ಬಾಡಿಗೆ ಮನೆ ಪಡೆದ ಆಮಿರ್ ಖಾನ್: ತಿಂಗಳಿಗೆ 25 ಲಕ್ಷ ರೂಪಾಯಿ ರೆಂಟ್

Aamir Khan movies: ನಟ ಆಮಿರ್ ಖಾನ್ ಬಾಲಿವುಡ್​ನ ಇನ್ನಿಬ್ಬರು ಖಾನ್​ಗಳಷ್ಟೆ ಶ್ರೀಮಂತರು. ನಟನೆಯ ಜೊತೆಗೆ ಯಶಸ್ವಿ ನಿರ್ಮಾಣ ಸಂಸ್ಥೆಯನ್ನೂ ಹೊಂದಿದ್ದಾರೆ. ಆಮಿರ್ ಖಾನ್ ಮುಂಬೈನಲ್ಲಿಯೇ ಸಾಕಷ್ಟು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಸಹ ಮಾಡಿದ್ದಾರೆ. ಒಳ್ಳೆಯ ಐಶಾರಾಮಿ ಮನೆಗಳು ಅವರಿಗಿವೆ. ಆದರೆ ಇದೀಗ ಅವರು ತಮ್ಮ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದಾರೆ.

ಬಾಡಿಗೆ ಮನೆ ಪಡೆದ ಆಮಿರ್ ಖಾನ್: ತಿಂಗಳಿಗೆ 25 ಲಕ್ಷ ರೂಪಾಯಿ ರೆಂಟ್
Aamir Khan
Updated By: ರಾಜೇಶ್ ದುಗ್ಗುಮನೆ

Updated on: Aug 06, 2025 | 7:44 AM

ಬಾಲಿವುಡ್​ನ (Bollywood) ಕೆಲ ನಟ-ನಟಿಯರು ತುಂಬಾನೇ ದೊಡ್ಡ ಶ್ರೀಮಂತರಾಗಿರುತ್ತಾರೆ. ಅವರು ಮನೆಯ ಬಗ್ಗೆ, ತಮ್ಮ ಕಾರಿನ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿರುತ್ತಾರೆ. ಇವುಗಳು ಯಾವಾಗಲೂ ಸರಿಯಾಗಿ ಇರಬೇಕು ಎಂದು ಬಯಸುತ್ತಾರೆ. ಈ ಕಾರಣಕ್ಕೆ ಎಷ್ಟು ಹಣ ಹೂಡಲು ಕೂಡ ಅವರು ರೆಡಿ ಆಗಿರುತ್ತಾರೆ. ಇದಕ್ಕೆ ಹೊಸ ಉದಾಹರಣೆ ಆಮಿರ್ ಖಾನ್ ಅವರು. ಅವರು ಹೊಸ ಮನೆ ಬಾಡಿಗೆ ಪಡೆದಿದ್ದು, 24.5 ಲಕ್ಷ ರೂಪಾಯಿ ತಿಂಗಳ ಬಾಡಿಗೆ ಪಾವತಿಸುತ್ತಿದ್ದಾರೆ.

