
‘ಬಾಹುಬಲಿ’ (Bahubali) ಭಾರತ ಚಿತ್ರರಂಗದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಸಿನಿಮಾ. ಒಳ್ಳೆಯ ಕಂಟೆಂಟ್ ಇದ್ದರೆ ನೂರಾರು ಕೋಟಿ ಬಂಡವಾಳ ಹಾಕಿ ಸಾವಿರಾರು ಕೋಟಿ ಹಣ ಬಾಚಬಹುದು ಎಂದು ತೋರಿಸಿಕೊಟ್ಟ ಸಿನಿಮಾ. ಭಾರತೀಯ ಸಿನಿಮಾ ಇತಿಹಾಸದಲ್ಲಿ ದಾಖಲಾದ ಈ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ. ‘ಬಾಹುಬಲಿ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿತ್ತು. ಆದರೆ ಇದೀಗ ಈ ಸಿನಿಮಾ ಒಂದೆ ಭಾಗದಲ್ಲಿ ಮರು ಬಿಡುಗಡೆ ಆಗುತ್ತಿದ್ದು, ಹಲವು ವಿಶೇಷತೆಗಳನ್ನು ಸಿನಿಮಾ ಒಳಗೊಂಡಿರಲಿದೆ.
ದಕ್ಷಿಣ ಭಾರತ ಚಿತ್ರರಂಗದ ಭವಿಷ್ಯ ಬದಲಾಯಿಸಿದ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನು ಹಲವು ಎಡಿಟ್ಗಳ ಮೂಲಕ ಒಂದೇ ಸಿನಿಮಾ ಅನ್ನಾಗಿ ಬದಲಾಯಿಸಿದ್ದು, ಸಿನಿಮಾಕ್ಕೆ ‘ಬಾಹುಬಲಿ: ದಿ ಎಪಿಕ್’ ಎಂದು ಹೆಸರಿಡಲಾಗಿದೆ. ಇದೀಗ ಈ ಸಿನಿಮಾ ಅಕ್ಟೋಬರ್ 31ರಂದು ಮರು ಬಿಡುಗಡೆ ಆಗುತ್ತಿದೆ. ಇಂದು (ಆಗಸ್ಟ್ 26) ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
‘ಬಾಹುಬಲಿ ಮೂವಿ’ ಯೂಟ್ಯೂಬ್ ಚಾನೆಲ್ನಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಒಂದು ನಿಮಿಷ 15 ಸೆಕೆಂಡ್ ಅವಧಿಯ ಟೀಸರ್ ಇದಾಗಿದ್ದು, ಟೀಸರ್ನಲ್ಲಿ ಮೊದಲ ಹಾಗೂ ಎರಡನೇ ಭಾಗದ ದೃಶ್ಯಗಳನ್ನು ಸೇರಿಸಲಾಗಿದೆ. ಸಿನಿಮಾದ ಕೆಲವು ಪ್ರಮುಖ ಸೀನ್ಗಳ ದೃಶ್ಯಗಳನ್ನು ಈ ಸಿನಿಮಾನಲ್ಲಿ ಸೇರಿಸಿರುವುದು ವಿಶೇಷ. ಟೀಸರ್ಗೆ ಹೊಸತಾಗಿ ಹಿನ್ನೆಲೆ ಸಂಗೀತವನ್ನು ಸಹ ನೀಡಲಾಗಿದೆ. ಇದರ ಜೊತೆಗೆ ಸಿನಿಮಾವನ್ನು ತಾಂತ್ರಿಕವಾಗಿ ಇನ್ನಷ್ಟು ಅಪ್ಗ್ರೇಡ್ ಸಹ ಮಾಡಲಾಗಿದೆ.
ಇದನ್ನೂ ಓದಿ:ಬಾಲಿವುಡ್ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?
ಸಿನಿಮಾಕ್ಕೆ ಡಾಲ್ಬಿ ಇನ್ನಿತರೆ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ಸಿನಿಮಾದ ಸೌಂಡ್ ಗುಣಮಟ್ಟ ಮತ್ತು ದೃಶ್ಯಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಸಿನಿಮಾವನ್ನು ಡಾಲ್ಬಿ ಸಿನಿಮಾಸ್ ಸಹಾಯದೊಂದಿಗೆ IMAX, 4DX, D-BOX ಮತ್ತು EPIQ ಗಳಲ್ಲಿ ನೋಡಿ ವಿಶೇಷ ಸಿನಿಮಾ ವೀಕ್ಷಣೆ ಅನುಭವ ಪಡೆಯಿರಿ ಎಂದು ಟೀಸರ್ನಲ್ಲಿಯೇ ಜಾಹೀರಾತು ನೀಡಲಾಗಿದೆ. ಅಂದಹಾಗೆ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಅಕ್ಟೋಬರ್ 31ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಅವಧಿ 3:30 ಗಂಟೆ ಇರಲಿದೆ ಎನ್ನಲಾಗುತ್ತಿದೆ.
ರಾಜಮೌಳಿ ನಿರ್ದೇಶಿಸಿದ್ದ ‘ಬಾಹುಬಲಿ’ ಸಿನಿಮಾಗಳು 2015 ಮತ್ತು 2017 ರಲ್ಲಿ ಬಿಡುಗಡೆ ಆಗಿದ್ದವು. ಎರಡೂ ಸಿನಿಮಾಗಳೂ ಸಹ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿದ್ದವು. ಮೊದಲ ಸಿನಿಮಾ ಸುಮಾರು 700 ಕೋಟಿ ಕಲೆ ಹಾಕಿದರೆ ಎರಡನೇ ಸಿನಿಮಾ 2000 ಕೋಟಿಗೂ ಹೆಚ್ಚಿನ ಮೊತ್ತವನ್ನು ಕಲೆ ಹಾಕಿ ದಾಖಲೆ ಸೃಷ್ಟಿಸಿತ್ತು. ಇದೀಗ ಈ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಈ ಬಾರಿಯೂ ಸಹ 1000 ಕೋಟಿ ಗಳಿಕೆ ಮಾಡಲಿದೆಯೇ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Tue, 26 August 25