
ಚಿರಂಜೀವಿ ಹಾಗೂ ಎನ್ಟಿಆರ್ ಕುಟುಂಬದ ನಡುವೆ ದಶಕಗಳಿಂದಲೂ ವೈಮನಸ್ಯ ಇದ್ದೇ ಇದೆ. ಆದರೆ ಇತ್ತೀಚೆಗೆ ಈ ವೈಮನಸ್ಯ ದೂರಾಗಿತ್ತು. ಎನ್ಟಿಆರ್ ಕುಟುಂಬದ್ದೇ ಪಕ್ಷವಾದ ಟಿಡಿಪಿ ಜೊತೆಗೆ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಕೈ ಜೋಡಿಸಿ, ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸಹ ಆದರು. ಆ ಬಳಿಕ ಚಿರಂಜೀವಿ ಹಾಗೂ ಬಾಲಯ್ಯ ಸಹ ಬಹಿರಂಗ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಪರಸ್ಪರರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ಆದರೆ ಈ ಸ್ನೇಹ ಉಳಿದಿದ್ದು, ಕೆಲವೇ ದಿನಗಳು, ಈಗ ಮತ್ತೆ ಬಾಲಕೃಷ್ಣ ಹಾಗೂ ಚಿರಂಜೀವಿ ನಡುವೆ ವೈಮನಸ್ಯ ಮೂಡಿದೆ. ಬಾಲಯ್ಯ, ಅಸೆಂಬ್ಲಿಯಲ್ಲೇ ಚಿರಂಜೀವಿ ವಿರುದ್ಧ ಸಿಟ್ಟಿನಿಂದ ಮಾತನಾಡಿದ್ದಾರೆ.
ಆಂಧ್ರ ಪ್ರದೇಶ ಅಸೆಂಬ್ಲಿಯಲ್ಲಿ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಜೋರು ಚರ್ಚೆ ಜಾರಿಯಲ್ಲಿದೆ. ಜಗನ್ ಸರ್ಕಾರವಿದ್ದಾಗ ಪ್ರಜಾ ಪ್ರನಿಧಿಗಳ ಮೇಲೆ, ವಿಪಕ್ಷ ಸದಸ್ಯರುಗಳ ಮೇಲೆ ಹಾಕಿದ ಕೇಸುಗಳು, ಅವರನ್ನು ಅಮಾನವೀಯವಾಗಿ ನಡೆಸಿಕೊಂಡ ವಿಧಾನಗಳ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ವೇಳೆ ಹಾಲಿ ಸಚಿವ ಕಮಿನೇನಿ ಕೃಷ್ಣ ಶ್ರೀನಿವಾಸ್ ಮಾತನಾಡುತ್ತಾ, ಜಗನ್ ಎಂಥಹಾ ಕೆಟ್ಟ ವ್ಯಕ್ತಿ ಆಗಿದ್ದರು ಎಂಬುದನ್ನು ತಮ್ಮ ಮಾತಿನಲ್ಲಿ ವಿವರಿಸುತ್ತಾ, ಮೆಗಾಸ್ಟಾರ್, ನಟ ಚಿರಂಜೀವಿ ಅವರು ಜಗನ್ ಅವರನ್ನು ಭೇಟಿ ಆದ ಘಟನೆಯನ್ನು ವಿವರಿಸಿದರು.
ಟಿಕೆಟ್ ದರಗಳನ್ನು ಧಾರುಣವಾಗಿ ತಗ್ಗಿಸಿದ್ದಾಗ ಚಿರಂಜೀವಿ ಅವರು ಮುಂದಾಳತ್ವ ವಹಿಸಿ ಮೊದಲಿಗೆ ಜಗನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರ ಮನೆಗೆ ಉಪಹಾರಕ್ಕೆ ಹೋಗಿ ಮಾತನಾಡಿದ್ದರು. ಬಳಿಕ ತೆಲುಗು ಚಿತ್ರರಂಗದ ಪ್ರಮುಖರನ್ನು ಕರೆದುಕೊಂಡು ಸಿಎಂ ಅವರ ಭೇಟಿಗೆ ಸಹ ಹೋಗಿದ್ದರು. ಆ ವೇಳೆ ಸರ್ಕಾರದ ವತಿಯಿಂದಲೇ ಯಾರು ಯಾರನ್ನು ಸಭೆಗೆ ಕರೆದುಕೊಂಡು ಬರಬೇಕು ಎಂಬ ಪಟ್ಟಿಯನ್ನು ಕೊಡಲಾಗಿತ್ತು.
