Kona Movie Review: ‘ಕೋಣ’ ಚಿತ್ರದಲ್ಲಿ ಕೋಮಲ್ ಕಾಮಿಡಿಗೆ ಸಾಥ್ ನೀಡಿದ ಕಲಾವಿದರ ದಂಡು

- Time - 117 Minutes
- Released - October 31, 2025
- Language - Kannada
- Genre - ಕಾಮಿಡಿ, ಹಾರರ್, ಥ್ರಿಲ್ಲರ್
ನಟಿ ತನಿಷಾ ಕುಪ್ಪಂಡ (Tanisha Kuppanda) ಅವರು ಬಿಗ್ ಬಾಸ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಸಿನಿಮಾ, ಕಿರುತೆರೆಯಲ್ಲಿ ಅವರು ಹೆಸರು ಮಾಡಿದ್ದಾರೆ. ಈಗ ನಿರ್ಮಾಪಕಿ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಅವರು ನಿರ್ಮಾಣ ಮಾಡಿರುವ ‘ಕೋಣ’ ಸಿನಿಮಾ (Kona Movie) ಬಿಡುಗಡೆ ಆಗಿದೆ. ನಿರ್ಮಾಣದಲ್ಲಿ ತನಿಷಾ ಕುಪ್ಪಂಡ ಅವರಿಗೆ ಕಾರ್ತಿಕ್ ಕಿರಣ್ ಸಂಕಪಾಲ್ ಹಾಗೂ ರವಿ ಕಿರಣ್ ಅವರು ಸಾಥ್ ನೀಡಿದ್ದಾರೆ. ಕಾಮಿಡಿ, ಹಾರರ್, ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಹಲವಾರು ಕಲಾವಿದರು ನಟಿಸಿದ್ದಾರೆ. ಕೋಮಲ್ ಕುಮಾರ್ (Komal Kumar) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ‘ಕೋಣ’ ಚಿತ್ರದ ವಿಮರ್ಶೆ ಇಲ್ಲಿದೆ..
ಆಚರಣೆ, ಪದ್ದತಿ, ನಂಬಿಕೆಯ ಹೆಸರಿನಲ್ಲಿ ಪ್ರಾಣಿ ಬಲಿ ನೀಡುವುದು ಹಳೇ ಕಾಲದಲ್ಲಿ ಅತಿಯಾಗಿ ಜಾಲ್ತಿಯಲ್ಲಿತ್ತು. ಅಂಥದ್ದೇ ಒಂದು ಸಂಗತಿಯನ್ನು ಇಟ್ಟುಕೊಂಡು ನಿರ್ದೇಶಕ ಹರಿಕೃಷ್ಣ ಎಸ್. ಅವರು ‘ಕೋಣ’ ಸಿನಿಮಾ ಮಾಡಿದ್ದಾರೆ. ಊರೊಂದರಲ್ಲಿ ಜಾತ್ರೆಯ ಪ್ರಯುಕ್ತ ಕೋಣದ ಬಲಿ ಕೊಡಲು ಗ್ರಾಮಸ್ಥರು ಮುಂದಾದಾಗ ಏನೆಲ್ಲ ಸಂಗತಿಗಳು ಜರುಗುತ್ತವೆ ಎಂಬುದೇ ಕೋಣ ಸಿನಿಮಾದ ಹೈಲೈಟ್.
ಒಂದುವೇಳೆ ಕೋಣ ಬಲಿ ಕೊಡದೇ ಇದ್ದರೇ ಊರಿಗೆ ತೊಂದರೆ ಆಗುತ್ತದೆ ಎಂಬುದು ಆ ಗ್ರಾಮದವರ ನಂಬಿಕೆ. ಆದರೆ ಕೋಣ ಬಲಿ ಕೊಡಲು ಅವಕಾಶ ಇಲ್ಲ ಎಂದು ಪೊಲೀಸರು ಪಟ್ಟು ಹಿಡಿಯುತ್ತಾರೆ. ಇಂತಹ ಒಂದು ಗಂಭೀರವಾದ ಕಥೆಯಲ್ಲಿ ಹಾರರ್ ಅಂಶಗಳನ್ನು ಸೇರಿಸಲಾಗಿದೆ. ಆದರೆ ಪೂರ್ತಿ ನಿರೂಪಣೆಯನ್ನು ಹಾಸ್ಯದ ಶೈಲಿಯಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಲಾಗಿದೆ.
