ಹೀಗಾಗಿದ್ದರೆ ‘ಜೈ ಹೋ..’ ಹಾಡಿಗೆ ಆಸ್ಕರ್ ಅವಾರ್ಡ್​ ಸಿಗುತ್ತಲೇ ಇರಲಿಲ್ಲ; ಅದೃಷ್ಟ ಬದಲಿಸಿತು ಆ ಘಟನೆ

|

Updated on: Feb 01, 2024 | 7:24 AM

ಸಲ್ಮಾನ್ ಖಾನ್ ನಟನೆಯ ‘ಯುವರಾಜ’ ಸಿನಿಮಾ 2008ರಲ್ಲಿ ರಿಲೀಸ್ ಆಯಿತು. ಸುಭಾಷ್ ಘೈ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ರೆಹಮಾನ್ ಅವರು ಈ ಚಿತ್ರಕ್ಕಾಗಿ ‘ಜೈ ಹೋ’ ಹಾಡನ್ನು ಕಂಪೋಸ್ ಮಾಡಿದ್ದರು. ಆದರೆ, ಹಾಡು ಸಿನಿಮಾಗೆ ಸೂಕ್ತ ಅಲ್ಲ ಎನಿಸಿದ್ದರಿಂದ ಅದನ್ನು ಕೈಬಿಡಲಾಯಿತು.

ಹೀಗಾಗಿದ್ದರೆ ‘ಜೈ ಹೋ..’ ಹಾಡಿಗೆ ಆಸ್ಕರ್ ಅವಾರ್ಡ್​ ಸಿಗುತ್ತಲೇ ಇರಲಿಲ್ಲ; ಅದೃಷ್ಟ ಬದಲಿಸಿತು ಆ ಘಟನೆ
ರೆಹಮಾನ್
Follow us on

ಸಂಗೀತ ಸಂಯೋಜಕ ಎಆರ್​ ರೆಹಮಾನ್ (AR Rahman) ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ವಿಶ್ವ ಮಟ್ಟದಲ್ಲಿ ಅವರು ಹೆಸರು ಮಾಡಿದ್ದಾರೆ. ಆಸ್ಕರ್ ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದಾರೆ. ‘ಸ್ಲಮ್​ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ..’ ಹಾಡಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿತ್ತು. ಅಚ್ಚರಿಯ ವಿಚಾರ ಎಂದರೆ ಮೊದಲು ಈ ಹಾಡನ್ನು ರೆಹಮಾನ್ ಅವರು ಕಂಪೋಸ್ ಮಾಡಿದ್ದು ‘ಯುವರಾಜ’ ಚಿತ್ರಕ್ಕಾಗಿ. ಸಲ್ಮಾನ್ ಖಾನ್, ಅನಿಲ್ ಕಪೂರ್​, ಕತ್ರಿನಾ ಕೈಫ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ.

2008ರಲ್ಲಿ ‘ಯುವರಾಜ’ ಸಿನಿಮಾ ರಿಲೀಸ್ ಆಯಿತು. ಸುಭಾಷ್ ಘೈ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ರೆಹಮಾನ್ ಅವರು ‘ಜೈ ಹೋ’ ಹಾಡನ್ನು ಕಂಪೋಸ್ ಮಾಡಿದ್ದರು. ಆದರೆ, ಹಾಡು ಸಿನಿಮಾಗೆ ಸೂಕ್ತ ಅಲ್ಲ ಎನಿಸಿದ್ದರಿಂದ ಅದನ್ನು ಕೈಬಿಡಲಾಯಿತು.

