ಸಲ್ಮಾನ್, ಶಾರುಖ್ ಖಾನ್ ಸಾವಿನ ಬಗ್ಗೆ ಭವಿಷ್ಯ, ಜ್ಯೋತಿಷಿ ವಿರುದ್ಧ ಆಕ್ರೋಶ

Shah Rukh Khan: ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್, ಭಾರತೀಯ ಚಿತ್ರರಂಗದ ಬಹುದೊಡ್ಡ ಸ್ಟಾರ್ ನಟರು. ಕೋಟ್ಯಂತರ ಅಭಿಮಾನಿಗಳನ್ನು ಭಾರತ ಮತ್ತು ವಿದೇಶಗಳಲ್ಲಿ ಹೊಂದಿದ್ದಾರೆ. ಇದೀಗ ಜ್ಯೋತಿಷಿ ಒಬ್ಬಾತ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರುಗಳ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದಾನೆ. ಇದೇ ಕಾರಣಕ್ಕೆ ತೀವ್ರ ಟೀಕೆ ಮತ್ತು ನಿಂದನೆಗಳನ್ನು ಎದುರಿಸುತ್ತಿದ್ದಾರೆ.

ಸಲ್ಮಾನ್, ಶಾರುಖ್ ಖಾನ್ ಸಾವಿನ ಬಗ್ಗೆ ಭವಿಷ್ಯ, ಜ್ಯೋತಿಷಿ ವಿರುದ್ಧ ಆಕ್ರೋಶ
Salman Khan Shah Rukh Khan

Updated on: Mar 11, 2025 | 11:13 AM

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್, ಭಾರತೀಯ ಚಿತ್ರರಂಗದ ಟಾಪ್ ಸ್ಟಾರ್​ಗಳಲ್ಲಿ ಪ್ರಮುಖರು. ಈ ಇಬ್ಬರಿಂದಲೇ ಬಾಲಿವುಡ್​ನಲ್ಲಿ ವರ್ಷಕ್ಕೆ ಸಾವಿರಾರು ಕೋಟಿ ಬ್ಯುಸಿನೆಸ್ ಆಗುತ್ತದೆ. ಇಬ್ಬರಿಗೂ ಸಹ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇದೀಗ ಜ್ಯೋತಿಷಿ ಒಬ್ಬಾತ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್​ರ ಸಾವಿನ ಬಗ್ಗೆ ಭವಿಷ್ಯ ನುಡಿದಿದ್ದು, ಭವಿಷ್ಯ ನುಡಿದಿದ್ದಕ್ಕೆ ಖಾನ್​ ದ್ವಯರ ಅಭಿಮಾನಿಗಳು ಜ್ಯೋತಿಷಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಸುಶೀಲ್ ಕುಮಾರ್ ಸಿಂಗ್ ಹೆಸರಿನ ಜ್ಯೋತಿಷಿ ಒಬ್ಬರು, ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಭವಿಷ್ಯ ಹೇಳಿದ್ದಾರೆ. ವಿಡಿಯೋನಲ್ಲಿ ಆ ಜ್ಯೋತಿಷಿ ಇಬ್ಬರು ಖಾನ್​ಗಳ ವೃತ್ತಿಯಲ್ಲಿ ಏಳ್ಗೆ, ಹಣಕಾಸು ಪರಿಸ್ಥಿತಿ, ಜನಪ್ರಿಯತೆ, ಸಲ್ಮಾನ್ ಖಾನ್ ಮದುವೆ, ಶಾರುಖ್ ಖಾನ್ ದಾಂಪತ್ಯ ಕೊನೆಯಲ್ಲಿ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಸಾಯುತ್ತಾರೆ ಎಂದು ಸಹ ಹೇಳಿದ್ದಾರೆ. 2025 ಸಲ್ಮಾನ್ ಹಾಗೂ ಶಾರುಖ್ ಇಬ್ಬರ ಪಾಲಿಗೂ ಸಾಧಾರಣವಾಗಿ ಇರಲಿದೆ. ಆದರೆ ಸಲ್ಮಾನ್ ಖಾನ್ ಪಾಲಿಗೆ 2026, 27 ಮತ್ತು 28 ಅಷ್ಟು ಒಳ್ಳೆಯ ವರ್ಷಗಳಾಗಿರುವುದಿಲ್ಲ ಎಂದು ಜ್ಯೋತಿಷಿ ಹೇಳಿದ್ದಾರೆ. ಅಲ್ಲದೆ ಜ್ಯೋತಿಷಿ ಪ್ರಕಾರ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರುಗಳು ಇಬ್ಬರೂ ಸಹ ತಮ್ಮ 67ನೇ ವಯಸ್ಸಿನಲ್ಲಿ ನಿಧನ ಹೊಂದಲಿದ್ದಾರೆ ಎಂದು ಜ್ಯೋತಿಷಿ ಸುಶೀಲ್ ಕುಮಾರ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

