‘ಬಾಹುಬಲಿ: ದಿ ಎಪಿಕ್’ ಬಿಡುಗಡೆ, ಸುದೀಪ್ ಅಭಿಮಾನಿಗಳಿಗೆ ಬೇಸರ

Bahubali The Epic: ‘ಬಾಹುಬಲಿ 1’ ಬಿಡುಗಡೆ ಆಗಿ ಹತ್ತು ವರ್ಷವಾದ ಬೆನ್ನಲ್ಲೆ ಇದೀಗ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಎರಡೂ ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಇಂದು (ಅಕ್ಟೋಬರ್ 31) ಬಿಡುಗಡೆ ಆಗಿದೆ ಆದರೆ ಸಿನಿಮಾ ನೋಡಿದ ಸುದೀಪ್ ಅಭಿಮಾನಿಗಳಿಗೆ ಬೇಸರವಾಗಿದೆ. ಕಾರಣವೇನು?

‘ಬಾಹುಬಲಿ: ದಿ ಎಪಿಕ್’ ಬಿಡುಗಡೆ, ಸುದೀಪ್ ಅಭಿಮಾನಿಗಳಿಗೆ ಬೇಸರ
Bahubali The Epic

Updated on: Oct 31, 2025 | 1:36 PM

ಬಾಹುಬಲಿ’ (Bahubali) ಸಿನಿಮಾ ಸರಣಿ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಮಹತ್ವದ ಸಿನಿಮಾ. ಭಾರತೀಯ ಸಿನಿಮಾ ಮಾರುಕಟ್ಟೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ ಸಿನಿಮಾ ಅದು. ಭಾರತೀಯ ಚಿತ್ರಕರ್ಮಿಗಳನ್ನು ದೊಡ್ಡದಾಗಿ ಯೋಚಿಸುವಂತೆ ಪ್ರೇರೇಪಿಸಿದ ಸಿನಿಮಾ ಅದು. ಇದೀಗ ‘ಬಾಹುಬಲಿ 1’ ಬಿಡುಗಡೆ ಆಗಿ ಹತ್ತು ವರ್ಷವಾದ ಬೆನ್ನಲ್ಲೆ ಇದೀಗ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಎರಡೂ ಸಿನಿಮಾಗಳನ್ನು ಒಟ್ಟಿಗೆ ಸೇರಿಸೆ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಇಂದು (ಅಕ್ಟೋಬರ್ 31) ಬಿಡುಗಡೆ ಆಗಿದೆ ಆದರೆ ಸಿನಿಮಾ ನೋಡಿದ ಸುದೀಪ್ ಅಭಿಮಾನಿಗಳಿಗೆ ಬೇಸರವಾಗಿದೆ.

‘ಬಾಹುಬಲಿ’ ಸಿನಿಮಾದ ಎರಡು ಭಾಗಗಳನ್ನು ಸೇರಿಸಿ 3:42 ಗಂಟೆಯ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಮಾಡಲಾಗಿದೆ. ಹಾಗಾಗಿ ಎರಡೂ ಸಿನಿಮಾಗಳಲ್ಲಿನ ಹಲವಾರು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈ ಕತ್ತರಿ ಹಾಕುವ ಕೆಲಸವನ್ನು ಖುದ್ದು ನಿರ್ದೇಶಕ ರಾಜಮೌಳಿ ಮಾಡಿದ್ದಾರೆ. ಕತೆಗೆ ಅನವಶ್ಯಕ ಎನಿಸಿದ ಕೆಲ ದೃಶ್ಯಗಳು, ಹಾಡುಗಳನ್ನು ಕತ್ತರಿಸಲಾಗಿದೆಯಂತೆ. ಸಿನಿಮಾ ಅನ್ನು ಚಿಕ್ಕದಾಗಿಸುವ ಪ್ರಕ್ರಿಯೆಯಲ್ಲಿ ‘ಬಾಹುಬಲಿ: ದಿ ಬಿಗಿನಿಂಗ್’ನಲ್ಲಿದ್ದ ಸುದೀಪ್ ಅವರ ಪಾತ್ರಕ್ಕೂ ಕತ್ತರಿ ಹಾಕಲಾಗಿದೆ.

