ್ ಪ್ರೇಕ್ಷಕರನ್ನು ಒಂದು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಕೇರಳದ ಜಾನಪದ ಕಥೆಗಳಲ್ಲಿ ಬರುವ ಪ್ರಸಿದ್ಧ ಮಾಂತ್ರಿಕ ಪಾದ್ರಿ ‘ಕಡಮತ್ತತ್ತು ಕಥನಾರ್’ ಜೀವನ ಆಧರಿಸಿ ಈ ಸಿನಿಮಾ ರೂಪಿಸಲಾಗಿದೆ. ಆದರೆ, ಇದು ಸಾಮಾನ್ಯ ಜಾನಪದ ಕಥೆಯಂತಿರದೆ, ಹಾರರ್ ಮತ್ತು ಫ್ಯಾಂಟಸಿ ಶೈಲಿಯ ಪ್ರಭಾವವನ್ನು ಹೊಂದಿದೆ.
ಸಿನಿಮಾನಲ್ಲಿ ದೃಶ್ಯ ವೈಭವಕ್ಕೆ ಹೆಚ್ಚಿನ ಒತ್ತು ನೀಡಲಾಗಿರುವುದು ಟ್ರೈಲರ್ನಿಂದ ತಿಳಿಯುತ್ತಿದೆ. ಸಿಜಿಐ ಮತ್ತು ವಿಎಫ್‌ಎಕ್ಸ್ ತಂತ್ರಜ್ಞಾನವನ್ನು ಸಮೃದ್ಧವಾಗಿ ಸಿನಿಮಾನಲ್ಲಿ ಬಳಸಲಾಗಿದೆ. ರೋಜನ್ ಥಾಮಸ್ ನಿರ್ದೇಶನದ ಈ ಚಿತ್ರಕ್ಕೆ ರಾಹುಲ್ ಸುಬ್ರಮಣಿಯನ್ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ:ವಿವಾಹ ವದಂತಿಗೆ ಸ್ಪಷ್ಟನೆ ಕೊಟ್ಟ ಅನುಷ್ಕಾ ಶೆಟ್ಟಿ
ಸಿನಿಮಾನಲ್ಲಿ ಜಯಸೂರ್ಯ ನಾಯಕನಾಗಿ ನಟಿಸಿದ್ದಾರೆ. ಅನುಷ್ಕಾ ಶೆಟ್ಟಿ, ನೀಲಿ ಹೆಸರಿನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭುದೇವ, ವಿನೀತ್ ಮತ್ತು ಸಂದೀಪ್ ಮಾಸ್ಟರ್ ಅವರಂತಹ ಅನುಭವಿ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
‘ಶ್ರೀ ಗೋಕುಲಂ ಮೂವೀಸ್’ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಕೇರಳದ 9ನೇ ಶತಮಾನದ ದಂತಕಥೆಯಾದ ಕಥನಾರ್, ತನ್ನ ಮಾಂತ್ರಿಕ ಶಕ್ತಿಯಿಂದ ಜನಸಾಮಾನ್ಯರ ಕಷ್ಟಗಳನ್ನು ನಿವಾರಿಸುತ್ತಿದ್ದ ಎಂಬ ಜನಪದ ಕತೆಗಳಿದ್ದು, ಅವುಗಳನ್ನೇ ಮೂಲವಾಗಿರಿಸಿಕೊಂಡು ಸಿನಿಮಾದ ಕತೆ ಮಾಡಲಾಗಿದೆ. ಇದು ಅನುಷ್ಕಾ ಶೆಟ್ಟಿ ಅವರ ಮೊದಲ ಮಲಯಾಳಂ ಸಿನಿಮಾ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
