
ಇತ್ತೀಚೆಗಷ್ಟೆ ಖ್ಯಾತ ನಟಿ ಐಶ್ವರ್ಯಾ ರೈ ತಮ್ಮ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅದರ ಬೆನ್ನಲ್ಲೆ ಇದೀಗ ಅವರ ಪತಿ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸಹ ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಖ್ಯಾತ ನಟ, ನಟಿಯರ ನಕಲು ಮಾಡುವುದು, ಅವರ ಚಿತ್ರಗಳು, ಅವರ ಧ್ವನಿ, ವ್ಯಕ್ತಿತ್ವವನ್ನು ಪ್ರಚಾರಕ್ಕಾಗಿ, ಜಾಹೀರಾತಿಗಾಗಿ ಇನ್ನೂ ಕೆಲವು ಕಾರಣಗಳಿಗಾಗಿ ಬಳಸಲಾಗುತ್ತದೆ. ಆದರೆ ಇದು ಮೂಲ ವ್ಯಕ್ತಿಯ ವ್ಯಕ್ತಿತ್ವದ ಹಕ್ಕಿನ ಉಲ್ಲಂಘನೆ ಆಗಿದ್ದು, ಇದೀಗ ಹಲವು ನಟ-ನಟಿಯರು ಒಬ್ಬರಾದ ಮೇಲೆ ಒಬ್ಬರಂತೆ ತಮ್ಮ ವ್ಯಕ್ತಿತ್ವ ಹಕ್ಕಿನ ರಕ್ಷಣೆಗೆ ಮುಂದಾಗಿದ್ದಾರೆ.
ನಟ ಅಮಿತಾಬ್ ಬಚ್ಚನ್ ಅವರ ಧ್ವನಿಯ ನಕಲನ್ನು ಅನುಮತಿ ಇಲ್ಲದೆ ಜಾಹೀರಾತುಗಳಿಗೆ ಬಳಸುವುದು, ಅಮಿತಾಬ್ ಬಚ್ಚನ್ರಂತೆ ಉಡುಗೆ, ಮೇಕಪ್ ಧರಿಸಿ ಶೋ ಮಾಡುವುದು ಇವೆಲ್ಲವೂ ವ್ಯಕ್ತಿತ್ವ ಹಕ್ಕಿನ ಉಲ್ಲಂಘನೆ ಆಗಿದ್ದು, ಇವುಗಳ ವಿರುದ್ಧ ಅಮಿತಾಬ್ ಬಚ್ಚನ್ ನ್ಯಾಯಾಲಯದ ಮೂಲಕ ರಕ್ಷಣೆ ಪಡೆದಿದ್ದಾರೆ. ಇತ್ತೀಚೆಗೆ ನಟಿ ಐಶ್ವರ್ಯಾ ರೈ ಸಹ ದೆಹಲಿ ಹೈಕೋರ್ಟ್ ಮೊರೆ ಹೋಗಿ ತಮ್ಮ ವ್ಯಕ್ತಿತ್ವ ರಕ್ಷಣೆಗೆ ಅರ್ಜಿ ಹಾಕಿದ್ದರು. ಅದರಂತೆ ಈಗ ಅಭಿಷೇಕ್ ಬಚ್ಚನ್ ಸಹ ವ್ಯಕ್ತಿತ್ವ ರಕ್ಷಣೆಗಾಗಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:ಆರಾಧ್ಯಾ ವಿಚಾರದಲ್ಲಿ ಟೀಕೆ ಎದುರಿಸಿದ ಐಶ್ವರ್ಯಾ ರೈ
ಇದೀಗ ಅಭಿಷೇಕ್ ಬಚ್ಚನ್ ಅವರ ರೂಪ, ಕಂಠ, ಹೆಸರು, ಹಾವ-ಭಾವದ ನಕಲುಗಳನ್ನು ಯಾರೂ ಸಹ ಅನುಮತಿ ಇಲ್ಲದೆ ಬಳಸುವಂತಿಲ್ಲ. ಅಭಿಷೇಕ್ ಬಚ್ಚನ್ ಅವರು ‘ಬಾಲಿವುಡ್ ಟಿ-ಶಾಪ್’ ಹೆಸರಿನ ವೆಬ್ಸೈಟ್ ಒಂದರ ಮೇಲೆ ದಾವೆ ಹೂಡಿದ್ದು ತಮ್ಮ ಅನುಮತಿ ಇಲ್ಲದೆ, ತಮ್ಮ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಟಿ-ಶರ್ಟ್ಗಳ ಮೇಲೆ, ಕಾಫಿ ಕಪ್ಗಳ ಮೇಲೆ ಇನ್ನೂ ಹಲವೆಡೆ ತಮ್ಮ ಚಿತ್ರಗಳನ್ನು ಅನುಮತಿ ಇಲ್ಲದೆ ಬಳಸಲಾಗಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಮಾತ್ರವಲ್ಲದೆ, ತಮ್ಮ ಅನುಮತಿ ರಹಿತವಾಗಿ ತಮ್ಮ ಹೆಸರು, ರೂಪ, ವ್ಯಕ್ತಿತ್ವ, ಕಂಠಗಳನ್ನು ಬಳಸಿರುವ ವೆಬ್ಸೈಟ್ಗಳನ್ನು, ಯೂಟ್ಯೂಬ್ ವಿಡಿಯೋಗಳನ್ನು ತೆಗೆಯುವಂತೆ ಆದೇಶ ನೀಡುವಂತೆ ಅವರು ನ್ಯಾಯಾಲಯದ ಬಳಿ ಮನವಿ ಮಾಡಿದ್ದಾರೆ. ಐಶ್ವರ್ಯಾರೈ ವರ್ಲ್ಡ್ ಎಂಬ ವೆಬ್ಸೈಟ್ ವಿರುದ್ಧ ನಟಿ ಐಶ್ವರ್ಯಾ ರೈ ದೂರು ಸಲ್ಲಿಸಿದ್ದರು, ತಮ್ಮ ವ್ಯಕ್ತಿತ್ವ ಹಕ್ಕಿನ ಉಲ್ಲಂಘನೆ ಆಗಿದೆ ಎಂದು ಐಶ್ವರ್ಯಾ ಆರೋಪಿಸಿದ್ದರು. ಇದೀಗ ಅಭಿಷೇಕ್ ಸಹ ಇದೇ ರೀತಿಯ ಆರೋಪವನ್ನು ಕೆಲ ವೆಬ್ ಸೈಟ್ಗಳ ವಿರುದ್ಧ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