ಆಮಿರ್ ಖಾನ್ (Aamir Khan) ನಟನೆಯ ‘3 ಇಡಿಯಟ್ಸ್’, ‘ದಿಲ್ ಚಾಹ್ತಾ ಹೈ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದ ನಟ ಅಖಿಲ್ ಮಿಶ್ರ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಸೆಪ್ಟೆಂಬರ್ 19ರಂದು ತಮ್ಮ ನಿವಾಸದಲ್ಲಿ ಅಡುಗೆ ಮನೆಯಲ್ಲಿ ಟೇಬಲ್ ಹತ್ತಿ ಏನೋ ಕೆಲಸ ಮಾಡುವಾಗ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಅಖಿಲ್ ನಿಧನ ಹೊಂದಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಅಖಿಲ್ ಗೆಳೆಯರೊಬ್ಬರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಂತೆ, ಅಖಿಲ್, ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ನೆರೆ-ಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದರು, ಚಿಕಿತ್ಸೆಗೆ ಸ್ಪಂದಿಸದೇ ಅಖಿಲ್ ಮೃತಪಟ್ಟರು ಎಂದಿದ್ದಾರೆ. ಅಖಿಲ್, ಟೇಬಲ್ ನಿಂದ ಬಿದ್ದ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲವಂತೆ, ಪತ್ನಿ ಸಹ ದೂರದ ಹೈದರಾಬಾದ್ನಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಅಖಿಲ್ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಅವರ ಆಪ್ತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಖಿಲ್ ಮಿಶ್ರಾ ಹಲವು ವರ್ಷಗಳಿಂದಲೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ‘ಡಾನ್’, ‘ಗಾಂಧಿ ಮೈ ಫಾದರ್’, ಆಮಿರ್ ಖಾನ್ ನಟನೆಯ ‘ದಿಲ್ ಚಾಹ್ತಾ ಹೈ’, ‘ವೆಲ್ ಡನ್ ಅಬ್ಬಾ’, ‘ಕಲ್ಕತ್ತಾ ಮೇಲ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘3 ಇಡಿಯಟ್ಸ್’ ಸಿನಿಮಾದಲ್ಲಿ ಅವರು ನಿರ್ವಹಿಸಿದ ಲೈಬ್ರೆರಿಯನ್ ದುಬೆ ಪಾತ್ರ ಬಹಳ ಪ್ರಸಿದ್ಧಿ ಪಡೆದಿತ್ತು. ಸಿನಿಮಾಗಳು ಮಾತ್ರವೇ ಅಲ್ಲದೆ ‘ಶ್ರೀಮಾನ್ ಶ್ರೀಮತಿ’, ‘ಪರ್ದೇಸ್ ಮೇ ಮಿಲಾ ಕೋಯಿ ಅಪ್ನಾ’, ‘ದೋ ದಿಲ್ ಬಂಧೆ ಏಕ್ ಡೊರಿ ಸೇ’, ಇನ್ನೂ ಕೆಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದರು.
ಇದನ್ನೂ ಓದಿ:ಆಮಿರ್ ಖಾನ್-ಅಕ್ಷಯ್ ಕುಮಾರ್ ಒಟ್ಟಾಗಿ ತೆರೆ ಹಂಚಿಕೊಳ್ಳದಿರಲು ಈ ಘಟನೆಯೇ ಕಾರಣ..
2009ರಲ್ಲಿ ಅಖಿಲ್, ಜರ್ಮನ್ ಮೂಲದ ನಟಿ ಸುಜಾನೆ ಬರ್ನರ್ಟ್ ಅವರನ್ನು 2009 ರಲ್ಲಿ ವಿವಾಹವಾಗಿದ್ದರು. ಸುಜಾನೆ ಬರ್ನರ್ಟ್ 2006ರಿಂದ ಹಿಂದಿ ಸಿನಿಮಾ ಹಾಗೂ ಧಾರಾವಾಹಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಕಸೌಟಿ ಜಿಂದಗೀ ಕಿ’, ‘ಜಾನ್ಸಿ ಕೀ ರಾಣಿ’, ‘ಸಿಐಡಿ’, ‘ಅಶೋಕ ಸಾಮ್ರಾಟ್’, ‘ಹಜಾರೋಮೆ ಮೇರಿ ಬೆಹನಾ ಹೈ’, ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಇನ್ನೂ ಹಲವಾರು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಅಖಿಲ್, ಹಠಾತ್ ನಿಧನಕ್ಕೆ ಟಿವಿ ಹಾಗೂ ಸಿನಿಮಾ ಲೋಕದ ಹಲವು ನಟರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಸುಜಾನೆ ಬರ್ನರ್ಟ್, ‘ನನ್ನ ಹೃದಯ ಚೂರಾಗಿದೆ, ನಾನು ನನ್ನ ಅರ್ಧ ಭಾಗವನ್ನು ಕಳೆದುಕೊಂಡಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