ಸಿನಿಮೀಯ ರೀತಿಯ ಘಟನೆ: ನಟನೆ ಮಾಡಲು ಬಂದಿದ್ದ 17 ಮಕ್ಕಳ ಅಪಹರಣ

Bollywood news: ಸಿನಿಮಗಳಲ್ಲಿ ದುರುಳರು ಮಕ್ಕಳನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಅದರಂತೆ ಇಲ್ಲೊಬ್ಬ ಸಿನಿಮಾ ಸ್ಟುಡಿಯೋನಲ್ಲಿಯೇ ಮಕ್ಕಳನ್ನು ಅಪಹರಿಸಿ ಪೊಲಿಸರ ಮುಂದೆ ತನ್ನ ಬೇಡಿಕೆಗಳನ್ನು ಇರಿಸಿದ್ದ. ಆತ ಯಾರು? ಆತನ ಬೇಡಿಕೆಗಳು ಏನಾಗಿದ್ದವು? ಬಂಧನ ಆಗಿದ್ದು ಹೇಗೆ? ಎಲ್ಲ ಮಾಹಿತಿ ಇಲ್ಲಿದೆ.

ಸಿನಿಮೀಯ ರೀತಿಯ ಘಟನೆ: ನಟನೆ ಮಾಡಲು ಬಂದಿದ್ದ 17 ಮಕ್ಕಳ ಅಪಹರಣ
Rohit Arya

Updated on: Oct 30, 2025 | 5:02 PM

ಸಿನಿಮಾಗಳಲ್ಲಿ ಮಕ್ಕಳನ್ನು ಅಪಹರಣ ಮಾಡಿ ದುರುಳರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ನೋಡಿರುತ್ತೀವಿ, ಆದರೆ ಮುಂಬೈನಲ್ಲಿ ಸಿನಿಮಾ ಸ್ಟುಡಿಯೋನಲ್ಲಿಯೇ ವ್ಯಕ್ತಿಯೊಬ್ಬ ಹಾಡ ಹಗಲೆ 17 ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾನೆ. ಆದರೆ ಮುಂಬೈ ಪೊಲೀಸರ ಸಮಯೋಚಿತ ಕಾರ್ಯದಿಂದ ಎಲ್ಲ ಮಕ್ಕಳು ಸುರಕ್ಷಿತವಾಗಿದ್ದು, ಅಪಹರಣಕಾರನನ್ನು ಸಹ ಬಂಧಿಸಲಾಗಿದೆ. ಈ ಆತಂಕಕಾರಿ ಘಟನೆ ಇಂದೇ (ಅಕ್ಟೋಬರ್ 30) ಮಧ್ಯಾಹ್ನ ನಡೆದಿದೆ.

ಮುಂಬೈನ ಪವಾಯಿಯಲ್ಲಿರುವ ಆರ್​​ಎ ಸ್ಟುಡಿಯೋನಲ್ಲಿ ನಟನೆ ಕಲಿಯಲು ತರಗತಿಗೆಂದು ಬಂದಿದ್ದ 17 ಮಕ್ಕಳನ್ನು ರೋಹಿತ್ ಆರ್ಯ ಹೆಸರಿನ ವ್ಯಕ್ತಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ. ಮಕ್ಕಳು, ಸ್ಟುಡಿಯೋದ ಕಿಟಕಿ ಗಾಜುಗಳಿಂದ ಹೊರಗೆ ಕೈಬೀಸುತ್ತಾ ಸಹಾಯಕ್ಕೆ ಅಂಗಲಾಚಿದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ರೋಹಿತ್ ಆರ್ಯ ಜೊತೆಗೆ ಮಾತನಾಡಿ ಎಲ್ಲ ಮಕ್ಕಳನ್ನು ಬಿಡಿಸಿದ್ದಾರೆ ಮತ್ತು ರೋಹಿತ್ ಅನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಆಟೋ ಓಡಿಸುತ್ತಿರುವ ಈ ಬಾಲಿವುಡ್ ನಟಿ ಯಾರು ಗೊತ್ತಾಯ್ತ?

ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ರೋಹಿತ್ ಆರ್ಯ ವಿಡಿಯೋ ಒಂದನ್ನು ಸಹ ಬಿಡುಗಡೆ ಮಾಡಿದ್ದ. ನನಗೆ ಯಾವುದೇ ಹಣ ಬೇಡ, ನನ್ನ ಬೇಡಿಕೆಗಳು ಸ್ವಾರ್ಥ ಬೇಡಿಕೆಗಳು ಅಲ್ಲ. ನನ್ನದು ಒಳ್ಳೆಯ ಬೇಡಿಕೆಗಳು, ನನಗೆ ಕೆಲವು ವ್ಯಕ್ತಿಗಳೊಟ್ಟಿಗೆ ಮಾತನಾಡಲಿಕ್ಕಿದೆ, ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಒಂದು ವೇಳೆ ಇದಕ್ಕೆ ಅವಕಾಶ ಮಾಡಿಕೊಡದೇ ಇದ್ದಲ್ಲಿ ಈ ಮಕ್ಕಳಿಗೆ ಹಾನಿ ಆಗಲಿದೆ, ನಾನೂ ಸಹ ಸಾಯಲಿದ್ದೇನೆ. ಎಲ್ಲ ಯೋಚನೆ ಮಾಡಿಯೇ ಮಕ್ಕಳನ್ನು ನಾನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದೇನೆ. ಹಾಗಾಗಿ ನಾನು ಹೇಳಿದಂತೆ ಮಾಡಿ’ ಎಂದು ರೋಹಿತ್ ಆರ್ಯ ವಿಡಿಯೋನಲ್ಲಿ ಹೇಳಿದ್ದ.

ರೋಹಿತ್ ಆರ್ಯ, ಆರ್​​ಎ ಸ್ಟುಡಿಯೋದ ಸಿಬ್ಬಂದಿ ಆಗಿದ್ದ ಎನ್ನಲಾಗುತ್ತಿದೆ. ಮಕ್ಕಳಿಗೆ ನಟನೆಯ ಕುರಿತು ತರಬೇತಿಗಳನ್ನು ತೆಗೆದುಕೊಳ್ಳುತ್ತಿದ್ದ. ಸ್ವತಃ ಯೂಟ್ಯೂಬ್ ಚಾನೆಲ್ ಅನ್ನು ಸಹ ಒಂದಿದ್ದ. ಇಂದು ಆತ ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಸ್ಪಷ್ಟವಾಗಿ, ಗೊಂದಲ ಇಲ್ಲದೆ, ಆತಂಕ ಇಲ್ಲದೆ ಮಾತನಾಡಿದ್ದಾರೆ. ಇದೀಗ ರೋಹಿತ್ ಆರ್ಯನನ್ನು ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Thu, 30 October 25