ಸಲ್ಮಾನ್ ಖಾನ್​ ಕೆಲವೇ ತಿಂಗಳಲ್ಲಿ ಒಂದು ಪ್ರಮುಖ ಕಾಯಿಲೆಗೆ ಗುರಿ ಆಗಲಿದ್ದಾರೆ. ಸಲ್ಮಾನ್ ಖಾನ್ ಹಾಗೂ ಶಾರುಖ್ ಇಬ್ಬರೂ ಒಂದೇ ವರ್ಷ ನಿಧನ ಹೊಂದುತ್ತಾರೆ. ಇಬ್ಬರೂ ಸಹ ತಮ್ಮ 67ನೇ ವಯಸ್ಸಿಗೆ ಈ ಭೂಮಿಯನ್ನು ಬಿಟ್ಟು ಹೋಗಲಿದ್ದಾರೆ. ಸಲ್ಮಾನ್ ಖಾನ್ ನಿಧನ ಅನಾರೋಗ್ಯದಿಂದ ಆಗಲಿದೆ, ಅದರಲ್ಲೂ ಸಲ್ಮಾನ್ ಖಾನ್​ರ ಕೊನಯ ದಿನಗಳು ಬಹಳ ಕೆಟ್ಟದಾಗಿ ಇರಲಿವೆ ಎಂದು ಜ್ಯೋತಿಷಿ ಹೇಳಿದ್ದಾರೆ.

ಜ್ಯೋತಿಷಿಯ ಭವಿಷ್ಯಕ್ಕೆ ಬಹಳ ಋಣಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಬ್ಬ ಒಳ್ಳೆಯ ಜ್ಯೋತಿಷಿ ಎಂದಿಗೂ ಸಹ ಯಾವುದೇ ವ್ಯಕ್ತಿಯ ಸಾವು ಯಾವಾಗ ಎಂದು ಹೇಳುವುದಿಲ್ಲ. ಈತ ಸಾವಿನ ಬಗ್ಗೆ ಭವಿಷ್ಯ ಹೇಳುತ್ತಿದ್ದಾನೆಂದರೆ ಈತ ನಕಲಿ ಜ್ಯೋತಿಷಿ ಆಗಿದ್ದಾನೆ ಎಂದು ಹಲವರು ಟೀಕಿಸಿದ್ದಾರೆ. ಇನ್ನು ಕೆಲವರು ಈತ ಉದ್ದೇಶಪೂರ್ವಕವಾಗಿ, ಸಲ್ಮಾನ್, ಶಾರುಖ್ ಅಭಿಮಾನಿಗಳನ್ನು ಕೆರಳಿಸಲೆಂದೇ ಹೀಗೆ ಸುಳ್ಳು ಭವಿಷ್ಯ ಹೇಳಿದ್ದಾನೆ ಎಂದಿದ್ದಾರೆ. ಇನ್ನು ಕೆಲವರು ಈ ವ್ಯಕ್ತಿ ಪ್ರಚಾರದ ಹುಚ್ಚಿನಿಂದ ಹೀಗೆ ಸೆಲೆಬ್ರಿಟಿಗಳ ಭವಿಷ್ಯ ಹೇಳಿದ್ದಾನೆ ಎಂದು ಆಡಿಕೊಂಡಿದ್ದಾರೆ.

ಸಿನಿಮಾ ಸೆಲೆಬ್ರಿಟಿಗಳ ಭವಿಷ್ಯ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ತೆಲುಗಿನ ಸೆಲೆಬ್ರಿಟಿಗಳ ಬಗ್ಗೆ ವೇಣುಸ್ವಾಮಿ ಎಂಬಾತ ಸತತವಾಗಿ ಭವಿಷ್ಯಗಳನ್ನು ಹೇಳಿ ವೈರಲ್ ಆಗಿದ್ದ. ಕೊನೆಗೆ ಆತನ ಭವಿಷ್ಯ ಸುಳ್ಳಾದ ಮೇಲೆ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಆತನ ವಿರುದ್ಧ ದಾಳಿ ಮಾಡಿದರು. ಬಳಿಕ ತಾನು ಇನ್ನು ಮುಂದೆ ಸಾಮಾಜಿಕ ಜಾಲತಾಣದಲ್ಲಿ ಭವಿಷ್ಯ ಹೇಳುವುದಿಲ್ಲ ಎಂದು ಕ್ಷಮೆ ಯಾಚಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