‘ಯುವರಾಜ ಚಿತ್ರಕ್ಕಾಗಿ ಜೈ ಹೋ ಹಾಡನ್ನು ಮಾಡಲಾಗಿತ್ತು. ನಾವು ರೆಕಾರ್ಡ್ ಕೂಡ ಮಾಡಿದ್ದೆವು. ಆದರೆ, ಸಿನಿಮಾಗೆ ಹಾಡು ಸೂಕ್ತ ಅಲ್ಲ ಎನಿಸಿತು. ನಂತರ ಈ ಹಾಡನ್ನು ಸ್ಲಮ್​ಡಾಗ್ ಮಿಲಿಯನೇರ್ ಚಿತ್ರಕ್ಕೆ ಅವರು ನೀಡಿದರು. ಅದು ಅವರದ್ದೇ ಕಂಪೋಸ್ ಆಗಿತ್ತು. ಹೀಗಾಗಿ ಸಮಸ್ಯೆ ಎಂಬುದಿಲ್ಲ’ ಎಂದಿದ್ದಾರೆ ಸುಭಾಷ್ ಘೈ.

‘ನಮ್ಮ ಚಿತ್ರಕ್ಕೆ ಆ ಸಾಂಗ್ ಫಿಟ್ ಆಗಿಲ್ಲ ಎಂದಮೇಲೆ ಅದನ್ನು ಬಳಕೆ ಮಾಡಿಕೊಳ್ಳುವುದರಲ್ಲಿ ಅರ್ಥ ಇರಲಿಲ್ಲ. ನಮಗೆ ಸಾಂಗ್ ತುಂಬಾನೇ ಸಾಫ್ಟ್​ ಎನಿಸಿತು’ ಎಂದು ಹೇಳಿದ್ದಾರೆ ಸುಭಾಷ್.  ಈ ಮೊದಲು ರೆಹಮಾನ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಸುಭಾಷ್ ಅವರಿಗೆ ಈ ಹಾಡು ಬೇಕಾಗಿರಲಿಲ್ಲ. ಸ್ಲಮ್​ಡಾಗ್ ಮಿಲಿಯನೇರ್ ಚಿತ್ರದ ನಿರ್ದೇಶಕ ಡ್ಯಾನಿಗೆ ಹಾಡು ಇಷ್ಟ ಆಯಿತು. ಹೀಗಾಗಿ ಅವರಿಗೆ ನೀಡಿದೆ’ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: 2024 ಆಸ್ಕರ್ ನಾಮಿನೇಷನ್ಸ್​: ಇಲ್ಲಿದೆ ನಾಮಿನೇಟ್ ಆದ ಸಿನಿಮಾಗಳ ಪಟ್ಟಿ

ಸುಭಾಷ್ ಹಾಗೂ ರೆಹಮಾನ್ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇಬ್ಬರೂ ಮೊದಲು ಕೆಲಸ ಮಾಡಿದ್ದು ‘ತಾಲ್’ ಸಿನಿಮಾದಲ್ಲಿ. ರೆಹಮಾನ್ ಅವರನ್ನು ಹಿಂದಿ ಚಿತ್ರರಂಗಕ್ಕೆ ಮೊದಲು ಕರೆತಂದ ಖ್ಯಾತಿ ಸುಭಾಷ್ ಅವರಿಗೆ ಸಲ್ಲಿಕೆ ಆಗುತ್ತದೆ. ಆ ಬಳಿಕ ಇಬ್ಬರೂ ಒಟ್ಟಾಗಿ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಒಂದೊಮ್ಮೆ ‘ಜೈ ಹೋ’ ಹಾಡು ‘ಯುವರಾಜ’ ಸಿನಿಮಾದಲ್ಲಿಯೇ ಇದ್ದಿದ್ದರೆ ಬಹುಶಃ ಆಸ್ಕರ್ ಸಿಗುತ್ತಿರಲಿಲ್ಲವೇನೋ. 81ನೇ ಸಾಲಿನ ಅಕಾಡೆಮಿ ಅವಾರ್ಡ್ಸ್​ನಲ್ಲಿ ರೆಹಮಾನ್ ‘ಬೆಸ್ಟ್ ಒರಿಜಿನಲ್ ಸಾಂಗ್’ ಹಾಗೂ ‘ಬೆಸ್ಟ್ ಒರಿಜಿನಲ್ ಸ್ಕೋರ್’ ವಿಭಾಗದಲ್ಲಿ ಅವಾರ್ಡ್ ಬಾಚಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:02 am, Thu, 1 February 24