ಆಮಿರ್ ಖಾನ್ ಅವರು ಮುಂಬೈನ ಬಾಂದ್ರಾ ವೆಸ್ಟ್​​ನಲ್ಲಿರೋ ಪಾಲಿ ಹಿಲ್ ಭಾಗದಲ್ಲಿ ಮನೆಯನ್ನು ಬಾಡಿಗೆ ಪಡೆದಿದ್ದಾರೆ. ಈ ಮನೆಯ ಬಾಡಿಗೆ ಸುಮಾರು 25 ಲಕ್ಷ ರೂಪಾಯಿ. ಅಂದರೆ ನಾಲ್ಕು ತಿಂಗಳಿಗೆ ಒಂದು ಕೋಟಿ ರೂಪಾಯಿ ಹಣವನ್ನು ಅವರಿಗೆ ಬಾಡಿಗೆಗೆ ವ್ಯಯಿಸಲಿದ್ದಾರೆ. ಅವರ ಈಗಿನ ಮನೆ ವಿರ್ಗೋ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿಯ ರಿನೋವೇಶನ್ ಕೆಲಸ ನಡೆಯುತ್ತಿದೆ. ಹೀಗಾಗಿ, ಅವರು ತಾತ್ಕಾಲಿಕವಾಗಿ ಶಿಫ್ಟ್ ಆಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆಮಿರ್ ಖಾನ್ ಅವರು ತಾತ್ಕಾಲಿಕವಾಗಿ ವಿರ್ಗೋ ಸೊಸೈಟಿಯನ್ನು ಖಾಲಿ ಮಾಡುತ್ತಿದ್ದಾರೆ. ಈ ಅಪಾರ್ಟ್​ಮೆಂಟ್​ನಲ್ಲಿ ಅವರು 12 ಫ್ಲ್ಯಾಟ್​ಗಳನ್ನು ಹೊಂದಿದ್ದಾರೆ ಎಂದು ವರದಿ ಆಗಿದೆ. ಈಗ ಅವರು ಲಕ್ಷುರಿ ಸೀ ಫೇಸಿಂಗ್ ಮನೆಗೆ ಶಿಫ್ಟ್ ಆಗುತ್ತಿದ್ದಾರೆ.

ಆಮಿರ್ ಖಾನ್ ಹೊಸದಾಗಿ ಬಾಡಿಗೆ ಪಡೆದಿರುವ ಮನೆ ಸಾಕಷ್ಟು ಐಷಾರಾಮಿ ಆಗಿದೆ. ಶಾರುಖ್ ಖಾನ್ ಕೂಡ ಒಂದು ತಾತ್ಕಾಲಿಕ ಮನೆ ಪಡೆದುಕೊಂಡಿದ್ದು, ಆಮಿರ್ ಮನೆಯಿಂದ ಕೇವಲ 750 ಮೀಟರ್ ದೂರದಲ್ಲಿ ಇದೆ.

ಇದನ್ನೂ ಓದಿ:ರಜನಿಕಾಂತ್ ಕಾಲಿಗೆ ಬೀಳಲು ಬಂದ ಆಮಿರ್ ಖಾನ್; ತಡೆದು ನಿಲ್ಲಿಸಿದ ಸೂಪರ್ ಸ್ಟಾರ್

ಆಮಿರ್ ಖಾನ್ ಅವರು ಪಡೆದಿರುವ ಮನೆಯ ಲೀಸ್ ಐದು ವರ್ಷ ಇದೆ. ಮೇ 2025ರಿಂದ 2030ರವರೆಗೆ ಆಮಿರ್ ಇಲ್ಲಿ ವಾಸಿಸಬಹುದು. ಇದಕ್ಕೆ 4 ಲಕ್ಷ ಸ್ಟ್ಯಾಂಪ್​ಡ್ಯೂಟಿ ಪಾವತಿಸಲಾಗಿದೆ. 1.46 ಕೋಟಿ ರೂಪಾಯಿ ಡಿಪಾಸಿಟ್ ಹಣ ನೀಡಲಾಗಿದೆ. ವರ್ಷಕ್ಕೆ ಐದು ಪರ್ಸೆಂಟ್ ಬಾಡಿಗೆ ಹೆಚ್ಚಲಿದೆ.

ಆಮಿರ್ ಖಾನ್ ಅವರು ‘ಸಿತಾರೇ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಈ ಸಿನಿಮಾನ ಯೂಟ್ಯೂಬ್​ನಲ್ಲಿ 100 ರೂಪಾಯಿಗೆ ವೀಕ್ಷಣೆಗೆ ಅವಕಾಶ ನೀಡೋದಾಗಿ ಆಮಿರ್ ಖಾನ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:05 pm, Tue, 5 August 25