‘ಕೋಣ’ ಸಿನಿಮಾದಲ್ಲಿ ತನಿಷಾ ಕುಪ್ಪಂಡ ಮತ್ತು ಕೋಮಲ್ ಕುಮಾರ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಗಂಡ-ಹೆಂಡತಿ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಆದರೆ ಒಂದಷ್ಟು ಟ್ವಿಸ್ಟ್ ಕೂಡ ಇದೆ. ಅದೇನು ಎಂಬುದನ್ನು ಸಿನಿಮಾದಲ್ಲಿ ನೋಡಿ ತಿಳಿದುಕೊಂಡರೆ ಉತ್ತಮ. ಬಿಗ್ ಬಾಸ್ ಹಾಗೂ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿದ್ದ ಅನೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕೋಮಲ್ ಕುಮಾರ್, ತನಿಷಾ ಕುಪ್ಪಂಡ ಜೊತೆಯಲ್ಲಿ ಜಗಪ್ಪ, ಸುಶ್ಮಿತಾ, ಶಿಶಿರ್ ಶಾಸ್ತ್ರಿ, ನಮ್ರತಾ ಗೌಡ, ರಂಜಿತ್, ವಿನಯ್ ಗೌಡ, ತುಕಾಲಿ ಸಂತೋಷ್, ಮಂಜು ಪಾವಗಡ, ವಿಜಯ್ ಚಂಡೂರ್, ರಘು ರಾಮನಕೊಪ್ಪ, ರಿತ್ವಿ ಜಗದೀಶ್, ಎಂ.ಕೆ. ಮಠ, ಕೀರ್ತಿರಾಜ್ ಸೇರಿದಂತೆ ಹಲವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಕಾಮಿಡಿ ಕಲಾವಿದರೇ ಹೆಚ್ಚಾಗಿ ಇರುವುದರಿಂದ ಸಿನಿಮಾ ಪಟಪಟನೆ ಸಾಗುತ್ತದೆ.
ಇದನ್ನೂ ಓದಿ: ತನಿಷಾ ನಿರ್ಮಾಣದ ‘ಕೋಣ’ ಚಿತ್ರದಲ್ಲಿ ವರ್ತೂರು ಸಂತೋಷ್ ನಟಿಸಿಲ್ಲ: ಇಲ್ಲಿದೆ ಅಸಲಿ ಕಾರಣ
ಕೋಮಲ್ ಅವರ ಸಿನಿಮಾ ಎಂದರೆ ಅಭಿಮಾನಿಗಳು ಕಾಮಿಡಿ ನಿರೀಕ್ಷಿಸುತ್ತಾರೆ. ಅವರ ಜೊತೆ ಇನ್ನೂ ಹಲವಾರು ಕಲಾವಿದರು ಸೇರಿಕೊಂಡಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚುವುದು ಸಹಜ. ಆದರೆ ಕಾಮಿಡಿ ಜೊತೆ ಹಾರರ್ ಮತ್ತು ಥ್ರಿಲ್ಲರ್ ಗುಣ ಕೂಡ ಇರುವುದರಿಂದ ಒಂದು ಸಮತೋಲನ ಕಾಯ್ದುಕೊಳ್ಳಲು ಕಷ್ಟವಾಗಿದೆ. ಇತ್ತ ಪೂರ್ತಿ ಹಾರರ್-ಥ್ರಿಲ್ಲರ್ ಸಿನಿಮಾ ಆಗದೇ, ಅತ್ತ ಪೂರ್ತಿ ಕಾಮಿಡಿ ಚಿತ್ರವೂ ಆಗದೇ ಒಂದು ಚೌಕಟ್ಟು ಇಲ್ಲದ ರೀತಿಯಲ್ಲಿ ಸಿನಿಮಾ ಮೂಡಿಬಂದಿದೆ.
ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಈ ಹಾರರ್ ಕಥೆಗೆ ಇನ್ನಷ್ಟು ತೀವ್ರತೆ ಬೇಕಿತ್ತು. ಕಾಮಿಡಿ ದೃಶ್ಯಗಳನ್ನು ಸುಧಾರಿಸುವ ಸಾಧ್ಯತೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿತ್ತು. ಈ ರೀತಿಯ ಒಂದಷ್ಟು ಕೊರತೆಗಳು ‘ಕೋಣ’ ಸಿನಿಮಾದಲ್ಲಿ ಕಾಣಿಸುತ್ತವೆ. ಅವುಗಳ ನಡುವೆಯೂ ಕೂಡ ಈ ಸಿನಿಮಾ ತನ್ನ ಆಶಯದ ಕಾರಣದಿಂದ ನೋಡಿಸಿಕೊಂಡು ಸಾಗುತ್ತದೆ. ಮೇಲು-ಕೀಳು, ಪ್ರಾಣಿ ಬಲಿ ಮುಂತಾದ ಪಿಡುಗುಗಳ ವಿರುದ್ಧ ಧ್ವನಿ ಎತ್ತಲು ಈ ಸಿನಿಮಾ ಪ್ರಯತ್ನಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




