ವಿರೋಧದ ನಡುವೆಯೂ ‘ದೇವರ’ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದ ಎಪಿ ಸರ್ಕಾರ

|

Updated on: Sep 21, 2024 | 7:51 PM

Devera Movie: ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಮತ್ತು ಶೋಗಳ ಸಂಖ್ಯೆ ಹೆಚ್ಚು ಮಾಡಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ. ಅಸಮಾಧಾನದ ನಡುವೆಯೂ ಈ ಒಪ್ಪಿಗೆ ಸಿಕ್ಕಿರುವುದು ಆಶ್ಚರ್ಯ.

ವಿರೋಧದ ನಡುವೆಯೂ ‘ದೇವರ’ ಟಿಕೆಟ್ ದರ ಹೆಚ್ಚಳಕ್ಕೆ ಅನುಮತಿ ನೀಡಿದ ಎಪಿ ಸರ್ಕಾರ
Follow us on

ಆಂಧ್ರ ಪ್ರದೇಶದಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದಿದೆ. ಚಂದ್ರಬಾಬು ನಾಯ್ಡು ಸಿಎಂ ಆಗಿದ್ದಾರೆ. ಸಿಎಂ ಆಗುವ ಮುನ್ನ ಮಾಡಿದ ಎಲ್ಲ ಕಾರ್ಯಕ್ರಮಗಳಿಂದಲೂ ಜೂ ಎನ್​ಟಿಆರ್ ಅನ್ನು ದೂರ ಇಡಲಾಗಿತ್ತು. ತಮ್ಮ ಪುತ್ರ ನಾರಾ ಲೋಕೇಶ್ ಅನ್ನು ರಾಜಕೀಯವಾಗಿ ಬೆಳೆಸಲೆಂದೇ ಜೂ ಎನ್​ಟಿಆರ್ ಅನ್ನು ಪಕ್ಷದ ಹಾಗೂ ನಂದಮೂರಿ ಕುಟುಂಬದ ಕಾರ್ಯಕ್ರಮಗಳಿಂದ ದೂರ ಇಡಲಾಗಿದೆ ಎನ್ನಲಾಗಿತ್ತು. ಚಂದ್ರಬಾಬು ನಾಯ್ಡು ಪಕ್ಷದಲ್ಲಿರುವ ನಂದಮೂರಿ ಬಾಲಕೃಷ್ಣ ಅಂತೂ ಕೆಲ ಬಾರಿ ಬಹಿರಂಗವಾಗಿಯೇ ಜೂ ಎನ್​ಟಿಆರ್ ವಿರುದ್ಧ ಮಾತನಾಡಿದ್ದರು. ಇಷ್ಟೆಲ್ಲ ವಿರೋಧವಿದ್ದರೂ ಸಹ ಇದೀಗ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾಕ್ಕೆ ಕೆಲವು ರಿಯಾಯಿತಿಗಳನ್ನು ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ನೀಡಿದೆ.

‘ದೇವರ’ ಸಿನಿಮಾದ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಲು ಅನುಮತಿಯನ್ನು ರಾಜ್ಯ ಸರ್ಕಾರ ನೀಡಿದೆ. ಟಿಕೆಟ್ ದರ ಹೆಚ್ಚಿಸಲು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ರಾಜ್ಯ ಸರ್ಕಾರದ ಅನುಮತಿ ಬೇಕಾಗಿದೆ. ಕರ್ನಾಟಕದಲ್ಲಿ ಆ ರೀತಿಯ ಯಾವುದೇ ಅನುಮತಿಯ ಅವಶ್ಯಕತೆ ಇಲ್ಲ. ಇದರ ಜೊತೆಗೆ ಸಿನಿಮಾದ ಮಿಡ್​ನೈಟ್ ಶೋ ಹಾಕಿಕೊಳ್ಳಲು, ಫ್ಯಾನ್ಸ್ ಶೋ ಹಾಕಿಕೊಳ್ಳಲು, ಅರ್ಲಿ ಮಾರ್ನಿಂಗ್ ಶೋ ಹಾಕಿಕೊಳ್ಳುವ ಅನುಮತಿಯನ್ನು ಸಹ ಆಂಧ್ರ ಸರ್ಕಾರ ನೀಡಿದೆ. ಇದು ‘ದೇವರ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.

ಈ ಬಗ್ಗೆ ಟ್ವೀಟ್ ವಿತರಕ ನಾಗ ವಂಶಿ, ‘ಟಿಕೆಟ್ ದರ ಹೆಚ್ಚಳ, ಹೆಚ್ಚುವರಿ ಶೋಗಳ ಬಗ್ಗೆ ನಾವು ಮಾಡಿದ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಆಂಧ್ರ ಸರ್ಕಾರ, ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್, ಸಿನಿಮಾಟೊಗ್ರಫಿ ಮಂದಿ ಕಂಡುಲದುರ್ಗೇಶ್ ಅವರಿಗೆ ಧನ್ಯವಾದ. ನಿಮ್ಮ ಬೆಂಬಲದಿಂದ ನಾವು ಪ್ರೇಕ್ಷಕರಿಗೆ ಅತ್ಯುತ್ತಮ ಚಿತ್ರಮಂದಿರ ಅನುಭವವನ್ನು ಕೊಡುವ ಸತತ ಪ್ರಯತ್ನ ಮಾಡುತ್ತೇವೆ. ‘ದೇವರ’ ಹಾವಳಿ ಸೆಪ್ಟೆಂಬರ್ 27ರಿಂದ ಪ್ರಾರಂಭ ಆಗಲಿದೆ’ ಎಂದಿದ್ದಾರೆ.

ಇದನ್ನೂ ಓದಿ:ಅಂದುಕೊಂಡಿದ್ದೆ ಒಂದು, ಆಗಿದ್ದೆ ಒಂದು: ಆರಂಭದ ದಿನಗಳ ನೆನೆದ ವಿಜಯ್ ದೇವರಕೊಂಡ

ಜಗನ್ ಆಡಳಿತವಿದ್ದಾಗ ಟಿಕೆಟ್ ಬೆಲೆಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿತ್ತು. ಚಿತ್ರಮಂದಿರಗಳ ಮೇಲೆ ತೆರಿಗೆ ಹೆಚ್ಚಿಸಲಾಗಿತ್ತು, ಕೆಲವು ಚಿತ್ರಮಂದಿರಗಳನ್ನು ಬಾಗಿಲು ಹಾಕಿಸಲಾಗಿತ್ತು. ಮಿಡ್​ನೈಟ್ ಶೋ, ಫ್ಯಾನ್ಸ್ ಶೋಗಳನ್ನು ರದ್ದು ಮಾಡಲಾಗಿತ್ತು. ಇನ್ನೂ ಹಲವು ನಿಯಮಗಳನ್ನು ಹೇರಿ ಚಿತ್ರರಂಗದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಲಾಗಿತ್ತು. ಇದನ್ನು ಚಿತ್ರರಂಗದವರು ಕಟುವಾಗಿ ವಿರೋಧಿಸಿದ್ದರು.

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ಶೇಡ್​ನಲ್ಲಿ ಜೂ ಎನ್​ಟಿಆರ್ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಕಲ್ಯಾಣ್ ರಾಮ್ ಬಂಡವಾಳ ಹೂಡಿದ್ದಾರೆ. ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