ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ನಟಿಸಿರುವ ‘ಭೀಮಲಾ ನಾಯಕ್’ ಚಿತ್ರದ ನೂತನ ಹಾಡನ್ನು ಪವನ್ ಕಲ್ಯಾಣ್ 50ನೇ ಜನ್ಮದಿನದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಜಾನಪದ ಸೊಗಡಿನ ಸ್ಪರ್ಶವಿರುವ ಈ ಹಾಡು ಅಭಿಮಾನಿಗಳ ಎದೆಯಲ್ಲಿ ಕಂಪನ ಹುಟ್ಟಿಸಿದ್ದು, ಪವನ್ ಕಲ್ಯಾಣ್ ಖದರ್ಗೆ ಮನ ಸೋತಿದ್ದಾರೆ. ಇದು ಚಿತ್ರದ ಟೈಟಲ್ ಟ್ರ್ಯಾಕ್ ಆಗಿದ್ದು, ಖ್ಯಾತ ಸಂಗೀತ ನಿರ್ದೇಶಕ ತಮನ್.ಎಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ವತಃ ತಮನ್ ಇದಕ್ಕೆ ಹಾಡಿದ್ದು, ಅವರೊಂದಿಗೆ ಶ್ರೀ ಕೃಷ್ಣ, ಪೃಥ್ವಿ ಚಂದ್ರ ಹಾಗೂ ರಾಮ್ ಮಿರಿಯಾಲಾ ದನಿಗೂಡಿಸಿದ್ದಾರೆ. ಗೀತೆಗೆ ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯವನ್ನು ರಚಿಸಿದ್ದಾರೆ.
ಮಲಯಾಳಂ ಸೂಪರ್ ಹಿಟ್ ಚಿತ್ರವಾದ ‘ಅಯ್ಯಪ್ಪನಂ ಕೋಶಿಯುಂ’ ಚಿತ್ರದ ರಿಮೇಕ್ ಆಗಿರುವ ‘ಭೀಮ್ಲಾ ನಾಯಕ್’ ಚಿತ್ರವನ್ನು ಸಾಗರ್.ಕೆ.ಚಂದ್ರ ನಿರ್ದೇಶಿಸುತ್ತಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ಸೂರ್ಯದೇವರ ನಾಗವಂಶಿ ನಿರ್ಮಿಸುತ್ತಿದ್ದಾರೆ. ತ್ರಿವಿಕ್ರಮ್ ಸಂಭಾಷಣೆ ಬರೆಯುತ್ತಿರುವ ಈ ಚಿತ್ರದಲ್ಲಿ, ಪವನ್ ಎದುರು ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌ಗಳು ಮತ್ತು ವೀಡಿಯೋ ತುಣುಕುಗಳು ಚಿತ್ರದ ಮೇಲೆ ನಿರೀಕ್ಷೆಗಳನ್ನು ಹೆಚ್ಚಿಸಿರುವುದಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ದಾಖಲೆಗಳನ್ನು ಸೃಷ್ಟಿಸಿವೆ.
‘ಭೀಮ್ಲಾ ನಾಯಕ್’ ಚಿತ್ರದ ಟೈಟಲ್ ಸಾಂಗ್ ಇಲ್ಲಿದೆ:
‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ ಮಲಯಾಳಂನಲ್ಲಿ ಭರ್ಜರಿ ಹಿಟ್ ಆಗಿತ್ತು. ದಿ.ಸಚಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಹಾಗೂ ಬಿಜು ಮೆನನ್ ಕಾಣಿಸಿಕೊಂಡಿದ್ದರು. ಒಬ್ಬ ಮಾಜಿ ಸೈನಿಕ ಹಾಗೂ ಹಾಲಿ ಪೊಲೀಸ್ ಇನ್ಸ್ಪೆಕ್ಟರ್ ನಡುವೆ ನಡೆಯುವ ಸಂಘರ್ಷದ ಕತೆ ಇದಾಗಿದೆ.
ಪವನ್ ಕಲ್ಯಾಣ್ ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ. ಐತಿಹಾಸಿಕ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ‘ವೀರಮಲ್ಲು’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ 2022ರ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಇದನ್ನೂ ಓದಿ:
Sidharth Shukla Death: ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನ
Vikrant Rona: ವಿಕ್ರಾಂತ್ ರೋಣದ ‘ಡೆಡ್ ಮ್ಯಾನ್ಸ್ ಆಂಥಮ್’ ರಿಲೀಸ್; ಕಿಚ್ಚನ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ
(Bheemla Nayak title song is released on Pawan Kalyan birthday)