ಅದರಂತೆ ಚಿರಂಜೀವಿ ಅವರು ಪ್ರಭಾಸ್, ಮಹೇಶ್ ಬಾಬು, ರಾಜಮೌಳಿ ಇನ್ನಿತರೆ ಕೆಲವು ಪ್ರಮುಖರನ್ನು ಸಿಎಂ ಭೇಟಿಗೆ ಕರೆದುಕೊಂಡು ಹೋಗಿದ್ದರು. ಆ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡಿದ ಸಚಿವ ಕಮಿನೇನಿ ಕೃಷ್ಣ ಶ್ರೀನಿವಾಸ್, ಅವರು ಕೊಟ್ಟ ಪಟ್ಟಿಯಲ್ಲಿ ಬಾಲಕೃಷ್ಣ ಹೆಸರು ಇರಲೇ ಇಲ್ಲ. ಅವರನ್ನು ಭೇಟಿ ಆಗುವುದೇ ಜಗನ್ಗೆ ಇಷ್ಟ ಇರಲಿಲ್ಲ. ಅದಾದ ಬಳಿಕ ಚಿರಂಜೀವಿ ಅವರು ದೊಡ್ಡ ನಟರು, ನಿರ್ದೇಶಕರು, ನಿರ್ಮಾಪಕರನ್ನು ಕರೆದುಕೊಂಡು ಹೋದಾಗಲೂ ಗೇಟಿನ ಬಳಿಯೇ ಅವರ ಕಾರನ್ನು ತಡೆದು ನಡೆದುಕೊಂಡು ಹೋಗುವಂತೆ ಮಾಡಿದರು. ಬಳಿಕ ಮೀಟಿಂಗ್ಗೆ ಹೋದಾಗ ಅಲ್ಲಿ ಪೋಸಾನಿ ಮುರಳಿ ಕೃಷ್ಣ ಅಂಥಹಾ ದುರುಳರನ್ನು ಸಭೆಯಲ್ಲಿ ಕೂರಿಸಿದರು. ಬಳಿಕ ಸಿಎಂ ಭೇಟಿ ಆಗುವುದಿಲ್ಲ, ಸಿನಿಮಾಟೊಗ್ರಫಿ ಮಂತ್ರಿಯೊಟ್ಟಿಗೆ ಸಭೆ ಮಾಡಿ ಎಂದರು. ಆಗ ಚಿರಂಜೀವಿ ತುಸು ಗಟ್ಟಿ ದನಿಯಲ್ಲಿ, ಅವರು ಹೇಳಿದ್ದಕ್ಕೆ ನಾನು ಇವರನ್ನೆಲ್ಲ ಕಾಡಿ-ಬೇಡಿ ಕರೆದುಕೊಂಡು ಬಂದೆ ಎಂದಾಗ ಆ ಬಳಿಕ ಜಗನ್ ಸಭೆಗೆ ಬಂದರು. ಅಲ್ಲಿಯೂ ಸಹ ಚಿರಂಜೀವಿ, ಸಿಎಂ ಅನ್ನು ಮನವಿ ಮಾಡತ್ತಿರುವ ವಿಡಿಯೋ ಅನ್ನು ವೈರಲ್ ಮಾಡಿ ಚಿರಂಜೀವಿ ಅವರಿಗೆ ಅವಮಾನ ಮಾಡಿದರು’ ಎಂದು ಸಚಿವ ಕಮಿನೇನಿ ಕೃಷ್ಣ ಶ್ರೀನಿವಾಸ್.
ಇದನ್ನೂ ಓದಿ:ಮೆಗಾ ಸ್ಟಾರ್ ಚಿರಂಜೀವಿ ಜೊತೆ ಕೆವಿಎನ್ ಪ್ರೊಡಕ್ಷನ್ಸ್ ಹೊಸ ಸಿನಿಮಾ
ಆದರೆ ಇದರಿಂದ ಬೇಸರಗೊಂಡ ಬಾಲಕೃಷ್ಣ, ‘ಕೃಷ್ಣ ಶ್ರೀನಿವಾಸ್ ಮಾತನಾಡಿದ ಕೂಡಲೇ ಎದ್ದು ನಿಂತು, ‘ಆ ಪಟ್ಟಿಯಲ್ಲಿ ನನ್ನ ಹೆಸರು ಇತ್ತು, ಆದರೆ ನನ್ನ ಹೆಸರನ್ನು 9ನೇ ಹೆಸರನ್ನಾಗಿ ಹಾಕಲಾಗಿತ್ತು. ಆಗಲೇ ನಾನು ಕೇಳಿದೆ, ಯಾವನು ಈ ಪಟ್ಟಿ ಮಾಡಿದವನು ಎಂದು?’ ಎಂದು ಸಿಟ್ಟಿನಿಂದಲೇ ಹೇಳಿದರು.
ಬಳಿಕ ಮಾತು ಮುಂದುವರೆಸಿ, ‘ಅಲ್ಲಿ ಯಾರೂ ಗಟ್ಟಿಯಾಗಿ ಏನೂ ಮಾತನಾಡಲಿಲ್ಲ. ಚಿರಂಜೀವಿ ಗಟ್ಟಿಯಾಗಿ ಮಾತನಾಡಿದ್ದಕ್ಕೆ ಜಗನ್ ಬಂದರು ಎಂಬುದು ಸುಳ್ಳು, ನಾನ್ಸೆನ್ಸ್, ಅಲ್ಲಿ ಯಾರೂ ಗಟ್ಟಿಯಾಗಿ ಮಾತನಾಡಲೇ ಇಲ್ಲ. ಯಾರೋ ಗಟ್ಟಿಯಾಗಿ ಮಾತನಾಡಿದರು ಅದಕ್ಕೆ ಜಗನ್ ಬಂದು ಬಿಟ್ಟರು ಎಂಬುದೆಲ್ಲ ಸುಳ್ಳು. ಅಲ್ಲಿ ಯಾರೂ ಸಹ ಗಟ್ಟಿಯಾಗಿ ಮಾತನಾಡಲಿಲ್ಲ’ ಎಂದು ಪರೋಕ್ಷವಾಗಿ ಚಿರಂಜೀವಿ ವಿರುದ್ಧವೇ ಬಾಲಯ್ಯ ಸಿಟ್ಟು ವ್ಯಕ್ತಪಡಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಸಿಟ್ಟಿನಿಂದ ‘ನಾನ್ಸೆನ್ಸ್’ ಎಂದು ಸಹ ಬಾಲಯ್ಯ ಅಂದರು.
ಚಿರಂಜೀವಿ, ಗಟ್ಟಿಯಾಗಿ ಮಾತನಾಡಲಿಲ್ಲ, ಚಿರಂಜೀವಿ ಮಾತಿಗೆ ಹೆದರಿ ಜಗನ್ ಸಭೆಗೆ ಬರಲಿಲ್ಲ, ಆದರೆ ಜಗನ್, ಚಿರಂಜೀವಿಗೆ, ಚಿತ್ರತಂಡಕ್ಕೆ ಅವಮಾನ ಮಾಡಿದ್ದು ನಿಜವೇ ಎಂದು ಬಾಲಕೃಷ್ಣ ಹೇಳಿದ್ದಾರೆ. ಬಾಲಯ್ಯ ಅವರ ಈ ಮಾತುಗಳು, ಚಿರಂಜೀವಿ ಹಾಗೂ ಬಾಲಕೃಷ್ಣ ನಡುವಿನ ವೈಮನಸ್ಯವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