2015 ರಲ್ಲಿ ಬಿಡುಗಡೆ ಆಗಿದ್ದ ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾನಲ್ಲಿ ಸುದೀಪ್ ಅವರು ಅಸ್ಲಂ ಖಾನ್ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಅರೆಬಿಯನ್ ಶಸ್ತ್ರಾಸ್ತ್ರಗಳ ವ್ಯಾಪಾರಿಯ ಪಾತ್ರವದು. ಒಳ್ಳೆಯ ಫೈಟ್ ದೃಶ್ಯವೂ ಸಹ ಅವರಿಗೆ ಇತ್ತು. ‘ಬಾಹುಬಲಿ’ ಸಿನಿಮಾದ ಪ್ರಮುಖ ಪಾತ್ರಧಾರಿ ಕಟ್ಟಪ್ಪನ ಶಕ್ತಿ, ತ್ಯಾಗವನ್ನು ಪ್ರೇಕ್ಷಕರಿಗೆ ಪರಿಚಯಿಸಲು ಅಸ್ಲಂ ಖಾನ್ ಪಾತ್ರವನ್ನು ರಾಜಮೌಳಿ ಜಾಣತನದಿಂದ ಬಳಸಿದ್ದರು. ಸುದೀಪ್ ಸಹ ಅದ್ಭುತವಾಗಿ ನಟಿಸಿದ್ದರು. ಕೆಲ ಎಲಿವೇಶನ್ ದೃಶ್ಯಗಳು ಸಹ ಸುದೀಪ್ ಅವರಿಗೆ ಆ ಸಿನಿಮಾನಲ್ಲಿ ಇತ್ತು. ಆದರೆ ಈಗ ಸುದೀಪ್ ಅವರ ದೃಶ್ಯಗಳಿಗೆ ರಾಜಮೌಳಿ ಕತ್ತರಿ ಹಾಕಿದ್ದಾರೆ.

ಇದನ್ನೂ ಓದಿ:ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಇದು ಸುದೀಪ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಬಗ್ಗೆ ಕೆಲ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ನೋಡಿದಿರುವಂತೆಯೂ ಸಹ ಕೆಲವು ಅಭಿಮಾನಿಗಳು ಕರೆ ನೀಡಿದ್ದಾರೆ. ಆದರೆ ‘ಬಾಹುಬಲಿ’ ಅಭಿಮಾನಿಗಳು, ಸಿನಿಮಾವನ್ನು ಕಿರಿದು ಮಾಡಲು ಅಗತ್ಯವಾದ ಕ್ರಮವನ್ನು ರಾಜಮೌಳಿ ಮಾಡಿದ್ದಾರೆಂದಿದ್ದಾರೆ.

ಸುದೀಪ್ ಅವರ ದೃಶ್ಯಗಳು ಮಾತ್ರವೇ ಅಲ್ಲದೆ ಸ್ವತಃ ಪ್ರಭಾಸ್ ಮತ್ತು ರಾಣಾ ಅವರ ಕೆಲವು ಪಾತ್ರಗಳನ್ನು ಸಹ ರಾಜಮೌಳಿ ತೆಗೆದು ಹಾಕಿದ್ದಾರೆ. ತಮನ್ನಾ ಅವರ ಒಂದು ಹಾಡನ್ನು, ಅನುಷ್ಕಾ ಹಾಗೂ ಪ್ರಭಾಸ್ ಅವರ ಒಂದು ಯುಗಳ ಗೀತೆಯನ್ನು ಸಹ ತೆಗೆದು ಹಾಕಿದ್ದಾರೆ. ಕೆಲವು ಹಾಸ್ಯದೃಶ್ಯಗಳಿಗೂ ಸಹ ರಾಜಮೌಳಿ ಕತ್ತರಿ ಹಾಕಿದ್ದಾರೆ.

‘ಬಾಹುಬಲಿ: ದಿ ಬಿಗಿನಿಂಗ್’ ಮತ್ತು ‘ಬಾಹುಬಲಿ: ದಿ ಕನ್​ಕ್ಲೂಷನ್’ ಎರಡೂ ಸಿನಿಮಾಗಳ ಒಟ್ಟು ಅವಧಿ ಸುಮಾರು 5:50 ಗಂಟೆ ಇದೆ. ಸುಮಾರು ಎರಡು ಗಂಟೆಯ ಸಿನಿಮಾವನ್ನು ರಾಜಮೌಳಿ ಕತ್ತರಿಸಿ ತೆಗೆದಿದ್ದಾರೆ. ಹಾಗಾಗಿ ಸಹಜವಾಗಿಯೇ ಹಲವು ಪ್ರಮುಖ ದೃಶ್ಯಗಳನ್ನು ಸಹ ತೆಗೆಯಲಾಗಿದೆ. ರಾಜಮೌಳಿ ಸಹ ‘ಬಾಹುಬಲಿ 1’ನ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಅವರು ಸ್ವತಃ ತಮ್ಮ ಪಾತ್ರವನ್ನೇ ಸಿನಿಮಾದಿಂದ ತೆಗೆದಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Fri, 31 October 25